More

    ಬಸವತತ್ವ ಪಾಲನೆಯಿಂದ ಮೌಢ್ಯಕ್ಕೆ ಮುಕ್ತಿ- ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿಕೆ

    ದಾವಣಗೆರೆ: ಬಸವ ತತ್ವ ಅನುಸರಿಸಿದರೆ ಮೂಢನಂಬಿಕೆಗೆ ಮುಕ್ತಿ ಸಿಗಲಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಹಾಗೂ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
    ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ ಇಲ್ಲಿನ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಪ್ರಗತಿಪರವಾಗಿದ್ದ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯ ದಿನ, ರಾಹುಕಾಲ, ಗುಳಿಕ ಕಾಲ ಎಂದು ಕಾಯದೇ ಒಳಿತಿಗಾಗಿ ಹೊರಟ ಸಮಯವೇ ಒಳ್ಳೆಯ ದಿನ, ಸಮಯವಾಗಲಿದೆ ಎಂದು ಹೇಳಿದರು.
    ಅಕ್ಷಯ ತೃತೀಯಾ ದಿನವೇ ಬಸವೇಶ್ವರ ಜನ್ಮದಿನ. ನಾಶವಾಗದಿರುವುದಕ್ಕೆ ಅಕ್ಷಯ ಎಂದರ್ಥ. ಈ ದಿನದಂದು ಬಂಗಾರ ಖರೀದಿ ಮಾಡುವಂತೆ ಪ್ರಚಾರ ಮಾಡಲಾಗುತ್ತದೆ. ಚಿನ್ನ ಖರೀದಿಸಿ ಸರ-ಬಳೆ ಮಾಡಿಸಿಕೊಳ್ಳುತ್ತೀರಿ, ಕಳ್ಳರು ದೋಚುತ್ತಾರೆ. ಅದರ ಬದಲಾಗಿ ಬಸವಣ್ಣ ಕೊಟ್ಟ ಕಾಯಕ, ದಾಸೋಹ, ಮಾನವೀಯ ಮೌಲ್ಯ, ಸಮಾನತೆ ತತ್ವಗಳೇ ನಿಜವಾದ ಬಂಗಾರ. ಅವು ಎಂದಿಗೂ ನಾಶವಾಗುವುದಿಲ್ಲ ಎಂದು ತಿಳಿಸಿದರು.
    ಬಸವಣ್ಣನವರ ಸಪ್ತ ಸೂತ್ರ ಅನುಸರಿಸಿದರೆ ವ್ಯಕ್ತಿ ಜತೆಗೆ ಲೋಕ ಕಲ್ಯಾಣ ಆಗಲಿದೆ. ಬಸವ ತತ್ವದಲ್ಲಿ ಭ್ರಷ್ಟಾಚಾರಕ್ಕೆ ಪೂರ್ಣ ವಿರಾಮ ಸಿಗಲಿದೆ.
    ನಾವು ಮಾಡುವ ಕಾಯಕ ಪ್ರಾಮಾಣಿಕವಾಗಿರಬೇಕು. ಗಳಿಸಿದ್ದರಲ್ಲಿ ದಾಸೋಹ ಮಾಡಬೇಕು ಎಂದು ತಿಳಿಸಿದರು.
    ಬಸವಣ್ಣನವರ ತತ್ವಾದರ್ಶ ತಿಳಿದ ಬ್ರಿಟಿಷರು, ಅವರಿಗೆ ಜಗಜ್ಯೋತಿ ಎಂಬ ಬಿರುದನ್ನು ನೀಡಿದರು. ಬಸವಣ್ಣ ಕೇವಲ ಕನ್ನಡಿಗರಿಗೆ, ಲಿಂಗಾಯತ, ಕರ್ನಾಟಕ, ಭಾರತಕ್ಕೆ ಸೀಮಿತರಲ್ಲ. ವಿಶ್ವದ ಬೆಳಕಾಗಿದ್ದಾರೆ. ಅವರ ಆಶಯಗಳ ಪಾಲನೆಯಿಂದ ಜಗತ್ತು ಉದ್ಧಾರವಾಗಲಿದೆ. ಎಲ್ಲರೂ ಬಸವ ತತ್ವದ ದಾರಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
    ದೇಶದಲ್ಲಿ ಅಸಮಾನತೆ ಕಿತ್ತು ಹಾಕಿದ ಬಸವಣ್ಣನವರು ಅನುಭವ ಮಂಟಪ ಕಟ್ಟಿ ಎಲ್ಲ ತಾಯಂದಿರು, ಎಲ್ಲಾ ಜನಾಂಗದವರನ್ನು ಸೇರಿಸಿ ಸರ್ವರೂ ಸಮಾನರು ಎಂಬುದನ್ನು ತೋರಿಸಿದರು.ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದರು. ವರ್ಗರಹಿತ, ಜಾತಿರಹಿತ ಸಮಾಜ ಕಟ್ಟಿ ಲಿಂಗ ತಾರತಮ್ಯ ಹೋಗಲಾಡಿಸಿದರು ಎಂದು ಸ್ಮರಿಸಿದರು.
    ಶ್ರೀ ಬಸವ ಮುರುೇಂದ್ರ ಸ್ವಾಮೀಜಿ, ಶಿವಯೋಗಾಶ್ರಮದ ಸಹ ಕಾರ್ಯದರ್ಶಿ ಎಸ್.ಓಂಕಾರಪ್ಪ, ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಟಿ.ಎಂ. ವೀರೇಂದ್ರ, ಚಿಗಟೇರಿ ಜಯದೇವ, ಬಾಳೆಕಾಯಿ ಮುರುಗೇಶ, ಕುಂಟೋಜಿ ಚನ್ನಪ್ಪ, ಬೆಳ್ಳೂಡಿ ಮಂಜುನಾಥ, ಚನ್ನಬಸವ ಶೀಲವಂತ, ಕೆ.ಸಿ.ಉಮೇಶ, ಶರಣಬಸವ, ಇಂದೂಧರ ನಿಶಾನಿಮಠ, ಮಹದೇವಮ್ಮ, ವೀಣಾ ಮಂಜುನಾಥ, ಚೇತನಾ ಶಿವಕುಮಾರ, ವನಜಾ ಮಹಾಲಿಂಗಯ್ಯ, ಸುಜಾತಾ ಇತರರಿದ್ದರು. ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿ ವಚನ ಸಂಗೀತ ನಡೆಸಿಕೊಟ್ಟರು.
    ಬೆಳಗ್ಗೆ ವಿರಕ್ತಮಠದಿಂದ ಬಸವೇಶ್ವರರ ಮೂರ್ತಿಯೊಂದಿಗೆ ನಗರದ ಬೀದಿಗಳಲ್ಲಿ ಪ್ರಭಾತ್ ಫೇರಿ ನಡೆಸಲಾಯಿತು. ನಂತರ ಚಿಕ್ಕಮಕ್ಕಳನ್ನು ತೊಟ್ಟಿಲಿಗೆ ಹಾಕಿ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಅಲ್ಲಮಪ್ರಭು, ಜಯದೇವ ಎಂಬಿತ್ಯಾದಿ ನಾಮಕರಣ ಮಾಡಿ ಬಸವ ಜಯಂತ್ಯುತ್ಸವ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts