More

    ಬಯಲಿಗೆ ಬರಲಿವೆ ಆರ್.ಅಶೋಕ್ ರಾಜಕಾಲುವೆಗಳ ಕರ್ಮಕಾಂಡ

    ನಾಗಮಂಗಲ: ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾಡಿರುವ ರಾಜಕಾಲುವೆಗಳ ಕರ್ಮಕಾಂಡ ಬಯಲಿಗೆ ಬರುವುದರಿಂದ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟಾಂಗ್ ನೀಡಿದರು.


    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ದ ಮಾಡಿರುವ ಕಮಿಷನ್ ಆರೋಪವನ್ನು ಸಚಿವ ಅಶೋಕ್ ಟೀಕೆ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರುವ ಕಾರಣ ಸರ್ಕಾರದ ವಿರುದ್ಧ ವಿಚಾರವನ್ನು ಪ್ರತಿಪಕ್ಷ ಹಾಗೂ ಮಾಧ್ಯಮಗಳ ಜತೆ ಹೇಳಿಕೊಳ್ಳುವುದು ಸಾಮಾನ್ಯ. ಸಚಿವ ಅಶೋಕ್ ಬೆಂಗಳೂರಿನ ರಾಜಕಾಲುವೆಗಳನ್ನು ನುಂಗಿ ಜೀರ್ಣ ಮಾಡಿಕೊಂಡಿರುವುದು ಹೊರಗಡೆ ಬರುವುದರಿಂದ ಸಿದ್ದರಾಮಯ್ಯ ಅವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.


    ಭ್ರಷ್ಟ್ರಾಚಾರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನಿಮೋದಿಯಾಗಿದ್ದಾರೆ. ಅವರದೇ ಪಕ್ಷದ ಗುತ್ತಿಗೆದಾರ ಹಾಗೂ ಕಾರ್ಯಕರ್ತ ಸಂತೋಷ್ ಅವರು ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ಬಳಿ ಬಿಲ್ ಆಗಿಲ್ಲವೆಂದು ಹೋದಾಗ ಏನಾಗಿದೆ ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಜನಪರ ಕೆಲಸಕ್ಕೆ ಹಣ ಖರ್ಚು ಮಾಡದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯನ್ನು ಶ್ರೀಮಂತಗೊಳಿಸುವುದಕ್ಕೆ ಡಬಲ್ ಇಂಜಿನ್ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಆರೋಪಿಸಿದರು.

    ಪ್ರವಾಹ, ಮಳೆ ಹಾನಿಗೊಳಗಾಗಿರುವ ಸಂತ್ರಸ್ತರಿಗೆ 2 ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಬಡವರ ಆಧಾರಿತವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ ಧರ್ಮದ ಆಧಾರವಾಗಿ ಹಣ ನೀಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ಧ ಜನರು ಮುಂದಿನ ಚುನಾವಣೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಎಂದು ಬಿ.ಕೆ.ಹರಿಪ್ರಸಾದ್ ಭವಿಷ್ಯ ನುಡಿದರು.


    ಬಡವರು ಹಾಗೂ ಜನಪರವಾಗಿ ಕಾಂಗ್ರೆಸ್ ಧ್ವನಿ ಎತ್ತಿದರೆ ಬಿಜೆಪಿ ಹಿಜಾಬ್, ಹಲಾಲ್, ಸಾವರ್ಕರ್, ಗೂಡ್ಸೆ ಎಂದು ಹೇಳುತ್ತದೆ. ಬಿಜೆಪಿ ಎಮ್ಮೆ ಚರ್ಮದವರು, ಮಾನ ಮರ್ಯಾದೆ ಇಲ್ಲದವರು. ಭ್ರಷ್ಟಾಚಾರದಲ್ಲಿ ಕ್ಯಾನ್ಸರ್ ನಾಲ್ಕನೇ ಸ್ಟೇಜ್ ತಲುಪಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.


    21 ದಿನ ಪಾದಯಾತ್ರೆ: ರಾಹುಲ್‌ಗಾಂಧಿ ನೇತೃತ್ವದಲ್ಲಿ ಪಕ್ಷಾತೀತವಾಗಿ ರಾಜ್ಯದಲ್ಲಿ 21 ದಿನಗಳು 8 ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ. 8 ವರ್ಷದಿಂದ ದೇಶದ ಅಧೋಗತಿಯ ಸ್ಥಿತಿ ಕಂಡು ಜನರಿಗೆ ಧೈರ್ಯ ಹೇಳಲು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ರಾಹುಲ್‌ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.


    ನಂತರ ತಾಲೂಕಿನಲ್ಲಿ ರಾಹುಲ್‌ಗಾಂಧಿ ಅವರ ಪಾದಯಾತ್ರೆ ಸಾಗುವ ಮಾರ್ಗ ಖರಡ್ಯ, ಚಿಣ್ಯ, ಬ್ರಹ್ಮದೇವರಹಳ್ಳಿ, ನಾಗಮಂಗಲ ಪಟ್ಟಣ ಹಾಗೂ ಬೆಳ್ಳೂರು ಹಾಗೂ ಆದಿಚುಂಚನಗಿರಿಯಲ್ಲಿ ಪಾದಯಾತ್ರೆ ಮಾರ್ಗವನ್ನು ಪರಿಶೀಲಿಸಿದರು.


    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಎಐಸಿಸಿ ಮುಖಂಡ ಪೈಜೀರ್, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಎಂಎಲ್ಸಿ ದಿನೇಶ್ ಗೂಳಿಗೌಡ, ಮಾಜಿ ಶಾಸಕ ನರೇಂದ್ರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts