More

    ಬಿಕೋ ಎನ್ನುತ್ತಿದೆ ಗ್ರಾಮೀಣ ಪ್ರದೇಶ

    ಸಿದ್ದಾಪುರ: ಕರೊನಾ ವೈರಸ್ ಯಾವ ಕ್ಷಣದಲ್ಲಾದರೂ ಹರಡಬಹುದು ಎನ್ನುವ ಆತಂಕ ಜನತೆಯನ್ನು ಆವರಿಸಿರುವುದರಿಂದ ತಾಲೂಕಿನಾದ್ಯಂತ ಲಾಕ್​ಡೌನ್ ಪರಿಣಾಮ ಕಾಣಿಸಿಕೊಂಡಿದೆ.

    ಪಟ್ಟಣ ಪ್ರದೇಶದಲ್ಲಿ ಮಾತ್ರ ಜನರ ಓಡಾಟ ಅಲ್ಲಲ್ಲಿ ಕಂಡುಬರುತ್ತಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದೆ. ಜನರು ಓಡಾಡಬಾರದು ಪೇಟೆ ಪಟ್ಟಣಕ್ಕೆ ಬರಬಾರದೆಂದು ಜನತೆಗೆ ಅವಶ್ಯ ಇರುವ ದಿನಸಿ ಹಾಗೂ ತರಕಾರಿಗಳನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೆ ವಿತರಿಸುವುದಕ್ಕೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

    ಈಗಾಗಲೇ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ದಿನಸಿ ಹಾಗೂ ತರಕಾರಿಗಳನ್ನು ಮಾರಾಟ ಮಾಡುವವರನ್ನು ನೇಮಕ ಮಾಡಲಾಗಿದ್ದು, ಸಾಂಕೇತಿಕವಾಗಿ ಶನಿವಾರವೇ ಆರಂಭಿಸಲಾಗಿದೆ ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ತಿಳಿಸಿದ್ದಾರೆ.

    ಪಟ್ಟಣದ ಪ್ರತಿ ವಾರ್ಡ್​ಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಗ್ರಾಪಂ ವ್ಯಾಪ್ತಿಯಲ್ಲಿ ಯಾರ್ಯಾರು ಮಾರಾಟ ಮಾಡುತ್ತಾರೆ ಎನ್ನುವ ವಿವರವನ್ನು ಸ್ಥಳೀಯವಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸುವ ವ್ಯವಸ್ಥೆ ಮಾಡಲಾಗಿದೆ.

    ಕರೊನಾ ಕಾರ್ಯಪಡೆ: ತಾಲೂಕಿನ ಎಲ್ಲ 23 ಗ್ರಾಪಂ ವ್ಯಾಪ್ತಿಯ ಗ್ರಾಮ ಮಟ್ಟದಲ್ಲಿ ಕರೊನಾ ಕಾರ್ಯಪಡೆ ರಚಿಸಲಾಗಿದೆ. ಅದರಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್, ಗ್ರಾಮ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಪಂ ಪಿಡಿಒ ಇರುತ್ತಿದ್ದು ಏನೇ ತೊಂದರೆ ಆದರೂ ಕಾರ್ಯಪಡೆಗೆ ಜನತೆ ಮಾಹಿತಿ ನೀಡಬಹುದಾಗಿದೆ.

    ವಿಶೇಷ ಪೂಜೆ: ಭುವನಗಿರಿ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ದೇವಾಲಯದ ಆಡಳಿತ ಸಮಿತಿಯವರ ತೀರ್ವನದಂತೆ ದೇವಸ್ಥಾನದ ಪ್ರಧಾನ ಅರ್ಚಕ ವೇ. ಶ್ರೀಧರ ಭಟ್ಟ ಮುತ್ತಿಗೆ ಅವರು ಕರೊನಾ ವೈರಸ್ ಮಹಾಮಾರಿ ಎಲ್ಲೆಡೆ ಹರಡುತ್ತಿರುವುದರಿಂದ ಅದರ ನಿವಾರಣೆಗೆ ಹಾಗೂ ಆಯುರಾರೋಗ್ಯ ಭಾಗ್ಯ ಸಂಕಲ್ಪಿಸಿ ಸಪ್ತಶತಿ ಪಾರಾಯಣ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts