More

    ಬಸವಣ್ಣನವರ ವಚನಗಳು ಮನೆ ಮನೆಗೂ ತಲುಪಲಿ

    ಕೊಳ್ಳೇಗಾಲ: ಸತ್ಯ, ನ್ಯಾಯ, ನೀತಿ, ಧರ್ಮ ಉಳಿಯಬೇಕಾದರೆ ಬಸವಣ್ಣನವರ ವಚನಗಳನ್ನು ಮನೆ ಮನೆಗೂ ತಲುಪಿಸುವ ಕಾಯಕವಾಗಬೇಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಸಲಹೆ ನೀಡಿದರು.


    ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಹಿಳಾ ಘಟಕ ಆಯೋಜಿಸಿದ್ದ ಮಹಾ ಮನೆಯಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪ ಎಲ್ಲರಿಗೂ ಮಾದರಿ. ಅಂದು ರಚನೆಗೊಂಡ ಶರಣರ ವಚನಗಳು ಎಂದೆಂದೂ ಪ್ರಸ್ತುತ. ಶರಣರು ಹೇಳಿದಂತೆ ಜೀವನ ನಡೆಸಿದರೆ ಸಮಾಜ ಸುಸ್ಥಿತಿಯಲ್ಲಿ ಸಾಗುತ್ತದೆ ಎಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಪದಾಧಿಕಾರಿಗಳ ಕಾರ್ಯ ಮೆಚ್ಚುವಂತದ್ದು. ಇಂದು ಬಸವಣ್ಣರ ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ. ಇದೇ ರೀತಿಯ ಕಾರ್ಯಕ್ರಮಗಳು ಹೆಚ್ಚು ನಡೆದರೆ ಖಂಡಿತವಾಗಿಯೂ ಬಸವಣ್ಣರ ಕಲ್ಯಾಣ ಎತ್ತಿ ಹಿಡಿಯುವ ಜಿಲ್ಲೆಯಾಗಿ ಚಾಮರಾಜನಗರ ಹೊರಹೊಮ್ಮುತ್ತದೆ ಎಂದು ಹೇಳಿದರು.


    ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಪ್ರಭು ಮಾತನಾಡಿ, ಅಂದಿನ ಬಸವಣ್ಣರ ಅನುಭವ ಮಂಟಪದ ಪರಿಕಲ್ಪನೆ ಇಂದು ಪ್ರಜಾಪ್ರಭುತ್ವ ಸಾರುವ ಸಂವಿಧಾನದ ತಳಪಾಯವಾಗಿದೆ. ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕು, ಗೌರವ, ಬದುಕು ನೀಡುತ್ತಿರುವ ಸಂವಿಧಾನದಲ್ಲಿ ಅನುಭವ ಮಂಟಪದ ಆಶಯಗಳು ಕ್ರೋಡೀಕರಿಸಲಾಗಿದೆ. ಪ್ರತಿಯೊಬ್ಬರೂ ಬೆವರು ಸುರಿಸಿ ದುಡಿದು ಬದುಕಬೇಕು ಎಂಬುದು ಬಸವಣ್ಣರ ತತ್ವವಾಗಿದೆ. ಕಾಯಕವೇ ಪೂಜೆ ಎಂದು ತಿಳಿದು ಬದುಕಿದರೆ ಅಂತಹ ವ್ಯಕ್ತಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಬಲ್ಲ ಎಂಬುದು ಬಸವಣ್ಣನವರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.


    ಆಕರ್ಷಿಸಿದ ವೇಷ ಭೂಷಣ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಮಹದೇವ ಪ್ರಸಾದ್ ಶ್ರೀ ಬಸವೇಶ್ವರ, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಶಿವಲಿಂಗಸ್ವಾಮಿ ಅಲ್ಲಮ ಪ್ರಭುಗಳಂತೆ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
    ಅಖಿಲ ಭಾರತ ವೀರಶೈವ ಮಹಾಸಭಾ ಕೊಳ್ಳೇಗಾಲ ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ ಸದಾಶಿವಮೂರ್ತಿ, ಕಾರ್ಯದರ್ಶಿ ನಾಗವೇಣಿ ನಾಗಣ್ಣ, ತಾಲೂಕು ಅಧ್ಯಕ್ಷ ಮಹದೇವ ಪ್ರಸಾದ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಶಿವಲಿಂಗಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts