More

    ಬದುಕು ಕಟ್ಟಿಕೊಳ್ಳಲು ನೆರವಾಗಿ

    ಕೋಲಾರ: ಸ್ವಾಭಿಮಾನದಿಂದ ಬದುಕುತ್ತಿರುವ ನಮಗೆ ಕರೊನಾದಿಂದ ಸಂಕಷ್ಟ ಎದುರಾಗಿದೆ, ಸಣ್ಣ-ಪುಟ್ಟ ಕಸುಬಿನಿಂದ ಜೀವನ ಸಾಗಿಸಲು ಬಡತನ ಅಡ್ಡಿಯಾಗಿದೆ, ಮೀಟರ್ ಬಡ್ಡಿಗೆ ಸಾಲ ಪಡೆಯಲು ಧೈರ್ಯವಿಲ್ಲ, ಕಾಯಕ ಯೋಜನೆಯಿಂದಲಾದರೂ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಸ್ವಾಭಿಮಾನಿ ಮಹಿಳೆಯರು ಅಳಲು ತೋಡಿಕೊಂಡರು.

    ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಡ ಮಹಿಳೆ ಮತ್ತು ಪುರುಷರಿಗೆ ಸಾಲ ಸೌಲಭ್ಯ ಕಲ್ಪಿಸಿ ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹ ನೀಡಲು ರೂಪಿಸಿರುವ ಕಾಯಕ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆಸಕ್ತರೊಂದಿಗೆ ಭಾನುವಾರ ಸಂವಾದ ನಡೆಸಿದಾಗ ಹತ್ತಾರು ಮಹಿಳೆಯರು ಕರೊನಾದಿಂದ ಬದುಕಿಗೆ ಹೊಡೆತ ಬಿದ್ದಿದೆ ಎಂದು ಕಣ್ಣೀರು ಹಾಕಿದಾಗ ಸಭೆಯಲ್ಲಿದ್ದವರೂ ಭಾವುಕರಾದರು.

    ನಮಗೆ ಯಾರಿಂದಲೂ ಪುಕ್ಕಟೆ ಸೌಲಭ್ಯ ಬೇಡ, ಸಂಸಾರದ ಬಂಡಿ ಎಳೆಯಲು ಶಕ್ತಿ ನೀಡಿ, ಸಾಲದ ರೂಪದಲ್ಲಿ ಪಡೆಯುವ ಹಣವನ್ನು ಪ್ರಾಮಾಣಿಕವಾಗಿ ಮರು ಪಾವತಿ ಮಾಡುತ್ತೇವೆ ಎಂದು ಅಹವಾಲು ಮಂಡಿಸಿದರು. ಸಭೆಯಲ್ಲಿ ಮಾತನಾಡಿದ 15 ಮಹಿಳೆಯರು ಸಾಧನೆ, ದುಡಿಮೆ, ಕಷ್ಟ-ನಷ್ಟದ ಕುರಿತು ಹೇಳಿದರಲ್ಲದೆ, ಕಾಯಕ ಯೋಜನೆ ಕೈ ಹಿಡಿಯಬಹುದೆಂಬ ಆಶಾ ಭಾವನೆ ವ್ಯಕ್ತಪಡಿಸಿದರು.

    ಭಾವುಕರಾದ ಅಧ್ಯಕ್ಷರು: ಮಹಿಳೆಯರ ಮಾತಿನಿಂದ ಭಾವುಕರಾದ ಗೋವಿಂದಗೌಡ, ಬಡವರ ಕಷ್ಟ ನನಗೂ ಗೊತ್ತು. ಒಂದು ಕಾಲದಲ್ಲಿ ನಮ್ಮ ಮನೆಯಲ್ಲೂ ಬಡತನವಿತ್ತು, ಇಂದಿಗೂ ನಮ್ಮ ಮನೆಯಲ್ಲಿ ನಾವೇ ಕೂಲಿ ಮಾಡುತ್ತೇವೆ, ಇದು ಕಷ್ಟವೆನಿಸಿದರೂ ತೃಪ್ತಿ ಸಿಕ್ಕಿದೆ, ಕಾಯಕ ಯೋಜನೆ ನಂಬಿ ಶ್ರದ್ಧೆಯಿಂದ ದುಡಿದರೆ ನಿಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

    ಬದ್ಧತೆ ಇರುವ 10 ಮಹಿಳೆಯರು ಸ್ವ-ಸಹಾಯ ಗುಂಪು ರಚನೆಯೊಂದಿಗೆ ಕಾಯಕ ಯೋಜನೆ ಅನುಷ್ಠಾನಕ್ಕೆ ಮುಂದಾದರೆ 1ರಿಂದ 10 ಲಕ್ಷ ರೂ. ಸಾಲದ ಜತೆಗೆ ಉಚಿತವಾಗಿ ಅಪೆಕ್ಸ್ ಮತ್ತು ನಬಾರ್ಡ್ ಬ್ಯಾಂಕ್ ಮೂಲಕ ಉದ್ಯಮಶೀಲತಾ ತರಬೇತಿ ಕೊಡಿಸಲಾಗುವುದು ಎಂದರು.

    ಮಹಿಳೆಯರನ್ನು ಸಂಘಟಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ, ಬಿಜೆಪಿ ಮುಖಂಡರೂ ಆದ ಅರುಣಮ್ಮ ಮಾತನಾಡಿ, ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಾಯಕ ಯೋಜನೆ ವರದಾನವಾಗಿದೆ, ಗೋವಿಂದಗೌಡ ಮತ್ತವರ ತಂಡ ಈ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬಲಿದೆ ಎಂದರು.
    ಮಹಿಳಾ ಸಂಘಗಳ ಪರವಾಗಿ ಭಾಗ್ಯಲಕ್ಷ್ಮೀ, ಲಕ್ಷ್ಮಮ್ಮ, ಅನಿತಾ, ಸುಮೇರ, ಚೈತ್ರಾ, ಸುಶೀಲಾ, ನೂರ್ ಮಹ್ಮದಿ, ಸುನೀತಾ, ಯಶೋದಮ್ಮ, ರೇಷ್ಮತಾಜ್ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವಂತೆ ಬೇಡಿಕೆ ಇಟ್ಟರು.

    ನಾನು ಹಲವು ವರ್ಷಗಳಿಂದ ಸ್ವಯಂ ಉದ್ಯೋಗದಡಿ ಫುಡ್ ಪ್ರಾಡಕ್ಟ್ ತಯಾರಿಸಿ ಜೀವನಕ್ಕೆ ದಾರಿ ಮಾಡಿಕೊಂಡಿದ್ದೆ. ಕರೊನಾದಿಂದ ಉದ್ದಿಮೆ ಮುಂದುವರಿಸಲು ಕಷ್ಟವಾಗಿದೆ, ನನ್ನ ಬಳಿ 15ರಿಂದ 20 ಜನ ಕೆಲಸಗಾರರಿದ್ದರು. ಈಗ ಕೆಲಸ ಕಳೆದುಕೊಂಡಿದ್ದಾರೆ, ಕಾಯಕ ಯೋಜನೆಯಡಿ ಅಗತ್ಯ ಸಾಲ ನೀಡಿದಲ್ಲಿ ಮತ್ತೆ ಉದ್ದಿಮೆ ಪುನರಾರಂಭಿಸಲು ಸಹಾಯವಾಗುತ್ತದೆ.
    ಶ್ವೇತಾ, ಕೋಟೆ, ಕೋಲಾರ

    ಟೇಲರಿಂಗ್ ಕಲಿತಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ, ಕರೊನಾದಿಂದ ಕೆಲಸ ಕಳೆದುಕೊಂಡೆ. ಸಂಸಾರ ನಡೆಸಲು ಕಷ್ಟವಾಗುತ್ತದೆ. ಸಾಲ ನೀಡಿದಲ್ಲಿ ಆಧುನಿಕ ಹೊಲಿಗೆ ಯಂತ್ರ ಖರೀದಿಸಿ ಕಾಯಕ ಪ್ರಾರಂಭಿಸುವ ಜತೆಗೆ ನಿರುದ್ಯೋಗಿಗಳಿಗೆ ಕೆಲಸ ಕೊಡುವೆ.
    ವರಲಕ್ಷ್ಮೀ, ಕಾರಂಜಿಕಟ್ಟೆ, ಕೋಲಾರ

    ಮನೆಯಲ್ಲೇ ಡಿಡಿಟಿ ಪೌಡರ್, ಬ್ಲೀಚಿಂಗ್ ಪೌಡರ್ ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿರುವೆ, ನನ್ನ ಬಳಿ 4 ಜನ ಕೆಲಸ ಮಾಡುತ್ತಿದ್ದಾರೆ, ಬಂಡವಾಳ ಇಲ್ಲದೆ ವ್ಯಾಪಾರ ವೃದ್ಧಿಸುತ್ತಿಲ್ಲ. ಕಾಯಕ ಯೋಜನೆಯಡಿ ಸಾಲ ನೀಡಿದಲ್ಲಿ ವ್ಯಾಪಾರ-ವಹಿವಾಟು ಅಭಿವೃದ್ದಿಪಡಿಸುವೆ.
    ಸೆಲ್ವಂ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts