More

    ಬಫರ್ ಜೋನ್​ನಲ್ಲೇ ಬೀಜ ವಿತರಣೆ

    ಹಾವೇರಿ: ಕರೊನಾ ಮಹಾಮಾರಿ ವ್ಯಾಪಕವಾಗಿ ಹೆಚ್ಚುತ್ತಿರುವುದರ ಮಧ್ಯೆಯೂ ಮುಂಗಾರು ಚಟುವಟಿಕೆಗಳು ಆರಂಭಗೊಂಡಿದೆ. ಕರೊನಾ ಭೀತಿಯ ಬಫರ್ ಜೋನ್ ಪ್ರದೇಶದ ರೈತರು ಬೀಜ, ಗೊಬ್ಬರಕ್ಕಾಗಿ ಬೇರೆಡೆ ಬಂದು ಕರೊನಾ ಹರಡದಂತೆ ತಡೆಯಲು ಬಫರ್ ಜೋನ್ ವ್ಯಾಪ್ತಿಯಲ್ಲಿಯೇ ಬೀಜ, ಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಮುಂದಾಗಿದೆ.

    ಜಿಲ್ಲೆಯಲ್ಲಿ ಸವಣೂರ ಎಸ್​ಎಂ ಕೃಷ್ಣ ನಗರ ಹಾಗೂ ಅಂದಲಗಿಯಲ್ಲಿ ಕರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದು, ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಅಲ್ಲದೆ, ಇಲ್ಲಿನ ಜನರು ಬೇರೆ ಊರುಗಳಿಗೆ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ.

    ಜಿಲ್ಲೆಯಲ್ಲಿ ಇದೀಗ ಮುಂಗಾರು ಚುರುಕುಗೊಂಡಿದ್ದು, ಕೃತ್ತಿಕಾ ಮಳೆ ಜಿಲ್ಲೆಯಾದ್ಯಂತ ಉತ್ತಮವಾಗಿ ಸುರಿದಿದೆ. ರೈತರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿದ್ದಾರೆ. ಮೇ 24ರಿಂದ ರೋಹಿಣಿ ಮಳೆ ಆರಂಭವಾಗಲಿದ್ದು, ಬಿತ್ತನೆ ಕಾರ್ಯವೂ ಶುರುವಾಗಲಿದೆ. ಸದ್ಯ ಅಂದಲಗಿ ಗ್ರಾಮವು ಬಫರ್ ಜೋನ್ ವ್ಯಾಪ್ತಿಯಲ್ಲಿದೆ. ಇಲ್ಲಿ ಯಾವುದೇ ಬಿತ್ತನೆ ಬೀಜ ವಿತರಣಾ ಕೇಂದ್ರವಿಲ್ಲ. ಹೀಗಾಗಿ ಈ ಗ್ರಾಮಗಳ ರೈತರು ಬಿತ್ತನೆಗೆ ಬೀಜ, ಗೊಬ್ಬರಕ್ಕಾಗಿ ಬೇರೆ ಗ್ರಾಮಗಳಿಗೆ ಬರಬೇಕಿದೆ. ಇದನ್ನು ತಡೆಯುವ ಉದ್ದೇಶದಿಂದ ರೈತರಿಗೆ ಅಂದಲಗಿಯಲ್ಲಿಯೇ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆಗೆ ತಾತ್ಕಾಲಿಕ ಕೇಂದ್ರವನ್ನು ಕೃಷಿ ಇಲಾಖೆ ಆರಂಭಗೊಳಿಸಿದೆ. ಈ ಗ್ರಾಮದ ರೈತರು ಅಲ್ಲಿಯೇ ಬೀಜ, ಗೊಬ್ಬರ ಪಡೆದು ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ.

    ಹೆಚ್ಚುವರಿ ಕೇಂದ್ರ ಸ್ಥಾಪನೆ: ಜಿಲ್ಲೆಯಲ್ಲಿ 224 ಗ್ರಾಪಂಗಳಿದ್ದು, ಹೋಬಳಿಗೊಂದರಂತೆ ಒಟ್ಟು 19 ರೈತ ಸಂಪರ್ಕ ಕೇಂದ್ರಗಳಿವೆ. ಇಲ್ಲಿಗೆ ಹೋಗಿ ರೈತರು ಬೀಜ, ಗೊಬ್ಬರ ಖರೀದಿಸಲು ಮುಗಿಬಿದ್ದರೆ ಪರಸ್ಪರ ಅಂತರಕ್ಕೆ ಧಕ್ಕೆ ಬರುವ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಕೃಷಿ ಇಲಾಖೆ ಹೆಚ್ಚುವರಿಯಾಗಿ 45 ಬೀಜ ವಿತರಣಾ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಸಜ್ಜಾಗಿದೆ.

    ರೈತರಿಗೆ ಅವರದೇ ಊರು ಇಲ್ಲವೇ ಪಕ್ಕದ ಊರಿನಲ್ಲಿ ಬಿತ್ತನೆ ಬೀಜ, ಗೊಬ್ಬರ ಸಿಗುವಂತೆ ಮಾಡಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದ ಜೊತೆಗೆ 45 ಹೆಚ್ಚುವರಿ ಕೇಂದ್ರಗಳಲ್ಲಿ ರೈತರಿಗೆ ಬೀಜ, ಗೊಬ್ಬರ ಸಿಗಲಿವೆ. ಇದರಿಂದ ಕರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಕೃಷಿ ಇಲಾಖೆಯು ತನ್ನದೇ ಆದ ಕೊಡುಗೆ ನೀಡಲು ಮುಂದಾಗಿದೆ. ಇದರಿಂದ ನಿತ್ಯ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಅನ್ನದಾತರು ಕರೊನಾ ಭೀತಿಯಿಂದ ದೂರ ಸರಿಯುವಂತಾಗಲಿದೆ. ದೂರದ ಪ್ರದೇಶಗಳಿಗೆ ರೈತರ ಅಲೆದಾಟ, ಸಮಯ, ಖರ್ಚು ಉಳಿತಾಯವಾಗಲಿದೆ.

    ಲಾಕ್​ಡೌನ್​ನಿಂದ ಯಾವುದೇ ಚಟುವಟಿಕೆಗಳು ನಿಂತರೂ ಕೃಷಿ ಚಟುವಟಿಕೆಗಳು ನಿಲ್ಲಬಾರದು. ಇದಕ್ಕಾಗಿ ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಬೇಕು. ಕೃಷಿ ಸಚಿವರೂ ಜಿಲ್ಲೆಯವರೇ ಇದ್ದಾರೆ. ಈಗ ಹೆಚ್ಚುವರಿಯಾಗಿ ತೆರೆಯುವ ಕೇಂದ್ರಗಳ ಜೊತೆಗೆ ಪ್ರತಿ ಗ್ರಾಪಂಗೆ ಒಂದರಂತೆ ಬೀಜ ವಿತರಣಾ ಕೇಂದ್ರ ತೆರೆದರೆ ರೈತರು ಬೀಜಕ್ಕಾಗಿ ದೂರದ ಊರಿಗೆ ಅಲೆದಾಡುವುದು ತಪ್ಪುತ್ತದೆ. ಜೊತೆಗೆ ಕರೊನಾ ಭೀತಿಯೂ ದೂರವಾಗಲಿದೆ. ಈ ನಿಟ್ಟಿನಲ್ಲಿಯೂ ಕೃಷಿ ಇಲಾಖೆ ಚಿಂತನೆ ನಡೆಸಬೇಕು.
    | ರಾಮಣ್ಣ ಕೆಂಚಳ್ಳೇರ, ರೈತ ಸಂಘದ ಜಿಲ್ಲಾಧ್ಯಕ್ಷ


    ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳ ಜತೆ ಹೆಚ್ಚುವರಿಯಾಗಿ 45ವಿತರಣಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬೀಜ ವಿತರಣೆ ಆರಂಭಗೊಂಡಿದೆ. ಬಫರ್ ಜೋನ್ ವ್ಯಾಪ್ತಿಯ ಅಂದಲಗಿಯಲ್ಲಿಯೂ ತಾತ್ಕಾಲಿಕವಾಗಿ ಕೇಂದ್ರ ತೆರೆಯಲಾಗಿದೆ. ಹೆಚ್ಚುವರಿ ಕೇಂದ್ರಗಳ ಆರಂಭದಿಂದ ರೈತರು ಬೀಜ ಖರೀದಿಗೆ ಒಂದೇ ಕಡೆ ಗುಂಪು ಸೇರುವುದು ತಪ್ಪಲಿದೆ. ಕರೊನಾ ಹೊತ್ತಿನಲ್ಲಿ ಜನಸಂದಣಿ ಆಗದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ಜಿಲ್ಲೆಯ ವ್ಯಾಪ್ತಿಯು ದೊಡ್ಡದಾಗಿದ್ದು ಇನ್ನೂ ಹೆಚ್ಚುವರಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರಕ್ಕೂ ಮನವಿ ಮಾಡಲಾಗುವುದು.
    | ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts