More

    ಬಂದರು ನಿರ್ವಣದಲ್ಲಿ ರಾಜಧರ್ಮ ಪಾಲನೆ

    ಕಾರವಾರ: ಬಂದರು ನಿರ್ಮಾಣ ವಿಚಾರದಲ್ಲಿ ಸರ್ಕಾರ ರಾಜಧರ್ಮ ಪಾಲಿಸಲಿದೆ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬಂದರು ನಿರ್ವಣದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಿದೆ. ಮೀನುಗಾರರು, ಮೀನುಗಾರರಿಗೆ, ಪರಿಸರ, ಸಂಪ್ರದಾಯಕ್ಕೆ ತೊಂದರೆ ಉಂಟಾಗದಂತೆ, ಎಲ್ಲರ ಅಭಿಪ್ರಾಯ ಪಡೆದು, ಬಂದರು ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
    ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡದ ಮೀನುಗಾರರಿಗೆ ಸಾಕಷ್ಟು ಸೌಲಭ್ಯ ಸಿಕ್ಕಿಲ್ಲ ಎಂಬ ಆರೋಪವಿದೆ. ಅದನ್ನು ಸರಿದೂಗಿಸುವ ಕಾರ್ಯ ಮಾಡಲಾಗುವುದು ಎಂದ ಪೂಜಾರಿ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 13673 ವಿದ್ಯಾರ್ಥಿಗಳಿಗೆ ಒಟ್ಟು 3.36 ಕೋಟಿ ರೂ. ವಿದ್ಯಾರ್ಥಿವೇತನ ನೀಡಲಾಗಿದೆ. ಈವರೆಗೆ ಮೀನುಗಾರರಿಗೆ 10 ಕೋಟಿ ರೂ. ಡೀಸೆಲ್ ಖರೀದಿಯ ಮೇಲಿನ ತೆರಿಗೆ ಪಾವತಿಗೆ ಸಹಾಯಧನ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 1832 ಮನೆಗಳಿಗೆ ಹಾನಿಯಾಗಿದ್ದು, 12.04 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಹೊಗಳಿಕೆ ನಿರೀಕ್ಷೆ ಸಾಧ್ಯವೇ?: ವಿರೋಧ ಮಾಡುವುದೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಾಗೂ ಪ್ರತಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೆಲಸ. ಅವರಿಂದ ಸರ್ಕಾರದ ಬಗ್ಗೆ ಹೊಗಳಿಕೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿ ಸರ್ಕಾರ ಬೊಮ್ಮಾಯಿ ಅವರ ನೇತೃತ್ವದಲ್ಲಿ ಯಾವುದೇ ಗೊಂದಲವಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂತ್ರಿಮಂಡಲ ವಿಸ್ತರಣೆ ಅಥವಾ ಪುನಃ ರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದರು.

    ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ: ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಹಾಗೂ ವಸತಿ ಶಿಕ್ಷಣ ಇಲಾಖೆಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ತರಬೇತಿಗಾಗಿ ಅಗತ್ಯ ಭೂಮಿಕೆ ಸಿದ್ಧವಾಗಿದ್ದು, ಈಗಾಗಲೇ ತರಬೇತಿ ಆರಂಭಗೊಂಡಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts