More

    ಬಸ್ ಬೇಡವೆಂದ ನಗರದ ಪಾಲಕರು

    ಹುಬ್ಬಳ್ಳಿ: ಕರೊನಾ ಸೋಂಕಿನ ಭೀತಿಯಿಂದಾಗಿ ನಗರ ಪ್ರದೇಶದ ಪಾಲಕರು ತಮ್ಮ ಎಸ್​ಎಸ್​ಎಲ್​ಸಿ ಮಕ್ಕಳನ್ನು ಸ್ವಂತ ವಾಹನದಲ್ಲಿಯೇ ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.

    ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಸಾರ್ವಜನಿಕ ಶಿಕ್ಷಣ ಇಲಾಖೆ ಬಸ್​ಗಳ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಸ್​ಗಳನ್ನು ಎರವಲು ಪಡೆಯಲಾಗಿದೆ. ಆದರೆ, ಬಸ್​ಗಳಲ್ಲಿ ಸಾಮೂಹಿಕವಾಗಿ ಪ್ರಯಾಣಿಸಿದರೆ ಕರೊನಾ ಸೋಂಕು ಬರಬಹುದೆಂಬ ಭೀತಿಯಿಂದ ನಗರ ಪ್ರದೇಶದ ಪಾಲಕರು ತಮ್ಮ ಮಕ್ಕಳನ್ನು ಸ್ವಂತ ವಾಹನದಲ್ಲಿಯೇ ಕೇಂದ್ರಗಳಿಗೆ ಬಿಡಲು ಹಾಗೂ ಮರಳಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ.

    ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಎಸ್​ಎಸ್​ಎಲ್​ಸಿ ಮಕ್ಕಳನ್ನು ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಒಟ್ಟು 10 ಬಸ್​ಗಳನ್ನು ಖಾಸಗಿ ಶಿಕ್ಷಣ ಇಲಾಖೆಯಿಂದ ಎರವಲು ಪಡೆಯಲಾಗಿದೆ. ಆದರೆ, ಶಹರ ಕ್ಷೇತ್ರದಿಂದ ಇದುವರೆಗೆ ಯಾವುದೇ ಶಾಲೆ ಬಸ್​ಗಳಿಗಾಗಿ ಬೇಡಿಕೆ ಇಟ್ಟಿಲ್ಲ. ಆದರೂ ಇಲಾಖೆಯಿಂದ 10 ಬಸ್​ಗಳನ್ನು ಮೀಸಲಿಡಲಾಗಿದೆ.

    ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಒಟ್ಟು 30 ಬಸ್​ಗಳನ್ನು ಮೀಸಲಿಡಲಾಗಿದೆ. 10 ಬಸ್​ಗಳನ್ನು ಖಾಸಗಿ ಶಿಕ್ಷಣ ಇಲಾಖೆಯಿಂದ ಪಡೆಯಲಾಗಿದೆ. 8 ಬಸ್​ಗಳು ಸಾರಿಗೆ ಸಂಸ್ಥೆಯ ಗ್ರಾಮೀಣ ಘಟಕದಿಂದ ಹಾಗೂ 11 ಬಸ್​ಗಳು ಸಾರಿಗೆ ಸಂಸ್ಥೆಯ ಶಹರ ವಿಭಾಗದಿಂದ ವ್ಯವಸ್ಥೆ ಮಾಡಲಾಗಿದೆ. ಅಗಸ್ಱ ಫೌಂಡೇಷನ್​ನಿಂದ ನೀಡಿರುವ 1 ಬಸ್ ಕೋಳಿವಾಡದ ವಿದ್ಯಾರ್ಥಿಗಳನ್ನು ಶಿರಗುಪ್ಪಿಯಲ್ಲಿನ ಪರೀಕ್ಷೆ ಕೇಂದ್ರಕ್ಕೆ ಕರೆ ತರಲಿದೆ.

    ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಬಸ್​ಗಳನ್ನೇ ಅವಲಂಬಿಸಿದ್ದು, ಖಾಸಗಿ ವಾಹನಗಳಲ್ಲಿ ಪರೀಕ್ಷೆ ಕೇಂದ್ರಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ವಿರಳ.

    ಕರೊನಾ ಸೋಂಕಿನ ಭೀತಿಯಿಂದಾಗಿ ಪಾಲಕರು ಈಗಾಗಲೇ ತಮ್ಮ ಮಕ್ಕಳಿಗೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡಿದ್ದು, ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಮಾಡಿರುವ ವ್ಯವಸ್ಥೆಯನ್ನೂ ಪರಿಶೀಲಿಸಿದ್ದಾರೆ.

    ಶಹರ ವ್ಯಾಪ್ತಿಯಲ್ಲಿ 10 ಬಸ್​ಗಳನ್ನು ಮೀಸಲಿಟ್ಟಿದ್ದೇವೆ. ಆದರೂ ಇದುವರೆಗೆ ಯಾವುದೇ ಶಾಲೆ ಬಸ್​ಗಳಿಗಾಗಿ ಬೇಡಿಕೆ ಇಟ್ಟಿಲ್ಲ. ಪಾಲಕರು ಸ್ವಂತ ವಾಹನಗಳಲ್ಲಿಯೇ ತಮ್ಮ ಮಕ್ಕಳನ್ನು ಪರೀಕ್ಷೆ ಕೇಂದ್ರಗಳಿಗೆ ಕರೆತರಲು ಆಸಕ್ತಿ ತೋರಿದ್ದಾರೆ.

    | ಶ್ರೀಶೈಲ ಕರಿಕಟ್ಟಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ

    ಅಗತ್ಯ ಸಿದ್ಧತೆ

    ಪರೀಕ್ಷೆ ಕೇಂದ್ರಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಶಾಲೆಯ ಮುಂಭಾಗದಲ್ಲಿ ಬಿಳಿ ಬಣ್ಣದ ಗುರುತು ಹಾಕಲಾಗಿದೆ. ಪ್ರತಿ ವಿದ್ಯಾರ್ಥಿಯ ಥರ್ಮಲ್ ಸ್ಕ್ರೀನಿಂಗ್ ನಡೆಸಿ ದೇಹದ ತಾಪಮಾನ ದಾಖಲಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸರ್, ಮಾಸ್ಕ್ ನೀಡಲಾಗುತ್ತದೆ.

    ಪರೀಕ್ಷೆಗೆ ಬರುವ ಮುನ್ನ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರವಿಂದ ನಗರದ ವಿವೇಕಾನಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಶಾಲೆಯ ಆವರಣದಲ್ಲಿ ಗುರುತು ಹಾಕಿರುವ ಜಾಗದಲ್ಲಿ ವಿದ್ಯಾರ್ಥಿಗಳನ್ನು ನಿಲ್ಲಿಸಲಾಯಿತು. ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ನೀಡಿ ಪರೀಕ್ಷೆ ಕೊಠಡಿಯೊಳಗೆ ಕಳುಹಿಸಲಾಯಿತು. ಕೊಠಡಿಯಲ್ಲಿ ಪರಸ್ಪರ ಅಂತರದಂತೆ ವಿದ್ಯಾರ್ಥಿಗಳನ್ನು ಕೂರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts