More

    ಬಂಡವಾಳಶಾಹಿ ವ್ಯವಸ್ಥೆಯಿಂದ ಪರಿಸರ ನಾಶ

    ಚಿತ್ರದುರ್ಗ: ವಿಶ್ವದಲ್ಲಿನ ಬಂಡವಾಳಶಾಹಿಗಳ ದುರಾಸೆಗಾಗಿ ಪರಿಸರದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಇದನ್ನು ತಡೆಯಲು ಸಾಧ್ಯವಿಲ್ಲವೆಂಬ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಪರಿಸರ ತಜ್ಞ ಶಿವಸುಂದರ್ ಬೇಸರಿಸಿದರು.

    ಕ್ರೀಡಾಭವನದಲ್ಲಿ ವಿವಿಧ ಸಂಘಟನೆಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಏರುತ್ತಿರುವ ತಾಪಮಾನ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯ ತೀವ್ರತೆ, ಚಿತ್ರದುರ್ಗದ ಪರಿಸರ ಸಮಸ್ಯೆಗಳ ಕುರಿತ ರಾಜ್ಯಮಟ್ಟದ ಪರಿಸರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

    ಕೈಗಾರಿಕೆ ಕ್ರಾಂತಿ ತರುವಾಯ ಐಷಾರಾಮಿ ಜೀವನ, ಉದ್ಯಮಿಗಳ ಹಣದ ವ್ಯಾಮೋಹ ಮಿತಿ ಮೀರಿದೆ. ಕೈಗಾರಿಕೆಗಳಿಂದಾಗಿ ಕಾರ್ಬನ್ ಉತ್ಪಾದನೆ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸದಿದ್ದರೆ, ತಾಪಮಾನವೂ ಏರುಗತಿಯಲ್ಲಿ ಸಾಗಲಿದೆ. ವ್ಯವಸ್ಥೆ ಬದಲಾಗದಿದ್ದರೆ, ಭವಿಷ್ಯದಲ್ಲಿ ಮನುಷ್ಯರು ಸೇರಿ ಭೂಮಿಯ ಮೇಲಿನ ಸಕಲ ಜೀವರಾಶಿಗಳು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ಯಾರಿಸ್‌ನಲ್ಲಿ 2015ರಲ್ಲಿ ನಡೆದ ಕಾಪ್ ಸಮಾವೇಶದಲ್ಲಿ 2020ರ ವೇಳೆಗೆ ಶೇ 45ರಷ್ಟು ಕಾರ್ಬನ್ ಉತ್ಪಾದನೆ ಕಡಿಮೆಗೊಳಿಸುವ ಕುರಿತು ಒಪ್ಪಂದವಾಯಿತು. ಆದರೆ, ಈವರೆಗೆ ಶೇ 5ರಷ್ಟು ಕೂಡ ಕಡಿಮೆಯಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

    ಮುಂದಿನ 2045ರ ವೇಳೆಗೆ ಕಾರ್ಬನ್ ಉತ್ಪಾದನೆ ಸೊನ್ನೆಗೆ ತರಬೇಕೆಂಬ ತೀರ್ಮಾನವಾಗಿದೆ. ಆದರೆ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಜನ ಬದುಕಬೇಕೆಂದರೆ ಕೈಗಾರಿಕೆಗಳ ಅಗತ್ಯವಿದ್ದು, ಇಂಧನ ಶಕ್ತಿ ಬೇಕಿದೆ. ಇಲ್ಲದಿದ್ದರೆ, ಉದ್ಯೋಗವಿಲ್ಲವೆಂಬ ಪರಿಸ್ಥಿತಿ ಇದೆ. ಕಳೆದ ವರ್ಷ ದೇಶದಲ್ಲಿ 1.67 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ 40ರಷ್ಟು ನಿರುದ್ಯೋಗಿ ಯುವಕರು, ಸಣ್ಣಪುಟ್ಟ ಉದ್ಯಮ ನಡೆಸುವವರು ಇದ್ದಾರೆ. ಆದ್ದರಿಂದ ಪರ್ಯಾಯ ಇಂಧನ ಉತ್ಪಾದಿಸಲು ಅಮೇರಿಕಾದಂತಹ ದೇಶಗಳು ಸಹಕರಿಸಬೇಕಿದೆ. ಅದಕ್ಕಾಗಿ 10 ಬಿಲಿಯನ್ ಡಾಲರ್ ನಿಧಿ ತೆಗೆದಿಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

    ವರ್ಚುಯಲ್ ಮೂಲಕ ಯಲ್ಲಪ್ಪರೆಡ್ಡಿ ಮಾತನಾಡಿ, ತಾಪಮಾನ ಏರಿಕೆಯಿಂದ ಜೀವ ಸಂಕುಲ, ಗಾಳಿ, ನೀರು ಮತ್ತು ಆಹಾರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಪ್ರಸ್ತಾಪಿಸಿದರು.

    ಸಂಘಟಕ ಅವಿನಾಶ್, ಜೆ.ಯಾದವರೆಡ್ಡಿ, ಎಂ.ಆರ್.ದಾಸೇಗೌಡ, ಎನ್.ಜೆ.ದೇವರಾಜರೆಡ್ಡಿ, ಚಂದ್ರಶೇಖರ್ ತಾಳ್ಯ, ಡಾ.ದೊಡ್ಡಮಲ್ಲಯ್ಯ, ಜಿ.ಎನ್.ಮಲ್ಲಿಕಾರ್ಜುನಪ್ಪ, ಶಫಿವುಲ್ಲಾ, ಧನಂಜಯಕುಮಾರ್, ಸಿದ್ದರಾಜ್ ಜೋಗಿ, ಡಾ.ಸೌಮ್ಯಾ ಮಂಜುನಾಥಸ್ವಾಮಿ, ಕೆ.ಹೊಳೆಯಪ್ಪ, ಸಂಗೇನಹಳ್ಳಿ ಅಶೋಕ್‌ಕುಮಾರ್, ಪಿ.ವಿ.ಮಲ್ಲಿಕಾರ್ಜುನಯ್ಯ, ಪರಮೇಶ್ವರಪ್ಪ, ಇತರರಿದ್ದರು.

    ಚಿತ್ರದುರ್ಗ ವಿಜ್ಞಾನ ಕೇಂದ್ರ, ರಾಜ್ಯ ರೈತಸಂಘ, ಟಾರ್ಗೆಟ್ ಯುವ ವೇದಿಕೆ, ಸಂಜೀವಿನಿ ಜೀವರಕ್ಷಕ ಟ್ರಸ್ಟ್, ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ಅರಳಿ ಸಂಸ್ಥೆ, ಕರ್ನಾಟಕ ಜನಶಕ್ತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ವಾಸ್ತ್ಯ ಸರ್ಕಲ್ ಫೌಂಡೇಶನ್, ಮದರ್ ಡ್ರೀಮ್ಸ್ ಸೊಸೈಟಿ, ಉಳುಮೆ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts