More

    ಮಳೆಯಿಂದ ರಸ್ತೆಗಳೆಲ್ಲ ಗುಂಡಿಗಳಾಗಿ ಪರಿವರ್ತನೆ

    ರಾಣೆಬೆನ್ನೂರ: ರಾಣೆಬೆನ್ನೂರ ಸೇರಿ ಜಿಲ್ಲಾದ್ಯಂತ ನಿರಂತರ ಮಳೆಯಿಂದಾಗಿ ಬೆಳೆ, ಮನೆಗಳು ಮಾತ್ರವಲ್ಲದೆ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ವಾಹನ ಸವಾರರ ಗೋಳಾಟ ಕೇಳುವವರಿಲ್ಲದಂತಾಗಿದೆ.

    ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ, ಅವಾಂತರಗಳ ಲೆಕ್ಕ ಇನ್ನೂ ಸಿಗುತ್ತಿಲ್ಲ. ಗ್ರಾಮೀಣ, ನಗರ ಪ್ರದೇಶ ಸೇರಿ ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಸಂಚಾರವೇ ದುಸ್ತರವೆನಿಸುತ್ತಿದೆ. ಜಿಲ್ಲಾದ್ಯಂತ 1 ಸಾವಿರಕ್ಕೂ ಅಧಿಕ ಕಿ.ಮೀ.ನಷ್ಟು ರಸ್ತೆ ಮಳೆಯಿಂದ ಹದಗೆಟ್ಟು ಹೋಗಿದೆ.

    ಯಾವ ರಸ್ತೆ, ಎಷ್ಟು ಹಾಳು…?: ಜಿಲ್ಲೆಯಲ್ಲಿ 97 ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದೆ. 218 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 67 ಸೇತುವೆಗಳಿಗೆ ಹಾನಿಯಾಗಿದೆ. ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ಯಾರಿಗೂ ಬೇಡ ಎಂಬಂತಾಗಿದೆ. ಬರೋಬ್ಬರಿ 1361 ಕಿಲೋಮೀಟರ್ ಗ್ರಾಮೀಣ ರಸ್ತೆ, ಈ ಮಾರ್ಗಗಳಲ್ಲಿನ 140 ಸೇತುವೆ ಹಾಳಾಗಿದೆ. ಸುಸ್ಥಿತಿಯಲ್ಲಿರುವ ರಸ್ತೆ ಯಾವುದು ಎಂದು ಹುಡುಕಿದರೂ ಸಿಗಂತಾಗಿದೆ. ಅಲ್ಲದೆ, ಹರಿಹರದಿಂದ ತಡಸದವರೆಗಿನ ರಾಷ್ಟ್ರೀಯ ಹೆದ್ದಾರಿಯೂ ಸಂಚಾರಕ್ಕೆ ಸಾಧ್ಯವಿಲ್ಲದಷ್ಟು ಹಾಳಾಗಿದೆ.

    ರಾಣೆಬೆನ್ನೂರ ನಗರದಿಂದ ಹಾವೇರಿ, ಹಾವೇರಿಯಿಂದ ಗುತ್ತಲ, ಹೊಳಲು, ಮೈಲಾರ, ಕಾಗಿನೆಲೆ, ಹಂಸಭಾವಿ, ಸವಣೂರ-ಲಕ್ಷೆ್ಮೕಶ್ವರ, ಬಂಕಾಪುರ ಸೇರಿ ಜಿಲ್ಲೆಯ ಪ್ರಮುಖ ಹೆದ್ದಾರಿ ಹಾಳಾಗಿವೆ. ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿ ಭೀಕರವಾಗಿದೆ. ರಸ್ತೆ ಮಧ್ಯೆ ದೊಡ್ಡ ಹೊಂಡಗಳು ಬಿದ್ದು, ಸವಾರರು ಏಳುತ್ತ ಬೀಳುತ್ತ ಸಾಗುವಂತಾಗಿದೆ.

    ಕೆಲವು ರಸ್ತೆಗಳಲ್ಲಂತೂ ಡಾಂಬರೀಕರಣ ಮಾಡಿದ ಕುರುಗಳೇ ಕಾಣದಂತಾಗಿವೆ. ಮಳೆಗಾಲಕ್ಕೂ ಮುನ್ನವೇ ಹಾಳಾಗಿದ್ದ ರಸ್ತೆಗಳಲ್ಲಿ ಈಗ ಅಡಿಗಟ್ಟಲೇ ಆಳದ ಗುಂಡಿಗಳು ಬಿದ್ದಿವೆ. ಮಳೆ ಬಂದರಂತೂ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ಅನೇಕರು ಬಿದ್ದು ಅಪಘಾತ ಮಾಡಿಕೊಂಡಿರುವ ಉದಾಹರಣೆಗಳಿವೆ.

    ಇನ್ನು ನಗರ ಪ್ರದೇಶದ ರಸ್ತೆಗಳು ಇವಕ್ಕಿಂತ ಭಿನ್ನವಾಗಿಲ್ಲ. ನಗರದ ರಸ್ತೆಗಳು ಹಾಳಾಗಿ ಹೋಗಿವೆ. ಯಾವ ಓಣಿ, ವಾರ್ಡ್​ಗಳಲ್ಲೂ ಸುಸ್ಥಿತಿಯ ರಸ್ತೆ ಕಾಣುವುದಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳ ಮೇಲೆಯೇ ನೀರು ಹರಿದು ಡಾಂಬರು ಕಿತ್ತು ಹೊಂಡಗಳು ನಿರ್ವಣವಾಗಿವೆ. ಕೆಲವು ಕಡೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಣ್ಣ ಮಳೆ ಬಂದರೂ ಸಂಚಾರ ಅಸಾಧ್ಯವಾಗುತ್ತಿದೆ.

    ಸರ್ವೀಸ್ ರಸ್ತೆ ಸಂಚಾರ ದುಸ್ತರ: ಷಟ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗಿದ್ದರೂ, ಹೆದ್ದಾರಿ ಪ್ರಾಧಿಕಾರದವರು ಸರ್ವೀಸ್ ರಸ್ತೆಗಳನ್ನು ಎಲ್ಲಿಯೂ ಸರಿಪಡಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಮೂಲಕ ರಾಣೆಬೆನ್ನೂರಿನಿಂದ ಹಾವೇರಿಗೆ ತೆರಳುವ ದಾರಿ ಮಧ್ಯೆ ಛತ್ರ, ಮೋಟೆಬೆನ್ನೂರ ಬಳಿ ಸರ್ವೀಸ್ ರಸ್ತೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.

    ಹಾವೇರಿ ನಗರಕ್ಕೆ ಪ್ರವೇಶಿಸುವ ಎಲ್ಲ ಸೇವಾ ರಸ್ತೆಗಳು ಸಂಪೂರ್ಣ ಹಾಳಾಗಿದೆ. ತೋಟದಯಲ್ಲಾಪುರ ಕೆಳ ಸೇತುವೆ, ಕೆರಿಮತ್ತಿಹಳ್ಳಿ, ಸೇಂಟ್ ಆನ್ಸ್ ಸ್ಕೂಲ್ ಬಳಿ ಯಾವ ವಾಹನವೂ ಸಂಚರಿಸದಂತಾಗಿದೆ. ಒಂದು ವೇಳೆ ಅರಿಯದೆ ಅಲ್ಲಿಂದ ಸಾಗಿದರೆ ಹೂಳಿನಲ್ಲಿ ಸಿಲುಕಿ ವಾಹನ ಅಲ್ಲೇ ನಿಲ್ಲುವಷ್ಟರ ಮಟ್ಟಿಗೆ ರಸ್ತೆ ಕೆಟ್ಟಿದೆ. ಆದ್ದರಿಂದ ವಾಹನ ಸವಾರರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ ಓಡಾಡುವಂತಾಗಿದೆ.

    ನಗರ ಪ್ರದೇಶದ ಮಾತ್ರವಲ್ಲದೆ ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿ ಹೋಗಿವೆ. ಆದರೆ, ಅವುಗಳನ್ನು ತಾತ್ಕಾಲಿಕವಾಗಿ ಮೆಟ್ಲಿಂಗ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ವಾಹನ ಓಡಿಸಲು ತುಂಬ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

    | ರಮೇಶ ಎಚ್., ರಾಣೆಬೆನ್ನೂರ ನಿವಾಸಿ

    ಜಿಲ್ಲೆಯಲ್ಲಿ ಸತತ ಮಳೆ ಹಾಗೂ ನೆರೆಯಿಂದ ರಸ್ತೆ, ಸೇತುವೆಯಂತಹ ಮೂಲಸೌಕರ್ಯಗಳು ಸೇರಿ 597 ಕೋಟಿ ರೂ. ನಷ್ಟ ಉಂಟಾಗಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ 113 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬರುತ್ತಿದ್ದಂತೆ ರಸ್ತೆ ಸೇರಿ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು.

    | ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts