More

    ಬೀದಿಬದಿ ಗೂಡಂಗಡಿಗಳ ತೆರವಿಗೆ ಮಹಿಳಾ ಸಮಾಜ ಆಗ್ರಹ; ಪ್ರತಿಭಟನೆ

    ಸಾಗರ: ನಗರದ ಪ್ರಧಾನ ಅಂಚೆ ಕಚೇರಿ ಎದುರು ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿರುವ ನಗರಸಭೆ ಕ್ರಮ ಖಂಡಿಸಿ ಸಾಗರ ಟೌನ್ ಮಹಿಳಾ ಸಮಾಜದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬೆಂಬಲ ವ್ಯಕ್ತಪಡಿಸಿದರು.
    ಸಾಗರ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು ಮಾತನಾಡಿ, ನಮ್ಮ ಸಮಾಜದ ಕಾಂಪೌಂಡ್ ಎದುರು ಚರಂಡಿಗಳ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಬೀದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಾಗರಿಕರಿಗೂ ಸಮಸ್ಯೆಯಾಗುತ್ತದೆ. ನಾವು ಅನೇಕ ತರಬೇತಿ ಶಿಬಿರ ನಡೆಸುತ್ತೇವೆ. ಅದಕ್ಕೂ ಇಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಹಿಂದೆ ಇಲ್ಲಿ ತಿಂಡಿ ಅಂಗಡಿಗಳನ್ನು ಇಟ್ಟ ಸಂದರ್ಭ ನಗರಸಭೆ ಗಮನಕ್ಕೆ ತಂದು ತೆರವುಗೊಳಿಸಲಾಗಿತ್ತು. ಮತ್ತೆ ಇಲ್ಲಿ ಅಂಗಡಿ ತೆರೆದಿರುವುದರಿಂದ ವಾಹನಗಳ ಸಂಚಾರಕ್ಕೂ ತೀವ್ರ ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
    ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್‌ಬಾಬು ಮಾತನಾಡಿ, ನಾವು ಬೀದಿ ವ್ಯಾಪಾರಿಗಳ ವಿರೋಧಿಗಳಲ್ಲ. ಒಂದು ಊರಿಗೆ ಅದರದೇ ಆದ ಶಿಸ್ತು ಇರುತ್ತದೆ. ಟ್ರಾಫಿಕ್ ಸಮಸ್ಯೆ ಹೆಚ್ಚಿರುವ, ಶಾಲಾಕಾಲೇಜು ಮಕ್ಕಳು ಓಡಾಡುವ ರಸ್ತೆಯಲ್ಲಿ ಏಕಾಏಕಿ ಬೀದಿ ಅಂಗಡಿಗಳನ್ನು ಇರಿಸಿರುವುದು ಎಷ್ಟು ಸರಿ? ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ಈ ಬಗ್ಗೆ ತಾವೇ ಪ್ರಶ್ನಿಸಿಕೊಳ್ಳಲಿ. ಬೀದಿ ವ್ಯಾಪಾರಿಗಳಿಗೆ ಬೇರೆಡೆ ಅವಕಾಶ ಕಲ್ಪಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts