More

    ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರಿಡಿ  -ಎಐಟಿಯುಸಿ ಜಿಲ್ಲಾ ಸಮಿತಿ ಪ್ರತಿಭಟನೆ 

    ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಪಂಪಾಪತಿ ಹೆಸರಿಡುವ ಜತೆಗೆ ಅವರ ಕಂಚಿನ ಪ್ರತಿಮೆ ನಿರ್ಮಿಸಲು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶನಿವಾರ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
    ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್ ಮಾತನಾಡಿ ಪಂಪಾಪತಿ ಜೀವಿತಾವಧಿಯಲ್ಲಿ ಶ್ರಮಿಕರ ನೋವಿಗೆ ಸ್ಪಂದಿಸಿದರು. ದಾವಣಗೆರೆಯಲ್ಲಿ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ವಿಭಾಗೀಯ ಕಚೇರಿ ಆರಂಭಕ್ಕೆ ಕಾರಣೀಕರ್ತರಾಗಿದ್ದರು. ಹಾಗಾಗಿ ಅವರ ಹೆಸರನ್ನು ನೂತನ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು. ನಿಲ್ದಾಣದೆದುರು ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
    ಜಿಲ್ಲಾಡಳಿತ, ನಗರದ ನಿರಾಶ್ರಿತರನ್ನು ಗುರುತಿಸಿ ನಿವೇಶನ ಹಕ್ಕುಪತ್ರ ನೀಡಿ, ಮನೆ ನಿರ್ಮಿಸಿಕೊಡಬೇಕು. ಪಂಪಾಪತಿ ಅವರು 11 ಬಡಾವಣೆ ನಿರ್ಮಿಸಿ 9 ಬಡಾವಣೆಗಳನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸೇರ್ಪಡೆ ಮಾಡಿದ್ದರು. ಎಸ್.ಎಸ್.ಮಲ್ಲಿಕಾರ್ಜುನ ಸಚಿವರಾಗಿದ್ದಾಗ ಸುಮಾರು 12 ಸಾವಿರ ಮನೆಗಳನ್ನು ನಿರ್ಮಿಸಿದ್ದರು. ಇದಾದ ನಂತರ ನಗರದಲ್ಲಿ ನಿರಾಶ್ರಿತರ ಕೂಗು ಕೇಳುವವರಿಲ್ಲವಾಗಿದೆ ಎಂದರು.
    ಆವರಗೆರೆಯ ಗೋಮಾಳ ಸರ್ವೆ ನಂ.213, ಚಾಲ್ತಿ ಖಾತೆ ಸರ್ವೇ ನಂ.393ರಲ್ಲಿ ಸುಮಾರು 100 ಎಕರೆಗೂ ಅಧಿಕ ಜಮೀನು ಒತ್ತುವರಿಯಾಗಿದೆ. ದಾವಣಗೆರೆ ತಾಲೂಕಿನ ತೋಳಹುಣಸೆ ಸರ್ವೇ ನಂ.62 ರಿಂದ 75ರವರೆಗೂ 133 ಎಕರೆ ಜಮೀನು ವಾಸ ಯೋಗ್ಯವಾಗಿದೆ. ದಾವಣಗೆರೆ ನಗರದಿಂದ 10-15 ಕಿ.ಮೀ.ವ್ಯಾಪ್ತಿಯಲ್ಲಿ 150 ರಿಂದ 200 ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಿ ಅಥವಾ ತಾಲೂಕಿನ ಹಾಲುವರ್ತಿ ಮತ್ತು ಕೊಡಗನೂರು ಗ್ರಾಮದ ಸುತ್ತಮುತ್ತಲ ಸೇಂದಿ ವನಗಳು ಹಾಳು ಬಿದ್ದಿದ್ದು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮನೆ ನಿರ್ಮಿಸಲು ಕ್ರಮ ವಹಿಸಬೇಕೆಂದರು.
    ಅವರಗೆರೆಯ 2 ಎಕರೆ ಜಮೀನಿನಲ್ಲಿ 2006-07 ರಲ್ಲಿ ಅನೇಕರಿಗೆ ಆಶ್ರಯ ಸಮಿತಿಯಿಂದ ಹಕ್ಕುಪತ್ರ ನೀಡಿದ್ದರೂ ಮೂಲಸೌಕರ್ಯಗಳನ್ನು ನೀಡಿಲ್ಲ. ಕೂಡಲೆ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಿ ನಿವೇಶನದ ಅಳತೆ ಕಲ್ಲುಗಳನ್ನು ಹಾಕಿ ಕೊಡಬೇಕು. ಗೋಶಾಲೆ ಹಳ್ಳದ ಮೇಲೆ ಮನೆ ಕಟ್ಟಿಕೊಂಡಿರುವವರಿಗೆ ಹಳ್ಳದ ಹಿನ್ನೀರಿನಿಂದ ತೊಂದರೆಯಾಗದಂತೆ ತಡೆಗೋಡೆ ಕಟ್ಟಿ ಹಕ್ಕುಪತ್ರ ನೀಡಬೇಕು. ನೀಲಮ್ಮನ ತೋಟದ ಫಲಾನುಭವಿಗಳಿಗೆ ಹಕ್ಕುಪತ್ರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್, ಕಾರ್ಯದರ್ಶಿ ಎಚ್.ಎಂ. ಸಂತೋಷ್, ಮುಖಂಡರಾದ ವಿ. ಲಕ್ಷ್ಮಣ್, ಶಿವಕುಮಾರ್ ಡಿ ಶೆಟ್ಟರ್, ಆವರಗೆರೆ ಚಂದ್ರು, ಆನಂದರಾಜ್, ದಾದಾಪೀರ್, ನರೇಗಾ ರಂಗನಾಥ, ಐರಣಿ ಚಂದ್ರು, ಸುರೇಶ್ ಯರಗುಂಟೆ, ಎಂ.ಬಿ.ಶಾರದಮ್ಮ, ಮಲ್ಲಮ್ಮ, ದುರ್ಗೇಶ್, ಬಾನಪ್ಪ ಆವರಗೆರೆ, ಹನುಮಂತಪ್ಪ, ಮುರುಗೇಶ್, ಎಚ್.ಕೆ.ಆರ್. ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts