More

    ಬಿಎಸ್​ಎನ್​ಎಲ್ ಹೆಸರಲ್ಲಿ ಲೂಟಿ

    ಕಾರವಾರ: ಸರ್ಕಾರಿ ಸ್ವಾಮ್ಯದ ಉದ್ಯಮ ಬಿಎಸ್​ಎನ್​ಎಲ್ ಹೆಸರಿನಲ್ಲಿ ಖಾಸಗಿ ಫ್ರಾಂಚೈಸಿಗಳು ಜಿಲ್ಲೆಯಲ್ಲಿ ಲೂಟಿಗೆ ಇಳಿದಿವೆ. ಜಿಲ್ಲೆಯ ಜನರ ಅನಿವಾರ್ಯತೆಯನ್ನೇ ಬಳಸಿಕೊಂಡು ಹಣ ಗಳಿಸುತ್ತಿರುವ ಆರೋಪ ಕೇಳಿ ಬಂದಿದೆ.

    ಎಫ್​ಟಿಟಿಎಚ್ ಫ್ರಾಂಚೈಸಿ ಹೆಸರಿನಲ್ಲಿ ಸ್ಥಿರ ಹಾಗೂ ಇಂಟರ್​ನೆಟ್ ಸಂಪರ್ಕ ನೀಡಲು ಮುಂದಾಗುವ ಖಾಸಗಿ ವ್ಯಕ್ತಿಗಳು ಠೇವಣಿ, ಕೇಬಲ್ ಅಳವಡಿಕೆ, ನಿರ್ವಹಣೆ ಖರ್ಚು ಎಂದು ಬೇಕಾಬಿಟ್ಟಿ ಶುಲ್ಕ ಪಡೆದು, ಅದಕ್ಕೆ ಯಾವುದೇ ರಸೀದಿ ಕೊಡದೇ, ತಕ್ಕ ಸೇವೆಯನ್ನೂ ಸಮರ್ಪಕವಾಗಿ ನೀಡದೇ ಇರುವ ಸಾಕಷ್ಟು ಉದಾಹರಣೆಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ಜಿಲ್ಲೆಯಲ್ಲಿ ಸದ್ಯ 10ಕ್ಕೂ ಅಧಿಕ

    ಎಫ್​ಟಿಟಿಎಚ್ ಫ್ರಾಂಚೈಸಿಗಳಿದ್ದು, ಇದುವರೆಗೆ 3,200 ರಷ್ಟು ಸಂಪರ್ಕ ನೀಡಲಾಗಿದೆ.

    ಎಫ್​ಟಿಟಿಎಚ್ ಸಂಪರ್ಕಕ್ಕೆ ಗ್ರಾಹಕರು ಖಾಸಗಿಯಾಗಿ ಕೇಬಲ್, ಮೋಡೆಮ್ ಖರೀದಿಸಿ ಅಳವಡಿಸಿಕೊಳ್ಳಲು ಅವಕಾಶವಿದೆ. ಪ್ರತಿ ಮೀಟರ್​ಗೆ ಗರಿಷ್ಠ 15 ರಿಂದ 20 ರೂ. ಶುಲ್ಕ ತಗುಲಬಹುದು. ಒಂದು ಊರಿನ ಗ್ರಾಹಕರೆಲ್ಲ ಒಟ್ಟಾಗಿ ಪ್ರತಿ ಮನೆಗೆ 10 ಸಾವಿರ ರೂ. ಒಳಗೆ ಕನಿಷ್ಠ ಅಂತರದ ಎಫ್​ಟಿಟಿಎಚ್ ಸೇವೆಯನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ, ಕೆಲವು ಫ್ರಾಂಚೈಸಿಗಳು ಶಿರಸಿ ತಾಲೂಕಿನ ವಿವಿಧ ಭಾಗಗಳಲ್ಲಿ, ಕಾರವಾರ ನಗರ, ಮಲ್ಲಾಪುರ ಭಾಗಗಳಲ್ಲಿ ಗ್ರಾಹಕರಿಂದ ಪ್ರತಿ ಮೀಟರ್​ಗೆ 25 ರಿಂದ 30 ರೂ. ಶುಲ್ಕ ವಸೂಲಿ ಮಾಡಿದ್ದಾರೆ. ಪ್ರತಿ ಮನೆಯ ಸಂಪರ್ಕಕ್ಕೆ 30 ಸಾವಿರ ರೂ. ಗಳವರೆಗೂ ಹಣ ಪಡೆದ ಉದಾಹರಣೆಯೂ ಇದೆ. ಆದರೆ, ಅದಕ್ಕೆ ಯಾವುದೇ ರಸೀದಿ ಪಡೆಯದ ಗ್ರಾಹಕರು ಕಣ್ಣು ಕಣ್ಣು ಬಿಡುವಂತಾಗಿದೆ.

    ಆರು ತಿಂಗಳಲ್ಲಿ ವೃದ್ಧಿ: ಹೈಸ್ಪೀಡ್ ಇಂಟರ್​ನೆಟ್ ಸೇವೆ ನೀಡುವ ಸಲುವಾಗಿ ವರ್ಷಗಳ ಹಿಂದೆಯೇ ಪ್ರಾರಂಭವಾದ ಎಫ್​ಟಿಟಿಎಚ್ ಲಾಕ್​ಡೌನ್ ನಂತರ ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ಭಾಗದಲ್ಲಿ ಈ ಲೈನ್​ಗೆ ಭಾರಿ ಬೇಡಿಕೆ ಇದೆ. ವರ್ಕ್ ಫ್ರಾಂ ಹೋಂ ಮಾಡಲು ಬಂದ ಖಾಸಗಿ ಉದ್ಯೋಗಿಗಳಿಗೆ ತುರ್ತಾಗಿ ಅಡೆತಡೆಯಿಲ್ಲದ ಅಂತರ್ಜಾಲ ಸೇವೆ ಪಡೆಯುವುದು ಅನಿವಾರ್ಯವಾಗಿದೆ. ಎಷ್ಟೇ ಹಣ ಖರ್ಚಾಗಲಿ ತಮಗೆ ತಕ್ಷಣ ಇಂಟರ್​ನೆಟ್ ಬೇಕು ಎಂದು ಬಿಎಸ್​ಎನ್​ಎಲ್ ಎಫ್​ಟಿಟಿಎಚ್ ಮೊರೆ ಹೋಗುತ್ತಿದ್ದಾರೆ. ಈ ನೆಪದಲ್ಲಿ ಗುಡ್ಡಗಾಡು ಜಿಲ್ಲೆಯ ಮೂಲೆ ಮೂಲೆಗಳಿಗೆ ಅಂತರ್ಜಾಲ ಸೇವೆ ತಲುಪುತ್ತಿರುವುದು ಸ್ವಾಗತಾರ್ಹ ವಿಚಾರವೇ ಆದರೂ ಇದೇ ಸಂದರ್ಭದಲ್ಲಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವುದು ಬೇಸರದ ಸಂಗತಿ.

    ಅನಿವಾರ್ಯತೆ ಬಳಸಿಕೊಂಡ ಫ್ರಾಂಚೈಸಿಗಳು: ಉತ್ತರ ಕನ್ನಡದಲ್ಲಿ ಇದುವರೆಗೆ ಖಾಸಗಿ ಮೊಬೈಲ್, ಸ್ಥಿರ ದೂರವಾಣಿ ಅಥವಾ ಅಂತರ್ಜಾಲ ಸೇವೆ ಇನ್ನೂ ವ್ಯಾಪಕವಾಗಿಲ್ಲ.

    ಬಿಎಸ್​ಎನ್​ಎಲ್ ಸಂಸ್ಥೆಯ ಜಿಲ್ಲೆಯ ದೂರ ಸಂಪರ್ಕ ವಿಚಾರದಲ್ಲಿ ಏಸ್ವಾಮಿತ್ವ ಹೊಂದಿದೆ. ಆ ನಿಗಮದಿಂದ ಸೇವೆ ಸಿಗಲಿ, ಬಿಡಲಿ ಅದನ್ನೇ ಅವಲಂಬಿಸುವುದು ಅನಿವಾರ್ಯವಾಗಿಬಿಟ್ಟಿದೆ. ಸಿಬ್ಬಂದಿ, ಮೂಲ ವಸ್ತುಗಳ ಕೊರತೆಯಿಂದ ತೊಂದರೆಗೀಡಾಗಿರುವ ಸರ್ಕಾರಿ ಸಂಸ್ಥೆ ಜಿಲ್ಲೆಯಲ್ಲಿ ತಮ್ಮನ್ನೇ ನೆಚ್ಚಿಕೊಂಡು, ಬಳಸಿ, ಗೌರವಿಸುವ ಸಾವಿರಾರು ಗ್ರಾಹಕರಿದ್ದರೂ ಅವರಿಗೆ ಸೇವೆ ನೀಡಲಾಗದ ದಯನೀಯ ಪರಿಸ್ಥಿತಿಗೆ ತಲುಪಿದೆ. ಇದರಿಂದ ಎಲ್ಲ ಸೇವೆಗಳನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಬಿಎಸ್​ಎನ್​ಎಲ್ ಸಂಸ್ಥೆಯ ಅಸಹಾಯಕತೆಯನ್ನು ಅರಿತ ಖಾಸಗಿ ಕುಳಗಳು ಫ್ರಾಂಚೈಸಿ ಪಡೆದು ಸಂಸ್ಥೆಯನ್ನೂ ಇನ್ನೊಂದೆಡೆ ಗ್ರಾಹಕರನ್ನೂ ಸುಲಿಗೆ ಮಾಡಲು ಮುಂದಾಗಿವೆ ಎಂಬ ಆರೋಪ ಕೇಳಿ ಬಂದಿದೆ.

    ಈ ಹಿಂದೆ ಎಫ್​ಟಿಟಿಎಚ್ ಸೇವೆಯನ್ನು ನೇರವಾಗಿ ಬಿಎಸ್​ಎನ್​ಎಲ್ ಒದಗಿಸುತ್ತಿತ್ತು. ಆಗ ನಿಗಮವೇ ಕೇಬಲ್ ಒದಗಿಸುತ್ತಿತ್ತು. ಗ್ರಾಹಕರಿಂದ ಕೇಬಲ್ ಶುಲ್ಕ ಪಡೆಯುತ್ತಿರಲಿಲ್ಲ. ಠೇವಣಿ ಹಾಗೂ ಮೋಡೆಮ್ ಶುಲ್ಕವನ್ನಷ್ಟೇ ಪಡೆಯಲಾಗುತ್ತಿತ್ತು. ಈಗ ಜಿಲ್ಲೆಯ ಎಫ್​ಟಿಟಿಎಚ್ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಖಾಸಗಿಗೆ ವಹಿಸಲಾಗಿದೆ. ಬಿಎಸ್​ಎನ್​ಎಲ್ ಇಂಟರ್​ನೆಟ್ ಬಿಟ್ಟರೆ ಯಾವುದೇ ಕೇಬಲ್, ಮೋಡೆಮ್ ಅಥವಾ ನಿರ್ವಹಣೆಯ ಜವಾಬ್ದಾರಿ ಹೊಂದಿಲ್ಲ. ಕೇಬಲ್​ಗೆ ಇಂತಿಷ್ಟೇ ಎಂದು ವೆಚ್ಚ ವಿಧಿಸಬೇಕು ಎಂಬ ನಿಬಂಧನೆಯನ್ನು ಫ್ರಾಂಚೈಸಿಗಳಿಗೆ ವಿಧಿಸಿಲ್ಲ. ಆದರೆ, ಹೆಚ್ಚುವರಿ ಶುಲ್ಕ ಆಕರಣ ಬಗ್ಗೆ ಲಿಖಿತ ದೂರು ಬಂದರೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲು ಪ್ರಯತ್ನಿಸಲಾಗುವುದು.

    | ರವಿಕಿರಣ ವಿ.ಜನ್ನು

    ಡಿಜಿಎಂ, ಬಿಎಸ್​ಎನ್​ಎಲ್ ಉತ್ತರ ಕನ್ನಡ

    ಅಧಿಕಾರಿಗಳ ಬಳಿ ಉತ್ತರವಿಲ್ಲ

    ಖಾಸಗಿ ಫ್ರಾಂಚೈಸಿಗಳು ಒಬ್ಬ ಗ್ರಾಹಕನಿಂದ ಎಫ್​ಟಿಟಿಎಚ್ ಕೇಬಲ್​ಗೆ ಗರಿಷ್ಠ ಎಷ್ಟು ಹಣ ಪಡೆಯಬಹುದು ಎಂಬ ಬಗ್ಗೆ ನಿಗಮದ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ.

    ಕೇಬಲ್, ಮೋಡೆಮ್ ರಿಸೀವಟರ್ ಸೆಟ್​ಗಳ ಗುಣಮಟ್ಟ ಯಾವುದು. ಕೆಲ ವರ್ಷಗಳ ನಂತರ ನಿರ್ವಹಣೆ ಹಾಗೂ ಸೇವೆಯನ್ನು ಯಾರು ನೀಡಬೇಕು ಎಂಬ ಬಗ್ಗೆ ನಿಗಮದ ಅಧಿಕಾರಿಗಳ ಬಳಿ ಸ್ಪಷ್ಟತೆ ಇಲ್ಲ.

    ಬಿಎಸ್​ಎನ್​ಎಲ್ ಹೆಸರು ಬಳಸಿಕೊಂಡು ಫ್ರಾಂಚೈಸಿಗಳು ಮಾಡುವ ವ್ಯವಹಾರಗಳಿಗೆ ಯಾರು ಜವಾಬ್ದಾರಿ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts