More

    ಬಿಎಸ್ಸೆಸ್ಕೆ ಬೀಗ ಹಾಕುವ ಬದಲು ಸರ್ಕಾರದ ಮೇಲೆ ಒತ್ತಡ ಹೇರಿ

    ಹುಮನಾಬಾದ್: ರೈತರು ಕಾರ್ಖಾನೆಗೆ ಬೀಗ ಹಾಕಿದರೆ ಪ್ರಯೋಜನವಿಲ್ಲ. ಬದಲಿಗೆ ಸರ್ಕಾರವನ್ನು ಒತ್ತಾಯಿಸಿದರೆ ಕಾರ್ಖಾನೆ ಜತೆಗೆ ಅವರಿಗೂ ಲಾಭವಾಗಲಿದೆ ಎಂದು ಹಳ್ಳಿಖೇಡ(ಬಿ)ದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಅಧ್ಯಕ್ಷ ಸುಭಾಷ ಕಲ್ಲೂರ ಹೇಳಿದರು.

    ಸರ್ಕಾರದ ಯಾವುದೇ ಸಹಾಯ, ಸಹಕಾರ ನೀಡುವ ಭರವಸೆ ಇರಲಿಲ್ಲ. ಬ್ಯಾಂಕ್ನವರು ಸಾಲ ಕೊಡಲು ನಿರಾಕರಿಸಿದ್ದರ ಮಧ್ಯೆಯೂ ನೂತನ ಆಡಳಿತ ಮಂಡಳಿ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಎರಡು ವರ್ಷ ಮುಚ್ಚಿದ್ದ ಹಾಗೂ ಐದು ವರ್ಷದ ಲೆಕ್ಕಪತ್ರವೇ ಇರದ ಕಾರ್ಖಾನೆಯನ್ನು ಪುನರಾರಂಭ ಮಾಡಿದೆ. ಹೀಗಾಗಿ ಬೀಗ ಹಾಕುವ ಬದಲು ಸರ್ಕಾರವನ್ನು ಒತ್ತಾಯಿಸುವಂತೆ ರೈತ ಸಂಘಟನೆಗಳಿಗೆ ಕೋರುವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    2018ರಲ್ಲಿ ತಯಾರಿಸಿದ ಸಕ್ಕರೆ ಮಾರಾಟದ ಹಣದಿಂದ ಕಾರ್ಮಿಕರಿಗೆ ವೇತನ ಸೇರಿ ಇತರ ಖರ್ಚು-ವೆಚ್ಚ ನಿಭಾಯಿಸಲಾಗಿದೆ. ಪ್ರಾರಂಭದಲ್ಲಿ ಕಾರ್ಖಾನೆ ದುರಸ್ತಿಗೆ ನಾಲ್ಕೈದು ತಿಂಗಳು ಬೇಕಾಯಿತು. ಕಳೆದ ಡಿಸೆಂಬರ್ 14ಕ್ಕೆ ಕ್ರಷಿಂಗ್​ಗೆ ಚಾಲನೆ ನೀಡಿ ಸಾಕಷ್ಟು ಪ್ರಯತ್ನದ ಫಲವಾಗಿ ಫೆಬ್ರವರಿ 28ರವರೆಗೆ ನಡೆದಿದ್ದು, 54,574 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಟನ್​ಗೆ 1000 ರೂ.ನಂತೆ 1.15 ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಲಾಗಿದೆ. ಜನವರಿ ಮೊದಲನೇ ವಾರ ಕಬ್ಬು ಸಾಗಿಸಿದ ರೈತರಿಗೆ 15 ಲಕ್ಷ ರೂ. ಅವರ ಖಾತೆಗೆ ಹಾಕಲಾಗಿದೆ. ನಂತರ ಕಬ್ಬು ಸಾಗಿಸಿದವರಿಗೆ ಹಣ ಕೊಡಬೇಕಿದೆ. ಸೆಲ್ಫ್ ಪೇಮೆಂಟ್ 7 ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕಾರ್ಮಿಕರ ಇನ್ನೂ 4 ಕೋಟಿ ರೂ. ವೇತನ ಬಾಕಿ ಇದ್ದು, ಹಳೆಯ ಬಾಕಿ ಸರ್ಕಾರದಿಂದ ಬಂದ ಬಳಿಕ ವಿತರಿಸಲಾಗುವುದು ಎಂದು ಹೇಳಿದರು.

    ಕಾರ್ಖಾನೆ ಬಾಡಿಗೆ ನೀಡಲು ತೀರ್ಮಾನ: ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಖಾನೆಯನ್ನು ಬಾಡಿಗೆ ಮೇಲೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಐದಾರು ತಿಂಗಳ ಪ್ರಕ್ರಿಯೆ ಇದ್ದು, ಸರ್ಕಾರದ ಮಟ್ಟದಲ್ಲಿ ಟೆಂಡರ್ ಕರೆಯಬೇಕಾಗುತ್ತದೆ. ಯಾರಾದರೂ ಕಾರ್ಖಾನೆ ಏಳಿಗೆಗೆ ಮುಂದೆ ಬಂದರೆ ಆಹ್ವಾನ ನೀಡಲಾಗುವುದು. ಆದರೆ ಕೆಲವರು ಕಾರ್ಖಾನೆಗೆ ಯಾರೂ ಹಣ ನೀಡಬೇಡಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಕಲ್ಲೂರ ಬೇಸರ ವ್ಯಕ್ತಪಡಿಸಿದರು. ಕಾರ್ಖಾನೆಗೆ 20 ಕೋಟಿ ರೂ. ನೆರವು ಸರ್ಕಾರ ಕೊಡುವ ಭರವಸೆ ಇದ್ದು, ರೈತರು ಭಯಪಡಬೇಕಿಲ್ಲ. ಉಳಿದ ಹಣ ಶೀಘ್ರ ಪಾವತಿಸಲಾಗುವುದು. ಶಾಸಕರಾದ ರಾಜಶೇಖರ ಪಾಟೀಲ್, ಈಶ್ವರ ಖಂಡ್ರೆ, ಬಂಡೆಪ್ಪ ಖಾಶೆಂಪುರ ಸಹ ಪಕ್ಷಭೇದ ಮರೆತು ರೈತರ, ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ ಎಂದರು.

    ವ್ಯವಸ್ಥಾಪಕ ನಿರ್ದೇಶಕ ವೈಜಿನಾಥ ಉಪ್ಪಿನ್, ನಿರ್ದೇಶಕರಾದ ವಿಶ್ವನಾಥ ಪಾಟೀಲ್, ಮಾಣಿಕಪ್ಪ ಖಾಶೆಂಪುರ, ಅಶೋಕ ಪಾಟೀಲ್, ಬಕ್ಕಪ್ಪ ಬಸರೆಡ್ಡಿ, ಮಲ್ಲಿಕಾರ್ಜುನ ಪಾಟೀಲ್, ಶ್ರೀನಿವಾಸ ಪೋದ್ದಾರ, ಆಡಳಿತ ವ್ಯವಸ್ಥಾಪಕ ದಿಗಂಬರ ಸ್ವಾಮಿ ಇದ್ದರು.

    ಕಾರ್ಖಾನೆ ಸುಮಾರು 26 ಸಾವಿರ ರೈತ ಸದಸ್ಯರು, 500 ಕಾರ್ಮಿಕರನ್ನು ಹೊಂದಿದೆ. ಹೀಗಾಗಿ ಕಾರ್ಮಿಕರ ಮತ್ತು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯಿಂದ ಖಾಸಗಿ ಕಂಪನಿಗೆ ವೈಯಕ್ತಿಕ ಗ್ಯಾರಂಟಿ ಪತ್ರ ಸಲ್ಲಿಸಿ ಸಾಲ ಪಡೆದು ಕಾಖರ್ಾನೆ ಪ್ರಾರಂಭಿಸಲಾಗಿದೆ.
    | ಸುಭಾಷ ಕಲ್ಲೂರ, ಬಿಎಸ್ಎಸ್ಕೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts