More

    ಬಾಡಗಿ ಆರೋಗ್ಯ ಕೇಂದ್ರ ಶಿಥಿಲ

    ಅರಟಾಳ: ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಟ್ಟಡ ನಿರ್ಮಾಣಗೊಂಡು ಒಂದು ದಶಕ ಕಳೆದಿದೆ. ಆದರೆ, ಇಲ್ಲಿಯವರೆಗೆ ವೈದ್ಯಾಧಿಕಾರಿ, ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದ ಜನರಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಮಸ್ಯೆಯಾಗಿದೆ.

    ಬಾಡಗಿ ಗ್ರಾಮದ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರವು 2010-11 ನೇ ಸಾಲಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಟ್ಟಡ ನಿರ್ಮಿಸಿದೆ. ಜತೆಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಿದೆ. ಆದರೆ, ಸಿಬ್ಬಂದಿ ನೇಮಕ, ನಿರ್ವಹಣೆ ಇಲ್ಲದೆ ಕಟ್ಟಡ ಸಂಪೂರ್ಣ ಪಾಳುಬಿದ್ದ ಸ್ಥಿತಿಗೆ ತಲುಪಿದೆ.

    ಹಲವು ವರ್ಷಗಳಿಂದ ಆಸ್ಪತ್ರೆಗೆ ವೈದ್ಯರು, ನರ್ಸ್‌ಗಳನ್ನು ನೇಮಿಸಿ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವಂತೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ, ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲ. ಕರೊನಾ ಸೋಂಕು ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜನರಿಗೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ನಿರೀಕ್ಷೆ ಇಡೆಲಾಗಿತ್ತು. ಆದರೆ, ಆರೋಗ್ಯ ಇಲಾಖೆ ಮಾತ್ರ ಆಸ್ಪತ್ರೆಗೆ ವೈದ್ಯರ, ಸಿಬ್ಬಂದಿ ನೇಮಕಕ್ಕೆ ಮುಂದಾಗಿಲ್ಲ.

    ಗ್ರಾಮವು 4 ರಿಂದ 5 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ, ಆರೋಗ್ಯ ಸೌಲಭ್ಯ ಇಲ್ಲದಿರುವ ಕಾರಣ ದೂರದ ಊರುಗಳಿಗೆ ತೆರಬೇಕಾಗಿದೆ. ಅಲ್ಲದೆ, ಗ್ರಾಮಕ್ಕೆ ಸರಿಯಾದ ಸಾರಿಗೆ ಸೌಲಭ್ಯ ಇಲ್ಲದ್ದರಿಂದ ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳು, ಗರ್ಭಿಣಿಯರು ಅನಾರೋಗ್ಯಕ್ಕೆ ಒಳಗಾದರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಥಣಿ ತಾಲೂಕಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಿದ ಕಾರಣ ಆರೋಗ್ಯ ಸಿಬ್ಬಂದಿ ಕೊರತೆ ಇದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಸಿಬ್ಬಂದಿ ನೇಮಿಸಲು ಕ್ರಮ ವಹಿಸಲಾಗುವುದು.
    | ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ

    ಬಾಡಗಿ ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ಪ್ರತ್ಯೇಕ ವೈದ್ಯರಿಲ್ಲ . ಎಎನ್‌ಎಂ ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಲ್ಲಿ ಎಎನ್‌ಎಂ ಹುದ್ದೆಯೂ ಖಾಲಿಯಿದೆ. ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಎಎನ್‌ಎಂ ಸಿಬ್ಬಂದಿ ಇದ್ದಾರೆ.
    | ಡಾ.ಬಸಗೌಡ ಕಾಗೆ, ತಾಲೂಕು ವೈದ್ಯಾಧಿಕಾರಿ , ಅಥಣಿ

    | ಶ್ರೀಶೈಲ ಮಾಳಿ ಅರಟಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts