More

    ಬದುಕಿಗೆ ವಿಜ್ಞಾನ ಬಹಳ ಅಗತ್ಯ

    ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪ್ರಥಮ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ಇಲ್ಲಿಯ ಭೈರಿದೇವರಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು.

    ಮೊದಲ ಬಾರಿ ನಡೆದ ಈ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳೇ ಸರ್ವಾಧ್ಯಕ್ಷೆ, ಸಹ ಅಧ್ಯಕ್ಷರಾಗಿ ಗಮನ ಸೆಳೆದರು. ಈ ಮಕ್ಕಳೆಲ್ಲ ಸಾಧಕರು, ತಮ್ಮ ಪ್ರಬಂಧಗಳ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿ ಜನಮನ ಗೆದ್ದವರು.

    ಸಮ್ಮೇಳನ ಸರ್ವಾಧ್ಯಕ್ಷೆ ಪ್ರಿಯಾಂಕಾ ಮೇಗಳಮನಿ ಮಾತನಾಡಿ, ಇಂದಿನ ಬದುಕಿಗೆ ವಿಜ್ಞಾನ ಎಷ್ಟು ಅಗತ್ಯ ಎಂಬುದರ ಬಗ್ಗೆ ವಿಜ್ಞಾನ ತಂತ್ರಜ್ಞಾನ ಆಧುನಿಕತೆ ಎಂಬ ನನ್ನ ಪ್ರಬಂಧದಲ್ಲಿ ವಿವರಿಸಿದ್ದೇನೆ. ಗುರುತ್ವಾಕರ್ಷಣೆ ಶಕ್ತಿ ಇರುವುದರಿಂದಲೇ ನಾವು ಈ ಭೂಮಿ ಮೇಲೆ ಬದುಕಲು ಸಾಧ್ಯವಾಗಿದೆ ಎಂದರು.

    ರೋಬೋಟ್ ಮನುಷ್ಯ ಮಾಡುವ ಎಲ್ಲ ಕೆಲಸವನ್ನು ಮಾಡಬಹುದು. ಆದರೆ, ಮನುಷ್ಯನಂತೆ ಅದಕ್ಕೆ ಭಾವನೆಗಳು ಇರುವುದಿಲ್ಲ. ಹಾಗಾಗಿ ನಾವು ಎಷ್ಟೇ ಮುಂದುವರಿದರೂ ಮಾನವೀಯತೆ ಮರೆಯಬಾರದು ಎಂದು ಹೇಳಿದರು.

    ಸಮ್ಮೇಳನ ಸಹ ಅಧ್ಯಕ್ಷೆ ನೀಲಮ್ಮ ಬೋರಶೆಟ್ಟಿ, ಗ್ರಾಮೀಣ ಕ್ರೀಡೆಗಳು ಇಂದು ನಶಿಸಿ ಹೊರಟಿದ್ದು, ಅವುಗಳ ಸಂರಕ್ಷಣೆಗೆ ನಾವೆಲ್ಲ ಕಂಕಣಬದ್ದರಾಗಬೇಕು, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಹಾಗಾಗಿ ಮಕ್ಕಳಿಗೆ ಕ್ರೀಡೆಗಳು ಅಗತ್ಯ ಎಂದರು.

    ಇನ್ನೊಬ್ಬ ಸಹ ಅಧ್ಯಕ್ಷ ವಿನಾಯಕ ಕೋಳಿವಾಡ ಮಾತನಾಡಿ, ಆದರ್ಶ ವ್ಯಕ್ತಿಯಾಗಬೇಕಾದರೆ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಗುರುಗಳಿಗೆ ಗೌರವ ನೀಡಬೇಕು. ಸಾಧಿಸುವ ಛಲ ಇದ್ದರೆ ಮಾತ್ರ ಸಾಧನೆ ಮಾಡಬಹುದು ಎಂದರು.

    ಸಮ್ಮೇಳನ ಉದ್ಘಾಟನೆ: ಸಸಿಗೆ ನೀರು ಎರೆಯುವ ಮೂಲಕ ಪ್ರಥಮ ಸಮ್ಮೇಳನವನ್ನು ಸಮಾಜ ಸೇವಕ ಸಂತೋಷ ಆರ್. ಶೆಟ್ಟಿ ಉದ್ಘಾಟಿಸಿದರು. ಮಕ್ಕಳು ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕು ಎಂದರು.

    ಲಕ್ಷ್ಮಿನಾರಾಯಣ ಗುಪ್ತಾ ಅವರು ಖಾಲಿ ಚೀಲದೊಳಗಿಂದ ಕನ್ನಡ ಬಾವುಟ ಹೊರತೆಗೆಯುವ ಮೂಲಕ ಮ್ಯಾಜಿಕ್ ಮಾಡಿ ರಂಜಿಸಿದರು. ಮಕ್ಕಳ ಸಾಹಿತ್ಯ ಪರಿಷತ್​ನ ಧಾರವಾಡ ಜಿಲ್ಲೆಯ ಪದಾಧಿಕಾರಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

    ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಂಜೀವ ದುಮಕನಾಳ ಕಾರ್ಯಕ್ರಮ ನಿರ್ವಹಿಸಿದರು.

    ಎಸ್.ಎಂ. ಮಡಿವಾಳರ, ಬಸಪ್ಪ ಅಳ್ನಾವರ, ಚೇತನ್, ಮೋತಿಲಾಲ ರಾಠೋಡ, ಸುರೇಶ ಕಳಸಣ್ಣವರ, ವಿಜಯ ಕರೀಕಟ್ಟಿ, ಜಗದೀಶ ಯಲಭೋವಿ, ವೀರೇಶ ಕುಬಸದ, ಮಂಜುನಾಥ ಮೆಣಸಿನಕಾಯಿ, ಮಹನ್ಯ ಪಾಟೀಲ ಇತರರು ಪಾಲ್ಗೊಂಡಿದ್ದರು.

    ಪರಿಷತ್​ನ ಜಿಲ್ಲಾ ಗೌರವಾಧ್ಯಕ್ಷೆ ಸುನಂದಾ ಬೆನ್ನೂರ ಪ್ರಾಸ್ತಾವಿಕ ಮಾತನಾಡಿದರು. ಐಶ್ವರ್ಯ ಅಷ್ಟೇಕರ ಪ್ರಾರ್ಥನೆ ಹಾಡಿದರು. ರಂಜನಾ ಪಾಂಚಾಳ ಸ್ವಾಗತಿಸಿದರು. ರಾಮಚಂದ್ರ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ನಾಗೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts