More

    ಬಾಳೆಹೊನ್ನೂರಿನಲ್ಲಿ ವರುಣನ ಅಬ್ಬರಕ್ಕೆ ಅಪಾರ ಹಾನಿ

    ಬಾಳೆಹೊನ್ನೂರು: ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಒಂದು ಗಂಟೆ ಕಾಲ ಭಾರಿ ಮಳೆ ಸುರಿದಿದ್ದು, ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭಾನುವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಆರಂಭವಾದ ಮಳೆ ಒಂದೇ ಸಮನೆ ಅಬ್ಬರಿಸಿತು. ನಾಲ್ಕು ಗಂಟೆಯವರೆಗೆ ಎಡೆಬಿಡದೆ ಸುರಿಯಿತು. ಬಾಳೆಹೊನ್ನೂರಿನಿಂದ ಕಳಸ, ಹೊರನಾಡು ಸಂಪರ್ಕ ಕಲ್ಪಿಸುವ ಮಾಗುಂಡಿ ಸಮೀಪದ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ವಾಹನ ಸಂಚಾರ ಕಡಿತಗೊಂಡಿತ್ತು.

    ಪಟ್ಟಣದ ಪೊಲೀಸ್ ಠಾಣೆಯ ಕಾಂಪೌಂಡ್ ಒಂದು ಬದಿ ಕುಸಿದಿದೆ. ವಿವೇಕನಗರದ ಹರಿದಾಸ್ ಎಂಬುವರ ಮನೆಯ ಕಾಂಪೌಂಡ್ ಸಂಪೂರ್ಣ ಕುಸಿದು ಮನೆಗೆ ನೀರು ನುಗ್ಗಿ ಹಲವು ವಸ್ತುಗಳಿಗೆ ಹಾನಿಯಾಗಿದೆ. ಮಾರಿಗುಡಿ ರಸ್ತೆಯ ಅನ್ನಪೂರ್ಣ ಶಂಕರನಾರಾಯಣ ಭಟ್ ಎಂಬುವವರ ಮನೆಯ ಕಾಂಪೌಂಡ್ ಕುಸಿದಿದೆ.

    ಪಟ್ಟಣದ ಎಲ್ಲ ಮುಖ್ಯರಸ್ತೆಗಳು ಹಳ್ಳದಂತಾಗಿದ್ದವು. ಹಲವು ಮನೆಗಳು, ಎನ್.ಆರ್.ಪುರ ರಸ್ತೆ, ಮಾರ್ಕೆಟ್ ರಸ್ತೆಯ ವಿವಿಧ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಭಾನುವಾರ ಸಂತೆಯಾಗಿದ್ದರಿಂದ ಸಂತೆ ಮಾರುಕಟ್ಟೆಯಲ್ಲಿ ಹಾಕಿದ್ದ ಅಂಗಡಿಗಳಲ್ಲಿ ದಿನಸಿ ವಸ್ತುಗಳು ನೆನೆದವು.

    ರಂಭಾಪುರಿ ಮಠದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಭತ್ತದ ಗದ್ದೆಗೆ ನುಗ್ಗಿ ಕೆರೆಯಂತಾಗಿತ್ತು. ಕಲ್ಲು, ಮರಳು ಗದ್ದೆಯಲ್ಲಿ ಸಂಗ್ರಹವಾಗಿ ರೈತರಿಗೆ ನಷ್ಟ ಸಂಭವಿಸಿದೆ. ಮಾಗುಂಡಿ, ಮಹಲ್ಗೋಡು ಸುತ್ತಮುತ್ತಲೂ ಮಳೆ ನೀರು ಗದ್ದೆಗೆ ನುಗ್ಗಿ ನಷ್ಟವಾಗಿದೆ. </p><p>ಪಟ್ಟಣದ ಡೋಬಿಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಕಗ್ಗನಗದ್ದೆ-ವಿವೇಕನಗರ ರಸ್ತೆಗೆ ನೀರು ನುಗ್ಗಿತ್ತು. ಪಟ್ಟಣದ ಮುಖ್ಯರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿಯುತ್ತಿದ್ದ ಪರಿಣಾಮ ವಾಹನಗಳು ಸಂಚರಿಸದಂತಾಗಿತ್ತು.

    ಎನ್.ಆರ್.ಪುರ ರಸ್ತೆಯ ಸೀಕೆ ಮುದುಗುಣಿ, ಬಂಡಿಹಳ್ಳ ಹಾಗೂ ಚಿಕ್ಕಮಗಳೂರು ರಸ್ತೆಯ ಎಲೆಕಲ್ಲು ಬಳಿ ಅರಣ್ಯಪ್ರದೇಶದಿಂದ ಧಾರಾಕಾರ ಪ್ರಮಾಣದಲ್ಲಿ ನೀರು ರಸ್ತೆಗೆ ಹರಿದು ಬಂದಿದ್ದರಿಂದ ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸೀಕೆ, ವಾಟುಕೊಡಿಗೆ ಬಳಿ ಹಳ್ಳ ಉಕ್ಕಿ ಹರಿದು ಗಂಟೆಗಳ ಕಾಲ ವಾಹನ ಸಂಚಾರ ಕಡಿತಗೊಂಡಿತ್ತು.  ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ದಿಢೀರ್ ಧಾರಾಕಾರ ಮಳೆಗೆ ಹಾನಿಯುಂಟಾಗಿದ್ದು ಜನಜೀವನವನ್ನು ಕೇವಲ ಒಂದು ಗಂಟೆಯಲ್ಲಿ ಅಸ್ತವ್ಯಸ್ತಗೊಳಿಸಿತ್ತು. ಒಂದು ಗಂಟೆಯಲ್ಲಿ ಮೂರು ಇಂಚಿಗೂ ಅಕ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts