More

    ಬಸ್ ನಿಲ್ದಾಣದಲ್ಲಿ ಕರೊನಾ ಶಂಕಿತ ವ್ಯಕ್ತಿಯ ಶವ!

    ರಾಣೆಬೆನ್ನೂರ: ನಗರದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕರೊನಾ ಶಂಕಿತ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆ ಪಕ್ಕದ ಬಸ್ ನಿಲ್ದಾಣದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಇಟ್ಟ ಘಟನೆ ಶನಿವಾರ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಜನನಿಬಿಡ ಬಸ್ ನಿಲ್ದಾಣದ ಬಳಿ ಮೃತದೇಹವನ್ನಿಟ್ಟಿದ್ದರಿಂದ ಸಾರ್ವಜನಿಕರು ಆತಂಕಕ್ಕೊಳಗಾದರು. ಮೃತದೇಹವನ್ನು ಪಿಪಿಇ ಕಿಟ್​ನಿಂದ ಪೂರ್ಣವಾಗಿ ಪ್ಯಾಕ್ ಮಾಡಿದ್ದರಿಂದ ಜನ ಭಯದಲ್ಲಿಯೇ ಓಡಾಡಿದರು.

    ಈ ವಿಷಯ ಎಲ್ಲೆಡೆ ಹರಿದಾಡಿದ ನಂತರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿತು. ನಂತರ ಶವವನ್ನು ಕುಟುಂಬದವರ ಜತೆ ಆಂಬುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗಿ, ಹಲಗೇರಿ ರಸ್ತೆಯಲ್ಲಿನ ರುದ್ರಭೂಮಿಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ವ್ಯಕ್ತಿಯ ಸ್ವ್ಯಾಬ್ ಟೆಸ್ಟ್ ವರದಿ ಇನ್ನೂ ಬಂದಿಲ್ಲ.

    ಆಗಿದ್ದೇನು?: ಮೂರು ದಿನಗಳ ಹಿಂದೆ ಕೆಮ್ಮಿನಿಂದ ಬಳಲುತ್ತಿದ್ದ ರಾಣೆಬೆನ್ನೂರ ಮಾರುತಿನಗರದ 45 ವರ್ಷದ ವ್ಯಕ್ತಿಯು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ. ಕರೊನಾ ಲಕ್ಷಣಗಳಿದ್ದುದರಿಂದ ಜು. 1ರಂದು ಈತನ ಸ್ವ್ಯಾಬ್ ಟೆಸ್ಟ್​ಗೆ ಪಡೆದು ಹೋಂ ಕ್ವಾರಂಟೈನ್​ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಈ ವ್ಯಕ್ತಿ ಶನಿವಾರ ಬೆಳಗ್ಗೆ ಮಾರುತಿ ನಗರದ ಪಕ್ಕದ ರಸ್ತೆಯೊಂದರಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ. ಆಗ ಸುತ್ತಮುತ್ತಲಿನವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಈತ ಮೃತಪಟ್ಟಿರುವುದು ತಿಳಿದುಬಂತು. ಹೀಗಾಗಿ ಶವವನ್ನು ಪಿಪಿಇ ಕಿಟ್​ನಿಂದ ಪ್ಯಾಕ್ ಮಾಡಿ, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಕುಟುಂಬದವರು ತಕ್ಷಣ ಬಾರದ್ದರಿಂದ ಶವವನ್ನು ಆಸ್ಪತ್ರೆಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಇಟ್ಟು ಹೋಗಿದ್ದರು.

    ಮಾರುತಿ ನಗರದ ವ್ಯಕ್ತಿಗೆ ಕರೊನಾ ಲಕ್ಷಣದ ಹಿನ್ನೆಲೆಯಲ್ಲಿ ಜು. 1ರಂದು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿದೆ. ಆದರೆ, ಶನಿವಾರ ಈತ ರಸ್ತೆ ಪಕ್ಕದಲ್ಲಿ ಬಿದ್ದಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಂದು ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂತು. ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಶವ ಬಿಟ್ಟ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ.
    | ಡಾ. ಸಂತೋಷಕುಮಾರ, ಟಿಎಚ್​ಒ ರಾಣೆಬೆನ್ನೂರ

    ರಾಣೆಬೆನ್ನೂರಿನಲ್ಲಿ ಮೃತ ವ್ಯಕ್ತಿಯ ಶವವನ್ನು ಬಸ್ ನಿಲ್ದಾಣದಲ್ಲಿ ಇಟ್ಟಿರುವ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಘಟನೆ ಹೇಗಾಯಿತು ಎಂಬುದರ ಕುರಿತು ವಿವರಣೆ ಪಡೆಯುತ್ತೇನೆ. ತನಿಖೆಯ ನಂತರ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    | ಬಸವರಾಜ ಬೊಮ್ಮಾಯಿ, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts