More

    ಬಿಜೆಪಿಯುತ್ತ ದಲಿತ ಸಮುದಾಯ

    ಗದಗ: ಕಾಂಗ್ರೆಸ್ ಹೇಳುತ್ತಿದ್ದ ಸುಳ್ಳನ್ನೇ ನಂಬಿ ಈವರೆಗೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ದಲಿತ ಸಮುದಾಯ ಇಂದು ಬಿಜೆಪಿಯತ್ತ ಮುಖ ಮಾಡಿದೆ. ಈ ಕಾರಣಕ್ಕಾಗಿಯೇ ಕಳೆದ ಲೋಕಸಭೆ ಚುನಾವಣೆ ಸೇರಿ ಎಲ್ಲ ಉಪಚುನಾವಣೆಗಳಲ್ಲಿ ಶೇ.85ರಷ್ಟು ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿದೆ ಎಂದು ಬಿಜೆಪಿ ಎಸ್​ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ದಲಿತ ವಿರೋಧಿ. ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತದೆ. ಬಿಜೆಪಿಯು ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಎಂಬ ಸುಳ್ಳುಗಳನ್ನು ಹೇಳಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕಾಂಗ್ರೆಸ್​ಗೆ ದಲಿತರೇ ಬೆನ್ನೆಲುಬಾಗಿದ್ದರು. ಆದರೆ, ಪರಿಶಿಷ್ಟ ಸಮುದಾಯದ ಜನತೆಗೆ ಕಾಂಗ್ರೆಸ್ ಹೇಳುತ್ತಿದ್ದ ಸುಳ್ಳಿನ ಅರಿವಾಗಿ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಇಂದು ಬೋನ್​ಲೆಸ್ ಆಗಿದೆ ಎಂದು ಲೇವಡಿ ಮಾಡಿದರು.

    ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ದಲಿತ ಸಮುದಾಯ ಬಿಜೆಪಿಗೆ ಬೆಂಬಲಿಸಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 150 ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ ಇತರರು ಇದ್ದರು.

    ಕಾಂಗ್ರೆಸ್​ನವರು ಚುರುಮರಿ ತಿನ್ನುತ್ತಿದ್ದರೆ ?

    ರಾಜ್ಯದಲ್ಲಿನ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಸಂಬಂಧ 2008ರಲ್ಲಿ ಬಿ.ಎಸ್. ಯಡಿಯೂರಪ್ಪನವರು ನ್ಯಾ.ಸದಾಶಿವ ಆಯೋಗ ರಚಿಸಿದ್ದರು. ಸಮಿತಿ ಕೂಡ ವರದಿ ನೀಡಿತ್ತು. ಇದೀಗ ಈ ವರದಿ ಯಥಾವತ್ ಜಾರಿಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಧಿಕಾರಾವಧಿಯಲ್ಲಿ ಜಾರಿ ಮಾಡದಿರಲು ಕಾರಣವೇನು? ಆಗ ನೀವೇನು ಚುರುಮರಿ ತಿನ್ನುತ್ತಿದ್ದಿರೇನು? ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ನಾರಾಯಣಸ್ವಾಮಿ ಕಿಡಿಕಾರಿದರು. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಪರಿಶಿಷ್ಟರ ಕಲ್ಯಾಣಕ್ಕೆ ಎಸ್​ಸಿಪಿ-ಎಸ್​ಟಿಪಿ ಅಡಿ 27 ಸಾವಿರ ಕೋಟಿ ರೂ. ನೀಡಿದ್ದಾಗಿ ಭಾಷಣ ಮಾಡುತ್ತಿದ್ದರು. ಅನುದಾನ ಬಳಸದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡುತ್ತಿದ್ದರು. ಆದರೆ, ವಾಸ್ತವದಲ್ಲಿ ಈ ಹಣದಲ್ಲಿ 12 ಸಾವಿರ ಕೋಟಿ ರೂ. ಮೆಟ್ರೋಗೆ, ಸಾವಿರಾರು ಕೋಟಿ ರೂ. ಗಳನ್ನು ರಸ್ತೆಗೆ ನೀಡಿದ್ದಾರೆ ಎಂದು ಆರೋಪಿಸಿದರು.

    ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ತರಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ವರದಿಯಲ್ಲಿನ ನ್ಯೂನತೆ ಸರಿಪಡಿಸಿ ಎಲ್ಲರಿಗೂ ಸಮಾಧಾನ ಆಗುವ ರೀತಿಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

    ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ

    ಮುಂಬರುವ ನಗರಸಭೆ ಚುನಾವಣೆಯಲ್ಲಿ ಮೀಸಲಾತಿ ಇರುವ ವಾರ್ಡ್​ಗಳಲ್ಲಿ ಬಿಜೆಪಿ ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ಬಿಜೆಪಿ ಮುಖಂಡ ಅನೀಲ ಮೆಣಸಿನಕಾಯಿ ಹೇಳಿದರು.

    ನಗರದ ವಿಠಲಾರೂಢ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಸಂಘಟನೆ ಸಭೆಯಲ್ಲಿ ಅವರು ಮಾತನಾಡಿದರು.

    ಕಳೆದ ನಾಲ್ಕು ದಶಕಗಳಿಂದ ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದರೂ ಇಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ವಾಸಿಸುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು.

    ಕಾಂಗ್ರೆಸ್ ಮುಖಂಡರು ಎಸ್ಸಿ, ಎಸ್ಟಿ ಸಮುದಾಯವನ್ನು ಮತಬ್ಯಾಂಕ್ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಮುಖಂಡರಿಗೆ ಪಾಠ ಕಲಿಸಬೇಕು. ಆದ್ದರಿಂದ ಮುಂದಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಸಲು ಎಸ್ಸಿ ಮೋರ್ಚಾ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.

    ಕಾರ್ಯಕ್ರಮವನ್ನು ಬಿಜೆಪಿ ಎಸ್ಸಿ ಘಟಕ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಮಹೇಂದ್ರ ಕೌತಾಳ, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿದರು.

    ಮಂಜುನಾಥ ಕೊಟ್ನೀಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಪಡಿಯಪ್ಪ ಪೂಜಾರ, ಈಶ್ವರ ಹಳೇಮನಿ, ದಿನಕರಬಾಬು ಉಡುಪಿ, ಮಾಧವ ಗಣಾಚಾರಿ, ಕಾಂತಿಲಾಲ ಬನ್ಸಾಲಿ, ಮಹೇಶ ಲಮಾಣಿ, ಜಾನು ಲಮಾಣಿ, ಭೀಮಸಿಂಗ್ ರಾಠೋಡ, ಹನುಮಂತಪ್ಪ ಅಳವಂಡಿ, ಮಲ್ಲೇಶ ಲಮಾಣಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts