More

    ಬಡಾವಣೆಗೆ ನುಗ್ಗಿದ ಕಾರ್ಖಾನೆ ಕೊಳಚೆ, ಸಾಂಕ್ರಾಮಿಕ ರೋಗ ಭೀತಿಯಲ್ಲಿ ವೀನಸ್ ಕೌಂಟಿ ಜನತೆ

    ಆನೇಕಲ್: ಹಾರಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಳೆಯಿಂದ ಕಾರ್ಖಾನೆಯ ಕೊಳಚೆನೀರು ನುಗ್ಗಿ ವೀನಸ್ ಕೌಂಟಿ ಬಡಾವಣೆ ಜಲಾವೃತವಾಗಿದೆ.

    ಗಬ್ಬುವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಇತ್ತೀಚೆಗೆ ಹಲವು ಕಂಪನಿಗಳು ಸಿಎಸ್‌ಆರ್ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸುವಾಗ ಕಂಪನಿಗಳ ಕೊಳಚೆ ನೀರು ಬಿಡಲು ಕೆರೆಯ ಪಕ್ಕದಲ್ಲೇ ಜಾಗ ಬಿಟ್ಟಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಕೊಳಚೆ ನೀರು ಬಡಾವಣೆಗೆ ನುಗ್ಗಿದೆ.

    ಬಡಾವಣೆಯ ಸುತ್ತಮುತ್ತಲಿನ ರೈತರು ಹೈನುಗಾರಿಕೆ ಮಾಡಿಕೊಂಡಿದ್ದು, ಹಸು ಕಟ್ಟಿರುವ ಜಾಗದಲ್ಲೂ ಕೊಳಚೆ ಆವೃತ್ತವಾಗಿದೆ. ಜಿಗಣಿ ಸುತ್ತಮುತ್ತ ಕೈಗಾರಿಕಾ ಪ್ರದೇಶದ 400ಕ್ಕೂ ಹೆಚ್ಚು ಮನೆಗಳಿರುವ ಬಡಾವಣೆ ಇದಾಗಿದ್ದು, ನಿತ್ಯ ಸಂಕಷ್ಟದಲ್ಲಿ ದಿನದೂಡುವಂತಾಗಿದೆ.
    ದ್ಯಾವಸಂದ್ರ ಕಡಬಕೆರೆ, ಮಂಚನಹಳ್ಳಿ ಕೆರೆ, ಕೋನಸಂದ್ರ ಕೆರೆ ನೀರು ನುಗ್ಗಿ ತೊಂದರೆ ಎದುರಾಗಿದೆ. ಬಡಾವಣೆ ವ್ಯಾಪ್ತಿಯ ಪಾರ್ಕ್ ಹಾಗೂ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಮನೆಯಿಂದ ಹೊರ ಬಂದರೆ ಕೊಳಚೆ ನೀರಿನಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ವಿಷಜಂತುಗಳ ಕಾಟ: ಒಳಚರಂಡಿ ಕೊಳಚೆ ನೀರಿನಲ್ಲಿ ಹಾವುಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರಕ್ಕೆ ಯಾರೂ ಕಿವಿಗೊಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತುಂಬಿ ಹರಿಯುತ್ತಿರುವ ಕಿರು ರಾಜಕಾಲುವೆ: ಬಡಾವಣೆ ಪಕ್ಕದಲ್ಲೇ ಕಿರು ರಾಜಕಾಲುವೆ ಇದ್ದು, ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಅಕ್ಕಪಕ್ಕದ ಕೆರೆಗಳ ನೀರು ಬಡಾವಣೆ ಮಧ್ಯದಲ್ಲಿರುವ ರಾಜಕಾಲುವೆಗೆ ನುಗ್ಗಿದ್ದರಿಂದ ಸಮಸ್ಯೆ ಎದುರಾಗಿದೆ.

    ಮುಳುಗಡೆಯಾದ ಕಾರು, ಬೈಕ್‌ಗಳು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಡಾವಣೆಯ ಕೆಲವೆಡೆ ಬೈಕ್ ಹಾಗೂ ಕಾರುಗಳು ನೀರಿನಲ್ಲಿ ಮುಳುಗಿವೆ.

    ಕೆರೆ ಪಕ್ಕದಲ್ಲಿ ಕೊಳಚೆ ನೀರು ಸಂಗ್ರಹಿಸಲು ಜಾಗ ಬಿಟ್ಟಿರುವುದರಿಂದ ಕೊಳಚೆ ನೀರು ಬಡಾವಣೆಗೆ ನುಗ್ಗುತ್ತಿದೆ. ಬಡಾವಣೆಯ ಸುತ್ತ ಕಿರು ರಾಜಕಾಲುವೆ ಮಾಡಲಾಗಿದ್ದು ನೀರು ತುಂಬಿ ಇಡೀ ಬಡಾವಣೆಯನ್ನು ಆವರಿಸಿದೆ. ಹಲವು ಬಾರಿ ತಹಸೀಲ್ದಾರ್‌ಗೆ ಪತ್ರ ಬರೆದರೂ ಕ್ರಮಕೈಗೊಂಡಿಲ್ಲ.
    ವೆಂಕಟೇಶ್‌ಗೌಡ, ಮಾಜಿ ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts