More

    ಬಸ್ ತಡೆದು ನಾಟನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

    ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಾಟನಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬಸ್ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.


    ರಸ್ತೆ ಸರಿಪಡಿಸದ ಸಚಿವ ಕೆ.ಸಿ.ನಾರಾಯಣಗೌಡ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


    ಗ್ರಾಮದ ಮುಖಂಡ ಪಾಪಣ್ಣ ಮಾತನಾಡಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ, ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸಚಿವರಿಗೆ ಗ್ರಾಮದಲ್ಲಿ ಅತಿಹೆಚ್ಚು ಮತ ನೀಡಿದ್ದೇವೆ. ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ಕಾಮಗಾರಿ, ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.


    ಯುವ ಮುಖಂಡ ಪವನ್ ನಮ್ಮ ಗ್ರಾಮದ ಪ್ರಮುಖ ರಸ್ತೆಯ ದುಸ್ಥಿತಿಯ ಬಗ್ಗೆ ಹಲವು ಬಾರಿ ಸಚಿವರಿಗೆ ಮನವರಿಕೆ ಮಾಡಿದರೂ ಪ್ರಯೋಜನವಿಲ್ಲ. ಸತತ 10 ವರ್ಷಗಳಿಂದ ಅಪಾಯಕಾರಿ ಗುಂಡಿ ಬಿದ್ದ ರಸ್ತೆಯಲ್ಲಿ ನಮ್ಮ ಗ್ರಾಮಸ್ಥರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗ್ರಾಮದ ಕಬ್ಬನ್ನು ರಸ್ತೆಯ ದುಸ್ಥಿತಿಯಿಂದ ಸಾಗಿಸಲಾಗದೆ ಪ್ರತಿನಿತ್ಯ ರೈತರು ಹೈರಾಣಾಗುತ್ತಿದ್ದಾರೆ. ಜತೆಗೆ ಹಲವು ಅಪಘಾತಗಳು ಸಂಭವಿಸಿದ್ದರೂ ಅಧಿಕಾರಿಗಳು ಮಾತ್ರ ತನಗೆ ಸಂಬಂಧವಿಲ್ಲದ ರೀತಿ ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಬೀರುವಳ್ಳಿ, ನಂದಿಪುರ, ಆಲೇನಹಳ್ಳಿ ಈ ಗ್ರಾಮಗಳಿಂದ ಹೆಚ್ಚು ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸುತ್ತಾರೆ. ಬಸ್‌ನಲ್ಲಿ ನಿಲ್ಲಲು ಜಾಗವಿರುವುದಿಲ್ಲ. ಕೆಲ ನಿಲ್ದಾಣದಲ್ಲಿ ನಿಲುಗಡೆ ನೀಡಲ್ಲ. ಇದರಿಂದ ಕಾಲೇಜಿಗೆ ನಿಗದಿತ ಸಮಯಕ್ಕೆ ತೆರಳಲು ಆಗುತ್ತಿಲ್ಲ. ಕಾಲೇಜು ಸಮಯಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಶೈಕ್ಷಣಿಕ ಚಟುವಟಿಕೆಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.


    ಗ್ರಾಮ ಪಂಚಾಯಿತಿ ಸದಸ್ಯ ಶಂಕರ್, ಯುವ ಮುಖಂಡರಾದ ಪವನ್, ದಿಲೀಪ್, ದೀಪು, ಪಾಪಣ್ಣ, ನವೀನ್, ಮನು, ಹೇಮಂತ್, ಪುಟ್ನಂಜ, ಅಭಿ, ಅನಿಲ್, ಪ್ರದೀಪ್, ಬಾಬು, ಸಚಿನ್, ಕುಮಾರ್, ಅರುಣ್, ಮಧುಸೂದನ್, ನೂತನ್, ಸಂತೋಷ್, ರಾಜು, ವರುಣ್, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts