More

    ಬಂದ್ ಇಲ್ಲ, ಬರೀ ಪ್ರತಿಭಟನೆ

    ಹುಬ್ಬಳ್ಳಿ: ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕರೆ ನೀಡಿದ್ದ ಸೋಮವಾರದ ಕರ್ನಾಟಕ ಬಂದ್​ಗೆ ಹುಬ್ಬಳ್ಳಿಯಲ್ಲಿ ಮಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹೃದಯ ಭಾಗ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ರೈತ-ಕಾರ್ವಿುಕ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ಪ್ರಮುಖರು ಪ್ರತ್ಯೇಕ, ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಉಳಿದಂತೆ ಜನಜೀವನ ಸಾಮಾನ್ಯವಾಗಿತ್ತು.

    ನಗರದಲ್ಲಿ ವ್ಯಾಪಾರ-ವಹಿವಾಟು ಎಂದಿನಂತೆ ಇದ್ದವು. ಅಂಗಡಿ-ಮುಂಗಟ್ಟು ತೆರೆದಿದ್ದವು. ನಗರ ಸಾರಿಗೆ, ದೂರ ಪ್ರಯಾಣ ಬಸ್​ಗಳ ಸಂಚಾರಕ್ಕೆ ಅಡ್ಡಿ ಉಂಟಾಗಲಿಲ್ಲ. ಬೆಳಗ್ಗೆ 7 ಗಂಟೆಗೆ ಹೊಸೂರು ಬಳಿ ವಾಕರಸಾ ಸಂಸ್ಥೆಯ ಡಿಪೋದಿಂದ ಬಸ್​ಗಳು ಹೊರಗೆ ಹೋಗದಂತೆ ಹಾಗೂ ಹಳೇ ಬಸ್ ನಿಲ್ದಾಣದಿಂದ ಬಸ್​ಗಳು ಸಂಚರಿಸದಂತೆ ಪ್ರತಿಭಟನಾಕಾರರು ತಡೆದರು. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಬಸ್ ಸಂಚಾರ ಪುನರಾರಂಭಗೊಂಡವು. ಮಧ್ಯಾಹ್ನ 1 ಗಂಟೆಯವರೆಗೆ ಬಿಆರ್​ಟಿಎಸ್ ಚಿಗರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

    ನಗರದ ಮಾರುಕಟ್ಟೆ ಪ್ರದೇಶಗಳಾದ ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ, ದುರ್ಗದ ಬೈಲ್, ಜನತಾ ಬಜಾರ, ದಾಜಿಬಾನಪೇಟ, ಗಣೇಶಪೇಟ, ಇನ್ನಿತರ ಕಡೆ ಜನ ದಟ್ಟಣೆ ಕಂಡು ಬಂತು. ಪ್ರತಿಭಟನೆ ವೇಳೆ ಕಿತ್ತೂರ ಚನ್ನಮ್ಮ ವೃತ್ತದ ಸುತ್ತಮುತ್ತ, ಹಳೇ ಬಸ್ ನಿಲ್ದಾಣದ ಎದುರು ಅಂಗಡಿಗಳು ಬಂದ್ ಇದ್ದವು. ಆಟೋ ರಿಕ್ಷಾ, ಖಾಸಗಿ, ಲಘು ವಾಹನಗಳ ಓಡಾಟ ಎಂದಿನಂತೆ ಇದ್ದವು.

    ಗಬ್ಬೂರ ಬೈ ಪಾಸ್ ಬಳಿ ಹೆದ್ದಾರಿ ತಡೆ ನಡೆಸಲು ಮುಂದಾದ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಹಮಾಲಿ ಕಾರ್ವಿುಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಇಂದು ವಹಿವಾಟು ನಡೆಯಲಿಲ್ಲ.

    ಪ್ರತ್ಯೇಕ ಮೆರವಣಿಗೆ

    ಕಿತ್ತೂರ ಚನ್ನಮ್ಮ ವೃತ್ತಕ್ಕೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಮೆರವಣಿಗೆಯಲ್ಲಿ ಬಂದು ಪ್ರತ್ಯೇಕ -ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಕೊನೆಯಲ್ಲಿ ತಹಸೀಲ್ದಾರ್ ಕಚೇರಿಗೆ ಪ್ರತ್ಯೇಕವಾಗಿ ತೆರಳಿ ಮನವಿಪತ್ರ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಯ ಕರ್ನಾಟಕ, ಹು-ಧಾ ಜಿಲ್ಲಾ ಶ್ರೀ ಸಹಸ್ರಾರ್ಜುನ ಎಸ್.ಎಸ್.ಕೆ. ಸಮಾಜ ಯುವಕರ ಸಂಘ, ಬೀದಿ ಬದಿ ವ್ಯಾಪಾಸ್ಥರ ಸಂಘ, ಎಪಿಎಂಸಿ ಹಮಾಲಿ ಕಾರ್ವಿುಕರ ಸಂಘ, ಇನ್ನಿತರ ಸಂಘಟನೆಗಳು ಪಾಲ್ಗೊಂಡಿದ್ದವು. ಹು-ಧಾ ಮಹಾನಗರ ಜಿಲ್ಲಾ ಕಿಸಾನ್ ಕಾಂಗ್ರೆಸ್, ಜಿಲ್ಲಾ ಜೆಡಿಎಸ್, ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕ, ಲೋಕ ತಾಂತ್ರಿಕ ಜನತಾದಳ ರಾಜ್ಯ ಯುವ ಘಟಕ, ಸಿಐಟಿಯು, ಎಐಟಿಯುಸಿ ಕಾರ್ಯಕರ್ತರು, ಪೌರ ಕಾರ್ವಿುಕರು ಪ್ರತಿಭಟನೆಗೆ ಸಾಥ್ ನೀಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೊಷಣೆ ಕೂಗಿದರು.

    ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ರಾಜಣ್ಣ ಕೊರವಿ, ಸಿದ್ದು ತೇಜಿ, ಕಾಂಗ್ರೆಸ್​ನ ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ, ಅನ್ವರ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ದಶರಥ ವಾಲಿ, ಪ್ರಕಾಶ ಕ್ಯಾರಕಟ್ಟಿ, ಅಲ್ತಾಫ್ ಕಿತ್ತೂರ, ಬಾಬಾಜಾನ ಮುಧೋಳ, ರವಿಕುಮಾರ ಬಡ್ನಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಅನಂತಕುಮಾರ ಭಾರತೀಯ, ವಿಕಾಸ ಸೊಪ್ಪಿನ, ಅಮೃತ ಇಜಾರಿ, ಮಹೇಶ ಪತ್ತಾರ, ವಿಜಯ ಗುಂಟ್ರಾಳ, ಸಂಜೀವ ದುಮ್ಮಕನಾಳ, ಇತರರು ಇದ್ದರು.

    ಕಿತ್ತೂರ ಚನ್ನಮ್ಮ ವೃತ್ತಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿಪಿಗಳಾದ ಪಿ. ಕೃಷ್ಣಕಾಂತ ಹಾಗೂ ಆರ್.ಬಿ. ಬಸರಗಿ ಭೇಟಿ ನೀಡಿದ್ದರು. ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

    ವಿದ್ಯಾನಗರಿಯಲ್ಲಿ ನೀರಸ ಪ್ರತಿಕ್ರಿಯೆ

    ಧಾರವಾಡ ನಗರದಲ್ಲಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯೇ ಜುಬಿಲಿ ವೃತ್ತದಲ್ಲಿ ಸೇರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೊಷಣೆ ಕೂಗಿದರು. ನಂತರ ಪ್ರತಿಕೃತಿ ದಹಿಸುವ ಮೂಲಕ ಕೂಡಲೇ ಈ ಕಾಯ್ದೆ ಜಾರಿಗೆ ತರದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಎಂದಿನಂತೆ ಬಸ್ ಸಂಚಾರ ಪ್ರಾರಂಭವಾಗಿದ್ದನ್ನು ಕಂಡ ಪ್ರತಿಭಟನಾಕಾರರು ಜುಬಿಲಿ ವೃತ್ತದಲ್ಲಿ ಬಸ್, ಲಾರಿಗೆಗಳಿಗೆ ಅಡ್ಡ ಮಲಗಿ ಸಂಚಾರ ಬಂದ್ ಮಾಡುವಂತೆ ಆಗ್ರಹಿಸಿ ವಾಪಸ್ ಕಳುಹಿಸುತ್ತಿದ್ದರು. ಆದರೆ ಇದಾದ ಕೆಲ ಹೊತ್ತಿನ ಬಳಿಕ ಬಸ್​ಗಳು, ವಾಹನಗಳು ಅನ್ಯ ಮಾರ್ಗವಾಗಿ ಸಂಚಾರ ನಡೆಸಿದ್ದವು. ಹೀಗಾಗಿ ಕರ್ನಾಟಕ ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತ ಎಂಬಂತಾಗಿತ್ತು.

    ಜುಬಿಲಿ ವೃತ್ತದಲ್ಲಿ ಎಲ್ಲ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸುತ್ತಿದ್ದ ಪರಿಣಾಮ ಆ ಭಾಗದ ಸುತ್ತಲಿನ ಅಂಗಡಿಗಳು, ಮಾರುಕಟ್ಟೆ ಪ್ರದೇಶ ಬಂದಾಗಿತ್ತು. ಇದನ್ನು ಹೊರತುಪಡಿಸಿ ಇತರ ಭಾಗಗಳಲ್ಲಿ ವ್ಯಾಪಾರ ವಹಿವಾಟು, ಜನಸಂಚಾರ ಎಂದಿನಂತಿತ್ತು.

    ಮಧ್ಯಾಹ್ನದ ಬಳಿಕ ಪ್ರತಿಭಟನಾ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

    ಮುಖಂಡರಾದ ಎಸ್.ಆರ್. ಹಿರೇಮಠ, ಬಿ.ಡಿ. ಹಿರೇಮಠ, ನಾಗಪ್ಪ ಉಂಡಿ, ಲಕ್ಷ್ಮಣ ಬಕ್ಕಾಯಿ, ಡಾ. ವೆಂಕನಗೌಡ ಪಾಟೀಲ, ಪಿ.ಎಚ್. ನೀರಲಕೇರಿ, ಶಂಕರ ಅಂಬ್ಲಿ, ಶಿವಶಂಕರ ಹಂಪಣ್ಣವರ, ಬಿ.ಐ. ಈಳಿಗೇರಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತರು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts