More

    ಬುಧವಾರದ ಸಂತೆ, ವಾಹನ ಸವಾರರಿಗೆ ಚಿಂತೆ

    ಕುಮಟಾ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಬುಧವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಖ್ಯೆ ಬಹಳ ಹೆಚ್ಚಾಗಿದ್ದರಿಂದ ಸಂತೆಕಟ್ಟೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲುಗಡೆಗೂ ಜಾಗ ಬಿಡದೆ ವ್ಯಾಪಾರ ನಡೆದಿದೆ.

    ಎಪಿಎಂಸಿ ಆವಾರದಲ್ಲಿ ಒಂದೂವರೆ ವರ್ಷದ ಹಿಂದೆ ನಿರ್ವಿುಸಲಾದ ಸಂತೆಕಟ್ಟೆಯಲ್ಲಿ 200ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸ್ಥಳಾವಕಾಶ ಇದೆ. ಲಾಕ್ ಡೌನ್ ತೆರವಿನ ಬಳಿಕ ತಿಂಗಳ ಹಿಂದಷ್ಟೇ ಸಂತೆ ಪುನರಾರಂಭವಾಗಿದೆ. ವ್ಯಾಪಾರಕ್ಕೆ ಬರುವವರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ಸಂತೆಯ ಆರಂಭದಿಂದಲೂ ಸಂತೆಕಟ್ಟೆಯ ಕೆಳಗಿನ ರಸ್ತೆಯ ಒಂದು ಬದಿಗೆ ಮಾತ್ರ ತರಕಾರಿಯೇತರ ವ್ಯಾಪಾರ ನಡೆಸಲು ಅನುಮತಿಸಲಾಗಿದೆ. ತರಕಾರಿ ಮಾರಾಟವನ್ನು ಕಡ್ಡಾಯವಾಗಿ ಸಂತೆಕಟ್ಟೆಯೊಳಗೆ ನಡೆಸುವಂತೆ ಈ ಹಿಂದೆಯೇ ತಿಳಿಸಲಾಗಿತ್ತು.

    ಆದರೆ, ಬುಧವಾರ ವ್ಯಾಪಾರಿಗಳ ಸಂಖ್ಯೆ ಅಂದಾಜು 400ಕ್ಕೂ ಹೆಚ್ಚಾಗಿದ್ದರಿಂದ ಎಪಿಎಂಸಿ ಕಾರ್ಯಾಲಯದವರೆಗೂ ತರಕಾರಿ, ಹಣ್ಣು, ಮೀನು ಸಹಿತ ಎಲ್ಲ ಬಗೆಯ ಸಾಮಗ್ರಿಗಳ ಮಾರಾಟ ನಡೆದಿತ್ತು. ಒಣಮೀನು ಮಾರಾಟಕ್ಕೆ ಅವಕಾಶವಿಲ್ಲದಿದ್ದರೂ ರಸ್ತೆಬದಿಯಲ್ಲೇ ಪ್ಲಾಸ್ಟಿಕ್ ಹಾಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ವ್ಯಾಪಾರಿಗಳು ಮಾಲು ತಂದ ದೊಡ್ಡ ವಾಹನವನ್ನು ಕೂಡ ಸಂತೆ ರಸ್ತೆಯೊಳಗೆ ನಿಲ್ಲಿಸಿಕೊಂಡು ಅದಕ್ಕೇ ಟೆಂಟ್ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಬೈಕ್ ನಿಲುಗಡೆ ಜಾಗಕ್ಕಾಗಿ ಪರದಾಡಬೇಕಿದೆ. ರಸ್ತೆ ಇಕ್ಕಟ್ಟಾಗಿದ್ದು, ರಿಕ್ಷಾ ಸಾಗುವುದೂ ಕಷ್ಟ. ಹೀಗಾಗಿ ವ್ಯಾಪಾರಿಗಳು ಹಾಗೂ ವಾಹನ ಸವಾರರ ನಡುವೆ ವಾಗ್ವಾದ ಸಾಮಾನ್ಯ ಎಂಬಂತಾಗಿದೆ.

    ಸಂತೆ ವ್ಯಾಪಾರದವರು ಯಾರ ಮಾತೂ ಕೇಳುತ್ತಿಲ್ಲ. ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದು, ಮಧ್ಯಾಹ್ನ ಮತ್ತು ಸಂಜೆ ಸಂತೆಕಟ್ಟೆ ಮುಂದಿನ ರಸ್ತೆ ಕಿಕ್ಕಿರಿದು ಹೋಗುತ್ತಿದೆ. ಒಬ್ಬ ಪೊಲೀಸ್ ಕೂಡ ಇರುವುದಿಲ್ಲ. ಜನಜಂಗುಳಿಯ ಲಾಭ ಪಡೆದು ಕಳ್ಳರ ಕೈಚಳಕವೂ ಹೆಚ್ಚುತ್ತಿದೆ. ಸಂತೆಗೆ ಶಿಸ್ತು ತರಬೇಕಾದ ಅಗತ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

    ಸಂತೆ ರಸ್ತೆ ನಮ್ಮದಾದರೂ ಅಲ್ಲಿ ವ್ಯಾಪಾರ ನಡೆಸುವವರ ಬಗ್ಗೆ ನಾವೇನೂ ಮಾಡಲಾಗದು. ಸಂತೆಯ ಮರುದಿನ ಕಸ ತೆರವು ಮಾತ್ರ ನಮ್ಮ ಜವಾಬ್ದಾರಿ.
    | ಸುರೇಶ ಎಂ.ಕೆ., ಪುರಸಭೆ ಮುಖ್ಯಾಧಿಕಾರಿ

    ಸಂತೆಯಲ್ಲಿ ವ್ಯಾಪಾರ, ವಾಹನ ನಿಲುಗಡೆ ಮುಂತಾದ ಶಿಸ್ತನ್ನು ಪೊಲೀಸರ ಸಹಕಾರವಿಲ್ಲದೆ ಸರಿಪಡಿಸಲಾಗದು. ವ್ಯಾಪಾರಿಗಳು ಎಪಿಎಂಸಿ ಸಿಬ್ಬಂದಿ ಮಾತು ಕೇಳುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಮುಂದಿನ ಬುಧವಾರದ ಸಂತೆಯಲ್ಲಿ ಕಟ್ಟುನಿಟ್ಟಾಗಿ ಶಿಸ್ತು ತರಲು ಪ್ರಯತ್ನಿಸುತ್ತೇವೆ.
    | ಅರವಿಂದ ಪೈ ಕುಮಟಾ ಎಪಿಎಂಸಿ ವರ್ತಕರ ಪ್ರತಿನಿಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts