More

    ಬಾಳೆ ಖರೀದಿಗೆ ಹಿಂದೇಟು, ಸಂಕಷ್ಟದಲ್ಲಿ ರೈತ

    ಬ್ಯಾಡಗಿ: ಸಮೃದ್ಧವಾಗಿ ಬೆಳೆದ ನಿಂತಿರುವ ಬಾಳೆ ಬೆಳೆ ಖರೀದಿಸಲು ವ್ಯಾಪಾರಸ್ಥರು ಬಾರದಿರುವುದರಿಂದ ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ರೈತ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಗ್ರಾಮದ ರೈತ ಯುವರಾಜ ದೊಡ್ಡಮನಿ ಪ್ರಸಕ್ತ ಸಾಲಿನಲ್ಲಿ ಸುಮಾರು 3 ಲಕ್ಷ ರೂ. ವ್ಯಯಿಸಿ, 4 ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬೆಳೆ ಉತ್ತಮವಾಗಿ ಬಂದಿದ್ದು, ಹೊಲದ ತುಂಬ ಬಾಳೆಗೊನೆಗಳು ಕಾಣುತ್ತಿವೆ. ಪ್ರತಿ ಗೊನೆ ಕನಿಷ್ಠ 30 ಕೆಜಿ ಇಳುವರಿ ಹೊಂದಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಖರೀದಿಗೆ ಮುಂದಾಗುತ್ತಿಲ್ಲ. ಒಂದಿಬ್ಬರು ಖರೀದಿದಾರರು ಬಂದಿದ್ದರಾದರರೂ, ಕೆಜಿಗೆ 2ರಿಂದ 3 ರೂ. ದರದಲ್ಲಿ ಕೇಳುತ್ತಿರುವುದು ರೈತನಿಗೆ ಸಂಕಷ್ಟ ತಂದಿಟ್ಟಿದೆ. ಈ ಕುರಿತು ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

    ಹಿಂದಿನ ವರ್ಷ ಬಾಳೆ ಮಳೆ- ಗಾಳಿಗೆ ನೆಲಕ್ಕುರುಳಿದ ಪರಿಣಾಮ ಆರ್ಥಿಕ ನಷ್ಟ ಎದುರಿಸಿದ್ದೆ. ಪ್ರಸಕ್ತ ಸಾಲಿನಲ್ಲಿ ಕನಿಷ್ಠ 10 ರೂ. ದರ ಸಿಗುವ ಲೆಕ್ಕಾಚಾರದಲ್ಲಿರುವ ನನ್ನ ಬಾಳೆಯನ್ನು ಕೆಜಿಗೆ 3 ರೂ. ಕೇಳುತ್ತಿರುವುದು ಯಾವ ನ್ಯಾಯ. ಸರ್ಕಾರ ಕೂಡಲೆ ಇಂತಹ ರೈತರ ನೆರವಿಗೆ ಧಾವಿಸುವ ಮೂಲಕ ನ್ಯಾಯ ಒದಗಿಸಬೇಕು. ಲಕ್ಷಾಂತರ ರೂ. ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ.
    | ಯುವರಾಜ ದೊಡ್ಡಮನಿ, ರೈತ


    ಜಿಲ್ಲೆಯ ಬಹುತೇಕ ರೈತರು ಬೆಳೆದ ತರಕಾರಿ, ಬಾಳೆ, ಪಪ್ಪಾಯಿ ಸೇರಿ ಬಹುತೇಕ ಬೆಳೆ ಖರೀದಿಸುವರು ಇಲ್ಲವಾಗಿದೆ. ಗೋವಿನ ಜೋಳಕ್ಕೆ ಬೆಲೆಯೆ ಇಲ್ಲದಂತಾಗಿದೆ. ಲಾಕ್​ಡೌನ್ ಮಾಡುತ್ತಿದ್ದಂತೆ ವರ್ತಕರು ಖರೀದಿ ಮಾತು ಎತ್ತುತ್ತಿಲ್ಲ. ಹೀಗಾದರೆ, ರೈತರ ದುಸ್ಥಿತಿಗೆ ಯಾರು ಹೊಣೆ. ಜಿಲ್ಲಾಧಿಕಾರಿಗಳು ಸೇರಿದಂತೆ ತೋಟಗಾರಿಕೆ, ಕೃಷಿ ಸಹಾಯಕ ನಿರ್ದೇಶಕರನ್ನು ಮಾತನಾಡಿಸಿದರೆ, ಕರೊನಾ ಕುರಿತು ತುರ್ತು ಕೆಲಸದಲ್ಲಿದ್ದೇವೆ. ಸ್ಥಳೀಯ ಅಧಿಕಾರಿಗಳನ್ನು ಸಂರ್ಪಸಲು ಹೇಳುತ್ತಾರೆ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದು, ಜಿಲ್ಲೆಯಿಂದ ಆಯ್ಕೆಗೊಂಡ ಕೃಷಿ ಸಚಿವರು ತುರ್ತಾಗಿ ಗಮನಹರಿಸಬೇಕು.
    | ಕಿರಣ ಗಡಿಗೋಳ, ರೈತ ಸಂಘದ ತಾಲೂಕು ಉಪಾಧ್ಯಕ್ಷ

    ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲ ಬೆಳೆ ಖರೀದಿಗೆ ಸಮಸ್ಯೆ ಉಂಟಾಗಿದೆ. ರೈತನ ಹೊಲಕ್ಕೆ ಭೇಟಿ ನೀಡಿ, ತೋಟಗಾರಿಕೆ ಜಿಲ್ಲಾ ಸಹಾಯಕ ನಿರ್ದೇಶಕರ ಗಮನಕ್ಕೆ ತಂದಿದ್ದು, ರೈತನ ಸಂಕಷ್ಟಕ್ಕೆ ಇಲಾಖೆ ಪರಿಹಾರ ಹುಡುಕಲಿದೆ.
    | ಅಶೋಕ ಕೊಪ್ಪದ, ತೋಟಗಾರಿಕೆ ಸಹಾಯಕ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts