More

    ಬೀದಿ ನಾಯಿ ಕಡಿತಕ್ಕೆ ಬಾಲಕ ಬಲಿ

    ಚಿತ್ರದುರ್ಗ: ನಾಯಿ ದಾಳಿಯಿಂದ ವಿಪರೀತ ಗಾಯಗೊಂಡು ಚಿಕಿತ್ಸೆ ಪಡೆದರೂ ಗುಣವಾಗದೇ ಬಾಲಕನೊಬ್ಬ ಕೊನೆಯುಸಿರೆಳೆದು ಮೃತಪಟ್ಟ ಹೃದಯ ವಿದ್ರಾವಕ ದುರ್ಘಟನೆ ನಗರದ ಹೊರವಲಯದ ಮೆದೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇದೇ ಗ್ರಾಮದ ರಾಮು, ಲಕ್ಷ್ಮೀದೇವಿ ದಂಪತಿಯ ಪುತ್ರ, ಐದನೇ ತರಗತಿ ವಿದ್ಯಾರ್ಥಿ ಆರ್.ತರುಣ್ (11) ಮೃತ ದುರ್ದೈವಿ.

    ಘಟನೆ ಹಿನ್ನೆಲೆ: ಬಾಲಕ ಶೌಚಗೃಹಕ್ಕೆಂದು ನ. 7ರಂದು ಮನೆಯ ಹಿಂಬಂದಿ ತೆರಳಿದ್ದ ವೇಳೆ ಬೀದಿ ನಾಯಿಯೊಂದು ಕಡಿದಿತ್ತು. ಇದಾದ ನಂತರ 40 ದಿನದಲ್ಲಿ ಆಗಿಂದಾಗ್ಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಲೆದರೂ ಸಂಪೂರ್ಣ ಗುಣವಾಗಲಿಲ್ಲ. ಶನಿವಾರ ಮೃತಪಟ್ಟಿದ್ದು, ಬಾಲಕನ ಶವ ಗ್ರಾಮ ಪ್ರವೇಶಿಸಿದ ವೇಳೆ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಯಾವ ಪಾಲಕರಿಗೂ ಈ ಪರಿಸ್ಥಿತಿ ಮರುಕಳಿಸಬಾರದೆಂದು ದುಃಖದಲ್ಲಿ ಮುಳುಗಿದರು.

    ಮನಕಲಕುವ ಈ ಘಟನೆ ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗುವಂತೆ ಮಾಡಿತು. ದುರ್ಮರಣಕ್ಕೆ ತುತ್ತಾದ ಬಾಲಕನ ಅಂತ್ಯಕ್ರಿಯೆ ಭಾನುವಾರ ನಡೆದ ವೇಳೆ ಅನೇಕರು ಕಂಬನಿ ಮಿಡಿದರು.

    ಚಿಕಿತ್ಸೆಗಾಗಿ ಮೊದಲು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ನಾಲ್ಕೈದು ಚುಚ್ಚು ಮದ್ದು ಕೂಡ ಹಾಕಲಾಗಿತ್ತು. ಜ್ವರ ಬಿಡದ ಕಾರಣ ವೈದ್ಯರ ಶಿಫಾರಸು ಮೇರೆಗೆ ಪಾಲಕರು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ತರುಣ್ ಸ್ವಲ್ಪ ಚೇತರಿಕೆ ಕಂಡಿದ್ದ.

    ಚಿಕ್ಕಪ್ಪನೊಂದಿಗೆ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಗೂ ಬಾಲಕ ಹೋಗಿದ್ದ. ಅಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಯ ವೈದ್ಯರು ನಾಯಿ ಕಡಿತದ ಸೋಂಕು ದೇಹ ಆವರಿಸುತ್ತಿದೆ. ಬೇರೆಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು ಎಂಬ ಮಾಹಿತಿ ಇದೆ.

    ನಂತರ ಮಣಿಪಾಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ 15 ದಿನಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವೈದ್ಯರು ಸ್ವಲ್ಪ ಚೇತರಿಕೆ ಕಾಣುತ್ತಲೇ ಇದ್ದಾನೆ ಎಂದು ಕುಟುಂಬಸ್ಥರಲ್ಲಿ ಹೇಳುತ್ತಲೇ ಇದ್ದರು. ಸೋಂಕು ಮೆದುಳಿಗೆ ತಲುಪಿದ್ದು, ಬದುಕುಳಿಯುವುದು ಅಸಾಧ್ಯವೆಂದು ಹೇಳಿ, ಶನಿವಾರ ಮೃತಪಟ್ಟಿರುವುದಾಗಿ ತಿಳಿಸಿದರು. ಇದರಿಂದ ಮರಳಿ ಬರುವ ಆಸೆಯಲ್ಲಿದ್ದ ಕುಟುಂಬಕ್ಕೆ ಸಹಿಸಲಾಗದ ನೋವುಂಟಾಗಿದೆ ಎಂದು ರಾಮು ಅವರ ಅಣ್ಣನ ಮಗ ಕೆ.ಶ್ರೀನಿವಾಸ್ ಭಾವುಕರಾದರು.

    ಐದನೇ ಬಾಲಕ: ತರುಣ್‌ಗೆ ಕಡಿಯುವ ಮುನ್ನ ಸತತ ನಾಲ್ಕು ದಿನದಿಂದಲೂ ಒಬ್ಬೊಬ್ಬರಿಗೆ ಇದೇ ನಾಯಿ ಕಡಿದಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿತ್ತು.

    ಸಂತಾನಹರಣ, ಕಡಿವಾಣವೂ ಇಲ್ಲ: ನಗರ, ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚುತ್ತಲೇ ಇದೆ. ಆಗಿಂದಾಗ್ಗೆ ಆಟವಾಡುವ, ನಡೆದುಕೊಂಡು ಹೋಗುತ್ತಿರುವ ಮಕ್ಕಳ ಮೇಲೆರಗಿ ದಾಳಿ ಮಾಡುತ್ತಲೇ ಇವೆ. ಕೆಲವೊಮ್ಮೆ ಮೃತಪಟ್ಟಿರುವ ಘಟನೆಗಳು ನಡೆದಿವೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ನಾಗರಿಕರು ಹಿಡಿ ಶಾಪ ಹಾಕುತ್ತಿರುವುದು ಮುಂದುವರೆದಿದೆ. ಸಂತಾನಹರಣ, ಕಡಿವಾಣವೂ ಇಲ್ಲ ಎಂದು ಸ್ಥಳೀಯರಾದ ಮಂಜುನಾಥ್, ಮುರಳಿ ಆಕ್ರೋಶ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts