More

    ಬಸ್‌ಗಾಗಿ ವಿದ್ಯಾರ್ಥಿಗಳಿಂದ ರಸ್ತೆ ತಡೆ, ಮುದ್ದಲಿಂಗನಹಳ್ಳಿಯಲ್ಲಿ ಪ್ರತಿಭಟನೆ ಪಾಸ್ ಪರಿಗಣಿಸುತ್ತಿಲ್ಲವೆಂಬ ಆರೋಪ

    ತ್ಯಾಮಗೊಂಡ್ಲು: ಅನ್ಯ ಸ್ಥಳಗಳಿಗೆ ಉನ್ನತ ವ್ಯಾಸಂಗಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ. ಬಹುತೇಕ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಸ್‌ಪಾಸ್ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ ಹೋಬಳಿಯ ಮುದ್ದಲಿಂಗನಹಳ್ಳಿಯಲ್ಲಿ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ-ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಮಕ್ಕಳ ಪಾಲಕರು ಮತ್ತು ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ನೀಡಿದರು.

    ಹೋಬಳಿಯಿಂದ ತುಮಕೂರಿಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳುತ್ತಾರೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಹುತೇಕ ಬಸ್‌ಗಳು ತಡವಾಗಿ ಬರುತ್ತವೆ. ಆದರೆ, ಮುದ್ದಲಿಂಗನಹಳ್ಳಿಯಲ್ಲಿ ನಿಲ್ಲಿಸುವುದಿಲ್ಲ. ಕೆಲವು ಬಸ್‌ಗಳನ್ನು ನಿಲ್ಲಿಸಿದರೂ ಪ್ರಯಾಣಿಕರನ್ನು ಇಳಿಸಿ, ಹೋಗುತ್ತವೆ. ಆ ಬಸ್‌ಗಳಿಗೆ ಹತ್ತಿದರೆ ವಿದ್ಯಾರ್ಥಿಗಳ ಬಸ್‌ಪಾಸ್ ಅನ್ನು ಮಾನ್ಯ ಮಾಡುವುದಿಲ್ಲ. ಹಿಂದೆ ಇನ್ನೊಂದು ಬಸ್ ಬರುತ್ತಿದೆ. ಅದಕ್ಕೆ ಹತ್ತಿಕೊಳ್ಳುವಂತೆ ಹೇಳುವ ಕಂಡಕ್ಟರ್‌ಗಳು ಮುಂದೆ ಸಾಗುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

    ಹಾಜರಾತಿ ಕೊರತೆ: ಬಸ್‌ಗಳು ನಿಗದಿತ ಸಮಯಕ್ಕೆ ಬರುವುದಿಲ್ಲ. ಇದರಿಂದಾಗಿ ಪ್ರತಿದಿನವೂ ಮೊದಲ ತರಗತಿಗೆ ಗೈರಾಗುವುದು ಸಾಮಾನ್ಯವಾಗುತ್ತಿದೆ. ಇದರಿಂದ ಹಾಜರಾತಿ ಕೊರತೆ ಉಂಟಾಗುತ್ತಿದೆ. ಬಸ್‌ಗಳ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಕಾಲೇಜಿನಲ್ಲಿ ಯಾರೂ ನಂಬುತ್ತಿಲ್ಲ. ಡಿಪೋ ಮ್ಯಾನೇಜರ್‌ಗೆ ಈ ಬಗ್ಗೆ ದೂರಿದರೂ, ಅವರಿಂದಲೂ ಸಮರ್ಪಕ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾಗಿ ವಿದ್ಯಾರ್ಥಿಗಳು ಹೇಳಿದರು.

    ವಾಹನ ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿದ್ದರಿಂದ, ದೊಡ್ಡಬಳ್ಳಾಪು-ದಾಬಸ್‌ಪೇಟೆ ನಡುವಿನ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಬಂದ ತ್ಯಾಮಗೊಂಡ್ಲು ಠಾಣೆ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು.

    ಓಂಶಕ್ತಿ ದೇಗುಲಕ್ಕೆ ಬಾಡಿಗೆ: ಪ್ರತಿಭಟನಾ ಸ್ಥಳಕ್ಕೆ ಬಂದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ರಕ್ಷಿತ್ ಅವರು ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಆನಂದ್ ಅವರನ್ನು ಸಂಪರ್ಕಿಸಿದಾಗ, ತಮಿಳುನಾಡಿನ ಓಂಶಕ್ತಿ ದೇವಸ್ಥಾನಕ್ಕೆ ತೆರಳಲು ಭಕ್ತರು ಹೆಚ್ಚಿನ ಬಸ್‌ಗಳನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ಆದ್ದರಿಂದ, ಬಸ್‌ಗಳ ಕೊರತೆ ಉಂಟಾಗಿದೆ. ದೊಡ್ಡಬಳ್ಳಾಪುರ ಡಿಪೋದಿಂದ ಹೊರಡುವ ಎಲ್ಲ ಬಸ್‌ಗಳನ್ನು ಕಡ್ಡಾಯವಾಗಿ ಮುದ್ದಲಿಂಗನಹಳ್ಳಿಯಲ್ಲಿ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಹತ್ತಿಕೊಳ್ಳುವ ರೀತಿ ಇನ್ನೆರಡು ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts