More

    ಬಿಕೋ ಎನ್ನುತ್ತಿದೆ ಮುಂಡರಗಿ ಪಟ್ಟಣ

    ಮುಂಡರಗಿ: ಪಟ್ಟಣದಲ್ಲಿ ಕರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸುತ್ತಿದೆ. ಸೋಂಕು ನಿಯಂತ್ರಿಸಲು ಸರ್ವ ವ್ಯಾಪಾರಸ್ಥರ ಸಮ್ಮುಖದಲ್ಲಿ ತಾಲೂಕು ಆಡಳಿತವು ಕೈಗೊಂಡ ಹಲವು ಕ್ರಮಗಳಿಂದಾಗಿ ಸೋಮವಾರ ಜನ ಸಂಚಾರ ಅತೀ ವಿರಳವಾಗಿತ್ತು.

    ಬೆಳಗ್ಗೆ 6ಗಂಟೆಯಿಂದ 11 ಗಂಟೆಯೊಳಗೆ ವ್ಯಾಪಾರ ವಹಿವಾಟು ನಡೆಸಿ ನಂತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸೋಮವಾರ ವಾರದ ಸಂತೆೆಯಾಗಿದ್ದರಿಂದ ಕೆಲವು ತರಕಾರಿ ವ್ಯಾಪಾರಸ್ಥರು ಸಂಜೆಯವರೆಗೆ ವ್ಯಾಪಾರ ಮಾಡಿದರು. ಆದರೆ, ಕರೊನಾ ಸೋಂಕಿನ ಭಯದಿಂದಾಗಿ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತು.

    ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೂ ರೈತರು, ದಲಾಲರು, ಸಣ್ಣ ಪುಟ್ಟ ವ್ಯಾಪಾರಿಗಳು, ಸಗಟು ವ್ಯಾಪಾರಸ್ಥರು, ಗ್ರಾಹಕರಿಂದ ತುಂಬಿರುತ್ತಿದ್ದ ತರಕಾರಿ ಮಾರುಕಟ್ಟೆಯಲ್ಲಿ ಜನ ಸಂದಣೆ ತುಂಬಾ ಕಡಿಮೆ ಇತ್ತು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಅಷ್ಟೊಂದು ಜನ ಕಂಡುಬರಲಿಲ್ಲ. ಅಗತ್ಯವಿದ್ದ ಜನರು ಮಾತ್ರ ಮಾರುಕಟ್ಟೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದರು. ಕೆಲವು ಕಡೆ ಜನರು ಮಾಸ್ಕ್ ಧರಿಸದೆ ಪರಸ್ಪರ ಅಂತರವಿಲ್ಲದೆ ಅಂಗಡಿ ಮುಂದೆ ನಿಂತಿರುವುದು ಕಂಡು ಬಂತು. ಮುಖ್ಯ ಮಾರುಕಟ್ಟೆಯಲ್ಲೂ ಜನರು ಶಿಸ್ತು ಮರೆತು ವಹಿವಾಟಿನಲ್ಲಿ ತೊಡಗಿದ್ದರು. ಪೊಲೀಸರು ಕೆಲವರಿಗೆ ಬೆತ್ತದ ರುಚಿ ತೋರಿಸಿ ಮಾಸ್ಕ್ ಧರಿಸುವಂತೆ ತಿಳಿವಳಿಕೆ ಹೇಳಿದರು.

    ಮಧ್ಯಾಹ್ನ 12 ಗಂಟೆಯ ನಂತರ ಪಟ್ಟಣದ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬ್ಯಾಂಕ್​ಗಳು, ಔಷಧ ಅಂಗಡಿ, ಆಸ್ಪತ್ರೆ, ಹಣ್ಣು, ಹಾಲಿನ ಅಂಗಡಿಗಳು ಮತ್ತು ಬಾರ್ ಅಂಗಡಿಗಳು ತೆರೆದಿದ್ದವು. ಹಾಗೆಯೇ ಕೆಎಸ್​ಆರ್​ಟಿಸಿ ಬಸ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

    ಎಪಿಎಂಸಿ ವಹಿವಾಟಿನ ಸಮಯ ಕಡಿತ: ಕರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಜೂನ್ 30ರಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪಾರ ವಹಿವಾಟನ್ನು ಬೆಳಗ್ಗೆ 6ರಿಂದ 11ರ ವರೆಗೆ ಮಾತ್ರ ನಡೆಸಲು ಅವಕಾಶ ನೀಡಬೇಕು ಎಂದು ವ್ಯಾಪಾರಸ್ಥರು ಮತ್ತು ದಲ್ಲಾಳರು ಸೇರಿ ಎಪಿಎಂಸಿ ಕಾರ್ಯದರ್ಶಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಅದಕ್ಕೆ ಕಾರ್ಯದರ್ಶಿ ಅವರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಎಪಿಎಂಸಿ ವರ್ತಕ ಸಂಘದ ಕಾರ್ಯದರ್ಶಿ ವೆಂಕಟೇಶ ಹೆಗ್ಗಡಾಳ ಹಾಗೂ ವರ್ತಕ ಪವನ್ ಚೋಪ್ರಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts