More

    ಬಸ್ ಹತ್ತಲಿಕ್ಕೆ ರೊಕ್ಕ ಇಲ್ಲ; ವಿಮಾನ ಯಾಕ ಬೇಕ್ರೀ ನಮಗ?

    ಬಾಗಲಕೋಟೆ: ಸಾಹೇಬ್ರರ ನಮ್ಮ ಕ್ಷೇತ್ರದ ಶಾಸಕರು, ಸಚಿವರು ನಮ್ಮೂರು ಭೂಮಿದಾಗ ವಿಮಾನ ನಿಲ್ದಾಣ ಮಾಡಾಕ ಹೊಂಟಾರ. ಆದ್ರ ನಮಗ ಬಸ್ ಹತ್ತಲಿಕ್ಕೆ ರೊಕ್ಕ ಇಲ್ಲ. ಈ ವಿಮಾನ ಮತ್ತು ನಿಲ್ದಾಣ ತೊಗೊಂಡ ಏನು ಮಾಡೋನ..!!
    ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮಸ್ಥರು ಬಾಗಲಕೋಟೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಅಳಲು ತೋಡಿಕೊಂಡರು. ಅಲ್ಲದೆ ವಿಮಾನ ನಿಲ್ದಾಣ ಮತ್ತು ಕೈಗಾರಿಕಾ ಸ್ಥಾಪನೆಗೆ ಹಲಕುರ್ಕಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗಂಬರೇಶ್ವರ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಹಲಕುರ್ಕಿ ಗ್ರಾಮದಲ್ಲಿ ಭೂಮಿಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಆ ಬದುಕನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಬಾರದು. ವಿಮಾನ ನಿಲ್ದಾಣ ಹಾಗೂ ಕೈಗಾರಿಕೆಗೆ ಬಳಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ನನ್ನದು ವಿರೋಧವಿದೆ. ರೈತರ ಭೂಮಿಯನ್ನು ಸ್ವಾನಪಡಿಸಿಕೊಳ್ಳಲು ಮುಂದಾದರೆ ನ್ಯಾಯಾಲಯದ ಮೆಟ್ಟಿಲು ಏರಲು ಗ್ರಾಮಸ್ಥರು ಸಿದ್ಧರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
    ರೈತ ಆರ್.ಎ.ಪಾಟೀಲ ಮಾತನಾಡಿ, ಕೈಗಾರಿಕಾ ಸಚಿವರು ಗ್ರಾಮಕ್ಕೆ ಬಂದಾಗ ಈ ಭಾಗದಲ್ಲಿ ನೀರಾವರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನಂತರ ದಿನಗಳಲ್ಲಿ ಈಗ ವಿಮಾನ ನಿಲ್ದಾಣ ಹಾಗೂ ಸಕ್ಕರೆ ಕಾರ್ಖಾನೆಯನ್ನು ಇಲ್ಲಿ ಸ್ಥಾಪಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹಲಕುರ್ಕಿ ಗ್ರಾಮದವರು ಭೂಮಿ ನೀಡುವದಿಲ್ಲ. ಶಾಸಕರ ಬಗ್ಗೆ ನಮಗೆ ಯಾವುದೇ ವೈರತ್ವ ಇಲ್ಲ. ನಮ್ಮ ಭೂಮಿಯನ್ನು ಉಳಿಸಿಕೊಟ್ಟು ರೈತರ ಕುಟುಂಬಗಳನ್ನು ಉಳಿಸಬೇಕು. ಭೂಮಿಯನ್ನು ಕಳೆದುಕೊಂಡು ಗುಳೇ ಹೋಗುವಂತಹ ಸ್ಥಿತಿಯನ್ನು ನಮಗೆ ತರಬಾರದು ಎಂದು ಎಂದು ತಿಳಿಸಿದರು.
    ಬಾಬಣ್ಣ ತೆಗ್ಗಿ ಮಾತನಾಡಿ, ನನ್ನದೂ 32 ಎಕರೆ ಜಮೀನು ಇದೆ. ನನ್ನ ಜಮೀನು ಮಾತ್ರ ಕೈಗಾರಿಕೆಗೆ ಹೋಗುತ್ತದೆ. ಆದರೆ ನನ್ನ ಪಕ್ಕದ ಜಮೀನಿನ ಬಳಿ ಇರುವ ಇನ್ನೊಂದು ಸಮಾಜದವರ ಜಮೀನು ಸ್ವಾಧೀನವಾಗುವುದಿಲ್ಲ. ಇಲ್ಲಿಯೂ ಕೂಡ ಜಾತೀಯತೆಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
    ಆರ್.ಎ.ಪಾಟೀಲ, ಶಿವಪ್ಪ ಹುರಡಿ, ಬಾಬಣ್ಣ ತೆಗ್ಗಿ, ಸಂಗಪ್ಪ ಮಾದರ, ಆರ್.ಟಿ.ಬಂಡಿವಡ್ಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts