More

    ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ

    ವಿಕ್ರಮ ನಾಡಿಗೇರ ಧಾರವಾಡ

    ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸುವ ಭರವಸೆಯೊಂದಿಗೆ ಭೂಮಿ ಹದಗೊಳಿಸಲು ಸಜ್ಜಾಗಿದ್ದಾರೆ. ಇತ್ತ ಕೃಷಿ ಇಲಾಖೆ ಸಹ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ಗೊಬ್ಬರ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

    ಮುಂಗಾರು ಹಂಗಾಮಿಗೆ ಸೋಯಾಬೀನ್, ಭತ್ತ, ಮೆಕ್ಕಜೋಳ, ಶೇಂಗಾ, ಉದ್ದು, ಹೆಸರು, ಅಲಸಂದಿ, ಜೋಳ ಸೇರಿ ಅಂದಾಜು 40 ಸಾವಿರ ಕ್ವಿಂಟಾಲ್ ಬೀಜದ ಅಗತ್ಯವಿದೆ. ಈಗಾಗಲೇ ಕೃಷಿ ಇಲಾಖೆ 12,000 ಕ್ವಿಂ. ಬಿತ್ತನೆ ಬೀಜ ದಾಸ್ತಾನು ಮಾಡಿದೆ. ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರ, 16 ಹೆಚ್ಚುವರಿ ಕೇಂದ್ರಗಳು ಸೇರಿ ಒಟ್ಟು 30 ಕೇಂದ್ರಗಳಿದ್ದು, ಅವುಗಳ ಮೂಲಕ ರೈತರಿಗೆ ಸರಬರಾಜು ಮಾಡಲಿದೆ. ಮೇ 19ರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿ ಪ್ರಾರಂಭವಾಗಿದ್ದು, ಮೊದಲ ದಿನವೇ 60 ಕ್ವಿಂಟಾಲ್ ಮಾರಾಟವೂ ಆಗಿದೆ.

    ಮುಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 60,184 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಸದ್ಯ ಕೃಷಿ ಇಲಾಖೆಯಲ್ಲಿ ಯೂರಿಯಾ, ಡಿಎಪಿ, ಇತರ ರಸಗೊಬ್ಬರ ಸೇರಿ 20,700 ಮೆಟ್ರಿಕ್ ಟನ್ ದಾಸ್ತಾನು ಇದೆ. ಹೀಗಾಗಿ ಗೊಬ್ಬರದ ಅಭಾವ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಈ ಬಾರಿ 2,46,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರ ಪ್ರಗತಿಯು ಮಳೆ ಪ್ರಮಾಣವನ್ನು ಅವಲಂಬಿಸಿರುತ್ತದೆ. ಮಳೆ ಕೊರತೆಯಾದಲ್ಲಿ ರೈತರು ಪರ್ಯಾಯ ಬೆಳೆ ಬೆಳೆಯುತ್ತಾರೆ. ಹೀಗಾಗಿ ಒಟ್ಟು ಗುರಿ ಹೊಂದಿರುವ ಪ್ರದೇಶದಲ್ಲಿ ಏರುಪೇರು ಆಗುವ ಸಾಧ್ಯತೆಯೂ ಇದೆ.

    ಹಿಂದಿನ ವರ್ಷ ಅತಿವೃಷ್ಟಿ ಎದುರಾಗಿದ್ದರಿಂದ ಸಾಕಷ್ಟು ಪ್ರಮಾಣದ ಬೆಳೆ ಹಾನಿಗೀಡಾಗಿತ್ತು. ಹೀಗಾಗಿ ಈ ಬಾರಿಯಾದರೂ ಉತ್ತಮ ಫಸಲು ಪಡೆದು ನೆಮ್ಮದಿ ಜೀವನ ಸಾಗಿಸಬಹುದು ಎಂಬ ಆಸೆಯ ಮೂಲಕ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಆದರೆ, ಮಳೆಯಾಟ ಹೇಗಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

    ತಾಲೂಕುವಾರು ಬಿತ್ತನೆ ಗುರಿ: ಜಿಲ್ಲೆಯಲ್ಲಿ ಒಟ್ಟು 2,46,276 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಧಾರವಾಡ ತಾಲೂಕಿನಲ್ಲಿ 63,857 ಹೆಕ್ಟೇರ್, ಹುಬ್ಬಳ್ಳಿಯಲ್ಲಿ 34,438, ಕಲಘಟಗಿಯಲ್ಲಿ 45,252, ಕುಂದಗೋಳದಲ್ಲಿ 39,641 ಹಾಗೂ ನವಲಗುಂದದಲ್ಲಿ 63,088 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

    ಮುಂಗಾರು ಹಂಗಾಮಿಗೆ ಅಗತ್ಯವಾಗಿರುವ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜಗಳನ್ನು ತಾಲೂಕುವಾರು ರೈತ ಸಂಪರ್ಕ ಕೇಂದ್ರಗಳಿಗೆ ಸಹ ಪೂರೈಸಲಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗುವ ಪ್ರಶ್ನೆಯೇ ಇಲ್ಲ.

    | ರಾಜಶೇಖರ ಬಿಜಾಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts