More

    ಬದುಕು ಬದಲಿಸಿದ ಪಂಚಾಕ್ಷರ ಗವಾಯಿ ಸಿನಿಮಾ -ನಾದಬ್ರಹ್ಮ ಡಾ.ಹಂಸಲೇಖ ಹೇಳಿಕೆ – ಪುಟ್ಟರಾಜ ಪುರಸ್ಕಾರ ಪ್ರಶಸ್ತಿ ಪ್ರದಾನ

    ದಾವಣಗೆರೆ: ಗಾನಯೋಗಿ ಪಂಚಾಕ್ಷರ ಗವಾಯಿ ಚಿತ್ರದಿಂದ ನನಗೆ ರಾಷ್ಟ್ರ ಪ್ರಶಸ್ತಿ ಜತೆಗೆ ಅನೇಕ ಪ್ರಶಸ್ತಿಗಳು ಅರಸಿಬಂದವು. ಈ ಸಿನಿಮಾದಿಂದ ನನ್ನ ಬದುಕಿನ ರೀತಿಯೇ ಬದಲಾಯಿತು ಎಂದು ಸಿನಿಮಾ ಗೀತ ರಚನೆಕಾರ, ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಡಿ.ಆರ್.ಹಂಸಲೇಖ ಹೇಳಿಕೊಂಡರು.
    ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಗಾನಯೋಗಿ ಲಿಂ. ಪಂಡಿತ ಪಂಚಾಕ್ಷರ ಗವಾಯಿ ಹಾಗೂ ಪದ್ಮಭೂಷಣ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸ್ಮರಣೋತ್ಸವದಲ್ಲಿ ಶ್ರೀ ಗುರು ಪುಟ್ಟರಾಜ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ನಾನೊಬ್ಬ ಬೀದಿ ಹೋರಾಟಗಾರನಾಗಿದ್ದೆ. ಹಾಡು ಹೇಳಿಕೊಂಡು, ನಾಟಕ ಮಾಡಿಕೊಂಡು ನಂತರ ಸಿನಿಮಾದಲ್ಲಿ ತೊಡಗಿ ವೃತ್ತಿಜೀವನ ನಡೆಸುತ್ತಿದ್ದೆ. ಪಂಚಾಕ್ಷರ ಗವಾಯಿಗಳ ಜೀವನಚರಿತ್ರೆ ಸಿನಿಮಾಕ್ಕೆ ರಾಗ ಸಂಯೋಜನೆ ಮಾಡಿದ್ದು ನನ್ನ ಸುಯೋಗ. ಹಂಸಲೇಖನ ಜೀವನದ ವೇಳಾಪಟ್ಟಿಗೆ ಬೆಳಕು ನೀಡಿದ್ದೇ ಈ ಸಿನಿಮಾ ಎಂದು ಹೊಗಳಿದರು.

    ರಾಜ್ಯಗಳ ಒಕ್ಕೂಟದಿಂದ ಕನ್ನಡಕ್ಕೆ ಕುತ್ತು
    ಯೂನಿಯನ್ ಆಫ್ ಸ್ಟೇಟ್ಸ್ ಮಾಡುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ. ಇದರಿಂದ ಕನ್ನಡ ಭಾಷೆಗೆ ಅಪಾಯವಿದ್ದು, ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಇದೇ ವೇಳೆ ಡಾ.ಡಿ.ಆರ್.ಹಂಸಲೇಖ ಹೇಳಿದರು.
    ಇಡೀ ದೇಶವನ್ನು ಏಳು ರಾಜ್ಯವಾಗಿಸುವ ಮತ್ತು ಈಗಿರುವ ನಾಲ್ಕು ರಾಜ್ಯಗಳನ್ನು ಒಂದು ರಾಜ್ಯದಲ್ಲಿ ಸೇರ್ಪಡೆ ಮಾಡುವ ಯೋಜನೆ ಇದಾಗಿದೆ. ಇದರಿಂದ ಭಾಷೆಗಳು ದಿಕ್ಕು ತಪ್ಪಬಹುದು. ತೆಲುಗು, ತಮಿಳು ಹಾಗೂ ಮಲೆಯಾಳಿ ಭಾಷಿಕರ ನಡುವೆ ಕನ್ನಡ ಅಸ್ತಿತ್ವಕ್ಕಾಗಿ ಜಗಳವಾಡುವ ಸ್ಥಿತಿ ಬರಬಹುದು. ಇದು ಜಾರಿಯಾದಲ್ಲಿ ಕನ್ನಡ- ಕನ್ನಡಿಗರ ಸ್ಥಿತಿ ಏನಾಗಬೇಡ ಎಂದು ಆತಂಕ ವ್ಯಕ್ತಪಡಿಸಿದರು.
    ಕರ್ನಾಟಕದಲ್ಲಿ ಕನ್ನಡವನ್ನು ಕಾಪಾಡಿಕೊಳ್ಳುವುದೇ ಒಂದಂಶದ ಕಾರ್ಯಕ್ರಮ ಆಗಬೇಕು. ಇಲ್ಲವಾದಲ್ಲಿ ಕನ್ನಡ ಎಂಬ ಹಕ್ಕಿನಪತ್ರ, ಆಸ್ತಿ ನಮ್ಮಿಂದ ಕೈತಪ್ಪಿ ಹೋಗುವ ಅಪಾಯವಿದೆ. ಅಂತಹ ಪರಿಸ್ಥಿತಿ ಬಾರದಿರಲು ಈಗಿನಿಂದಲೇ ಸಂಗೀತ, ಜಾನಪದ ಹಾಗೂ ಸಾಹಿತ್ಯದಲ್ಲಿ ಕನ್ನಡವನ್ನು ಉಳಿಸಬೇಕು. ಅದರ ಸಾರ್ವಭೌಮತ್ವ ಕಾಪಾಡಲು ಕನ್ನಡದ ದೀಪ ಹಚ್ಚಬೇಕು ಎಂದು ಮನವಿ ಮಾಡಿದರು

    ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಡಾ. ಗುರುಸಿದ್ಧರಾಜೇಂದ್ರ ಯೋಗೇಂದ್ರ ಸ್ವಾಮೀಜಿ ಮಾತನಾಡಿ ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿಗಳು ಹಾಗೂ ಅವರಿಬ್ಬರನ್ನೂ ಬೆಳಕಿಗೆ ತಂದ ಹಾನಗಲ್ಲ ಕುಮಾರಸ್ವಾಮಿಗಳು ಜಗತ್ತಿನ ಅದ್ಭುತ ವ್ಯಕ್ತಿಗಳು. ಅವರ ಸಾಧನೆ, ಸಿದ್ಧಿ ಪದಗಳು ಸಾಲವು ಎಂದು ಹೇಳಿದರು.
    ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ ಸ್ವಾಮೀಜಿಗಳು ಹೇಗಿರಬೇಕು ಎಂಬುದಕ್ಕೆ ಹಾನಗಲ್ಲ ಕುಮಾರಸ್ವಾಮಿ ಶಿವಯೋಗಿಗಳು ಮಾದರಿಯಾಗಿದ್ದಾರೆ. 12ನೇ ಶತಮಾನದಲ್ಲಿ ಅಂಧರಿಗೆ ಕಾಯಕ ನೀಡುವ ಕೆಲಸ ಆಗಲಿಲ್ಲ. ಅದನ್ನು ಈ ಶಿವಯೋಗಿಗಳು ನೀಡಿದರು. ಅಂಧರಿಗೆ ದುಡಿದು ತಿನ್ನಬೇಕು ಎಂಬ ತತ್ವ ಕಲಿಸಿದರು ಎಂದು ಸ್ಮರಿಸಿದರು.
    ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಡಾ. ಅಥಣಿ ಎಸ್.ವೀರಣ್ಣ, ಕಾರ್ಯದರ್ಶಿ ಎ.ಎಚ್. ಶಿವಮೂರ್ತಿ ಸ್ವಾಮಿ, ಡಾ.ಎ.ಎಚ್.ಶಿವಯೋಗಿಸ್ವಾಮಿ, ದೇವರಮನೆ ಶಿವಕುಮಾರ್, ಎ.ಎಸ್.ಮೃತ್ಯುಂಜಯ, ಎ.ಎಚ್.ಸಿದ್ದಲಿಂಗಸ್ವಾಮಿ, ಸುಗ್ಗಲಾದೇವಿ, ಜಾಲಿಮರದ ಕರಿಬಸಪ್ಪ, ಪಿ.ಬಸವನಗೌಡ, ಮಹಾಂತೇಶ ಶಾಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts