More

    ಬಿಜೆಪಿ ತೆಕ್ಕೆಗೆ ಹೊಸನಗರ ತಾಪಂ

    ಹೊಸನಗರ: ತೀವ್ರ ಕುತೂಹಲ ಮೂಡಿಸಿದ್ದ ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಕೊನೆಗೂ ಅಧಿಕಾರ ಹಿಡಿಯಲು ಸಫಲವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ನಂತರ ಬಿಜೆಪಿ ಸೇರ್ಪಡೆಯಾಗಿದ್ದ ಆಲುವಳ್ಳಿ ವೀರೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಲುವಳ್ಳಿ ವೀರೇಶ್, ಕಾಂಗ್ರೆಸ್​ನಿಂದ ಬಿ.ಜಿ. ಚಂದ್ರಮೌಳಿ ನಾಮಪತ್ರ ಸಲ್ಲಿಸಿದ್ದರು. ಆಲುವಳ್ಳಿ ವೀರೇಶ್​ಗೆ ಕೆ.ವಿ.ಸುಬ್ರಹ್ಮಣ್ಯ, ಬಿ.ಜಿ.ಚಂದ್ರಮೌಳಿಗೆ ಏರಗಿ ಉಮೇಶ ಸೂಚಕರಾಗಿದ್ದು ಎರಡೂ ನಾಮಪತ್ರಗಳು ಸಿಂಧುಗೊಂಡ ಬಳಿಕ ಚುನಾವಣೆ ನಡೆಸಲಾಯಿತು.

    ಎಲ್ಲ 12 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ವೀರೇಶ್ ಅವರಿಗೆ 7, ಚಂದ್ರಮೌಳಿ ಅವರಿಗೆ 5 ಮತಗಳು ಲಭಿಸಿದವು. ಸಾಗರ ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

    ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಬೆಂಬಲದೊಂದಿಗೆ ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವಾಸಪ್ಪ ಗೌಡ ನಾಟಕೀಯ ಬೆಳವಣಿಗೆಗಳಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಬಂದಿದ್ದಾರೆ. ನಾಲ್ಕು ವರ್ಷ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ನಡೆಸಿದ್ದ ಅವರು ಮಾತೃ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿ ಅಚ್ಚರಿ ಮೂಡಿಸಿದರು. ಆಲುವಳ್ಳಿ ವೀರೇಶ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

    ಆಲುವಳ್ಳಿ ವಿರೋಧಿಸದ ಕಾಂಗ್ರೆಸ್ ಸದಸ್ಯರು! ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲು ಬಿ.ಜಿ.ಚಂದ್ರಮೌಳಿ ಪರ ಮತ ಚಲಾಯಿಸಲು ಸೂಚಿಸಲಾಗಿದ್ದು 5 ಸದಸ್ಯರು ಮತ ಚಲಾಯಿಸಿದರು. ವಿರೋಧವಾಗಿ ಚಲಾಯಿಸಲು ಸೂಚಿಸಿದಾಗ 7 ಸದಸ್ಯರು ಮತ ಚಲಾಯಿಸಿದರು. ಆಲುವಳ್ಳಿ ವೀರೇಶ ಪರ ಮತ ಚಲಾಯಿಸಲು ಸೂಚಿಸಿದಾಗ 7 ಜನ ಸದಸ್ಯರು ಮತ ಚಲಾಯಿಸಿದರು. ಆದರೆ ಆಲುವಳ್ಳಿ ವಿರೋಧ ಮತ ಚಲಾವಣೆಗೆ ಸೂಚಿಸಿದಾಗ ಕಾಂಗ್ರೆಸ್​ನ ಯಾವೊಬ್ಬ ಸದಸ್ಯ ಕೂಡ ಮತ ಚಲಾಯಿಸದೆ ಗಮನ ಸೆಳೆದರು.

    ಆಣೆ ಪ್ರಮಾಣಕ್ಕೆ ಸೋಲು, ಪಕ್ಷ ನಿಷ್ಠೆಗೆ ಗೆಲುವು: ವಾಸಪ್ಪ ಗೌಡ ರಾಜೀನಾಮೆ ನೀಡಿದ ನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಬ್ಬರು ಸದಸ್ಯರು ಕಾಂಗ್ರೆಸ್ ಸದಸ್ಯರ ಪರ ಪ್ರಮಾಣ ಮಾಡಿದ್ದ ವಿಚಾರ ದೊಡ್ಡ ಸದ್ದು ಮಾಡಿತ್ತು. ಆ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮನಸ್ಸು ಮಾಡಿದ್ದರು ಎನ್ನಲಾಗಿದೆ. ಆದರೆ ಪಕ್ಷ ಆ ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಆಣೆ ಪ್ರಮಾಣ ಮಾಡಿದ್ದರೂ ಪಕ್ಷನಿಷ್ಠೆ ಗೆದ್ದಂತಾಗಿದೆ.

    ಆಣೆ, ಪ್ರಮಾಣಕ್ಕೆ ಮಹತ್ವ ಕೊಡಬೇಕಿಲ್ಲ: ಚುನಾವಣೆಗಳಲ್ಲಿ ಆಣೆ, ಪ್ರಮಾಣಕ್ಕೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಧರ್ಮಸ್ಥಳದ ಧರ್ವಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೇ ಹೇಳಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಯ ಕೆಲ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರಮಾಣ ಮಾಡಿಸಿಕೊಂಡರೇ ಹೇಗೆ ಎಂದು ಶಾಸಕ ಹರತಾಳು ಹಾಲಪ್ಪ ಪ್ರಶ್ನಿಸಿದರು.

    ತಾಪಂ ಅಧ್ಯಕ್ಷ ಆಲುವಳ್ಳಿ ವೀರೇಶ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಪಕ್ಷ ಮತ್ತು ಸಂಘಟನೆ ಬಗ್ಗೆ ಬಿಜೆಪಿ ಸದಸ್ಯರಿಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ತಾಪಂ ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎಂದರು.

    ಉತ್ತಮ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಸದಸ್ಯರು ಸಂಘಟಿತರಾಗಿ ನಿಮ್ಮನ್ನು ಆಯ್ಕೆ ಮಾಡಿದ್ದು, ಈ ಅವಕಾಶ ಬಳಕೆ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿ ಕೆಲಸ ಮಾಡಿ ಎಂದು ನೂತನ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

    ಕಾರಿನಲ್ಲಿ ಬಂದು ಬೈಕ್​ನಲ್ಲಿ ಹೊರಟ ವಾಸಪ್ಪ ಗೌಡ: ರಾಜೀನಾಮೆ ಪ್ರಹಸನದ ಮೂಲಕ ಸುದ್ದಿಯಾಗಿದ್ದ ಮಾಜಿ ಅಧ್ಯಕ್ಷ ವಾಸಪ್ಪ ಗೌಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಹಾಕಿದ ನಂತರ ತಮ್ಮ ಮಗನ ಬೈಕ್ ಏರಿ ಮನೆ ಕಡೆ ಹೊರಟು ಹೋಗಿದ್ದು ಗಮನ ಸೆಳೆಯಿತು. ಆದರೆ ಮತ ಹಾಕಲು ಅವರನ್ನು ಕಾರಿನಲ್ಲಿ ಕರೆತಲಾಗಿತ್ತು.

    ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಕಿರಿಕ್: ಅಧ್ಯಕ್ಷರ ಚುನಾವಣೆ ನಡೆದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಬೆಳೆದು ಕೈಕೈಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪರಸ್ಪರ ವಿರುದ್ಧ ಘೊಷಣೆ ಕೂಗುತ್ತ ತಮ್ಮ ಆಕ್ರೋಶ ಹೊರಹಾಕಿದರು. ಈ ಬಗ್ಗೆ ಗಾಂಧಿಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಇದು ಶಾಸಕರ ಕಡೆಯವರ ಗೂಂಡಾವರ್ತನೆ ಎಂದು ಪ್ರಕರಣವನ್ನು ಖಂಡಿಸಿದರು. ಶಾಸಕರಾದವರು ಇಂತಹ ಪ್ರಕರಣಗಳಿಗೆ ಕುಮ್ಮಕ್ಕು ನೀಡಬಾರದು. ಹೊಸನಗರದಲ್ಲಿ ಈ ಹಿಂದೆ ಯಾವತ್ತೂ ಪಕ್ಷಗಳ ನಡುವೆ ಇಂತಹ ಘಟನೆ ನಡೆದ ಉದಾಹರಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೂತನ ಅಧ್ಯಕ್ಷ ಆಲುವಳ್ಳಿ ವೀರೇಶ್, ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ತಾಪಂ ಸದಸ್ಯರಾದ ಕೆ.ವಿ.ಸುಬ್ರಹ್ಮಣ್ಯ, ಶೋಭಾ ಮಂಜುನಾಥ್, ಅಶ್ವಿನಿ ರಾಜೇಶ್, ರುಕ್ಮಿಣಿ ರಾಜು, ವಾಸಪ್ಪ ಗೌಡ, ಸರಸ್ವತಿ, ಪ್ರಮುಖರಾದ ಕಲ್ಯಾಣಪ್ಪ ಗೌಡ, ಬಿ.ಯುವರಾಜ್, ಕೆ.ವಿ.ಕೃಷ್ಣಮುರ್ತಿ, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts