More

    ಫೈನಲ್ ಸೆಣಸಾಟ ಇಂದು

    ಪೊನ್ನಂಪೇಟೆ: ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ 9 ದಿನಗಳಿಂದ ಪಾಂಡಂಡ ಎಂ. ಕುಟ್ಟಪ್ಪ ಜ್ಞಾಪಕಾರ್ಥ ನಡೆಯುತ್ತಿರುವ ಕೊಡವ ಕೌಟುಂಬಿಕ ರಿಂಕ್ ಹಾಕಿ ಭಾನುವಾರ ಸಮಾರೋಪಗೊಳ್ಳಲಿದ್ದು, 4 ತಂಡಗಳಲ್ಲಿ ಯಾವ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ ಎಂಬ ಕುತೂಹಲ ಮೂಡಿಸಿದೆ.


    ಶನಿವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ-ಚೇಂದಂಡ, ಕುಪ್ಪಂಡ- ನೆಲ್ಲಮಕ್ಕಡ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು, ಭಾನುವಾರ ಫೈನಲ್‌ಗಾಗಿ ಹೋರಾಟ ನಡೆಸಲಿವೆ. ಮಧ್ಯಾಹ್ನ 2.30 ಗಂಟೆಗೆ ಅಂತಿಮ ಹಣಾಹಣಿ ನಡೆಯಲಿದೆ.


    ಸೆಮಿಸ್‌ಗೆ 4 ತಂಡಗಳು: ಕ್ವಾರ್ಟರ್ ಫೈನಲ್‌ನಲ್ಲಿ ಪರದಂಡ, ಚೇಂದಂಡ, ಕುಪ್ಪಂಡ (ಕೈಕೇರಿ) ಹಾಗೂ ನೆಲ್ಲಮಕ್ಕಡ ತಂಡಗಳು ಸೆಮಿ ಫೈನಲ್‌ಗೆ ಪ್ರವೇಶ ಪಡೆದವು. ಪರದಂಡಕ್ಕೆ ಮಂಡೇಪಂಡ ವಿರುದ್ಧ 9-8 ಗೋಲುಗಳ ರೋಚಕ ಗೆಲುವು ದೊರೆಯಿತು. ಪರದಂಡ ಪ್ರಸಾದ್, ಅಯ್ಯಪ್ಪ, ಕೀರ್ತಿ, ಪ್ರಜ್ವಲ್ ತಲಾ 2, ಚಶ್ವಿನ್ 1, ಮಂಡೇಪಂಡ ಗೌತಂ 3, ಮೊಣ್ಣಯ್ಯ, ಸಜನ್ 2, ಕ್ರಿಪನ್ 1 ಗೋಲು ಹೊಡೆದರು. ಚೇಂದಂಡಕ್ಕೆ ಚೆಪ್ಪುಡೀರ ವಿರುದ್ಧ 3-1 ಗೋಲುಗಳ ಜಯ ದೊರೆಯಿತು. ಚೇಂದಂಡ ಉತ್ತಪ್ಪ 3 ಗೋಲು ಹೊಡೆದು ಗೆಲುವಿನ ಸರದಾರರಾದರು.


    ಚೆಪ್ಪುಡೀರ ಚಿಣ್ಣಪ್ಪ 1 ಗೋಲು ಬಾರಿಸಿದರು. ಕುಪ್ಪಂಡಕ್ಕೆ (ಕೈಕೇರಿ) ಚೇನಂಡ ವಿರುದ್ಧ 6-4 ಗೋಲುಗಳ ಜಯ ದೊರೆಯಿತು. ಕುಪ್ಪಂಡ ಸೋಮಯ್ಯ 5 ಗೊಲು ಹೊಡೆದು ತಂಡಕ್ಕೆ ನೆರವಾದರು. ನಾಚಪ್ಪ 1, ಚೇನಂಡ ಮಂದಣ್ಣ, ಸೋಮಯ್ಯ ತಲಾ 2 ಗೋಲು ಬಾರಿಸಿದರು. ನೆಲ್ಲಮಕ್ಕಡವು ಕಲಿಯಂಡ ವಿರುದ್ಧ 8-0 ಗೋಲುಗಳ ಜಯ ಪಡೆದುಕೊಂಡಿತು. ನೆಲ್ಲಮಕ್ಕಡ ಪೂವಣ್ಣ 3, ಸೋಮಯ್ಯ 2, ಸಚಿನ್, ಅಯ್ಯಪ್ಪ, ಚೆಂಗಪ್ಪ ತಲಾ ಒಂದೊಂದು ಗೋಲು ಹೊಡೆದರು.


    ಪರದಂಡವು ಮಾತಂಡವನ್ನು 6-4 ಗೋಲುಗಳ ಅಂತರದಲ್ಲಿ ಮಣಿಸಿತು. ಪರದಂಡ ಅಯ್ಯಪ್ಪ 5 ಗೋಲು, ಪ್ರಜ್ವಲ್ 1, ಮಾತಂಡ ಗಣಪತಿ 2, ಸುಬ್ಬಯ್ಯ, ಆರ್ಯನ್ ತಲಾ ಒಂದೊಂದು ಗೋಲು ದಾಖಲಿಸಿದರು.


    ಮಂಡೇಪಂಡಕ್ಕೆ ಮಚ್ಚಂಡ ವಿರುದ್ಧ 5-3 ಗೋಲುಗಳ ಜಯ ಲಭಿಸಿತು. ಮಂಡೇಪಂಡ ಕ್ರಿಪನ್ 3, ಸಜನ್, ಗೌತಂ, ಮಚ್ಚಂಡ ಕರುಂಬಯ್ಯ, ಪ್ರಿನ್ಸ್ ತಲಾ ಒಂದೊಂದು ಗೋಲುಗಳ ಕಾಣಿಕೆ ನೀಡಿದರು.


    ಚೆಪ್ಪುಡೀರವು ಕುಲ್ಲೇಟಿರವನ್ನು 4-2 ಗೋಲುಗಳಿಂದ ಸೋಲಿಸಿತು. ಚೆಪ್ಪುಡೀರ ಸೋಮಣ್ಣ 2, ಕಾರ್ಯಪ್ಪ, ಚಿಣ್ಣಪ್ಪ, ಕುಲ್ಲೇಟಿರ ನಾಚಪ್ಪ, ಶುಭಮ್ ತಲಾ 1 ಗೋಲು ಹೊಡೆದರು.


    ಚೇಂದಂಡಕ್ಕೆ ಪೆಮ್ಮಂಡ ವಿರುದ್ಧ 3-1 ಗೋಲುಗಳ ಜಯ ದೊರೆಯಿತು. ಚೇಂದಂಡ ಬೋಪಣ್ಣ, ಉತ್ತಪ್ಪ, ಅಮೋಘ್, ಪೆಮ್ಮಂಡ ಸುಹಾಸ್ ತಲಾ ಒಂದೊಂದು ಗೋಲು ಸಾಧನೆ ಮಾಡಿದರು.


    ಕುಪ್ಪಂಡ (ಕೈಕೇರಿ) ತಂಡವು ಚೆಕ್ಕೇರವನ್ನು 8-6 ಗೋಲುಗಳ ಅಂತರದಲ್ಲಿ ಮಣಿಸಿತು. ಕುಪ್ಪಂಡ ಸೋಮಯ್ಯ 6, ನಾಚಪ್ಪ, ಪ್ರಧಾನ್ ತಲಾ 1, ಚೆಕ್ಕೇರ ಆದರ್ಶ್ 3, ಆಕರ್ಶ್ 2, ಸೋಮಯ್ಯ 1ಗೋಲು ಹೊಡೆದರು.


    ಚೇನಂಡಕ್ಕೆ ಮಾರ್ಚಂಡ ವಿರುದ್ಧ 3-2 ಗೋಲುಗಳ ಗೆಲುವು ಲಭಿಸಿತು. ಚೇನಂಡ ಸೋಮಯ್ಯ 2, ಮಂದಣ್ಣ, ಮಾರ್ಚಂಡ ಸುಬ್ರಮಣಿ, ನಾಚಪ್ಪ ತಲಾ ಒಂದು ಗೋಲು ಬಾರಿಸಿ ಮಿಂಚಿದರು.


    ಕಲಿಯಂಡಕ್ಕೆ ಸೋಮೆಯಂಡ ವಿರುದ್ಧ 5-4 ಗೋಲುಗಳ ಸಮಾಧಾನಕರ ಗೆಲುವು ದಕ್ಕಿತು. ಕಲಿಯಂಡ ಭರತ್ 3, ಕಿರಣ್, ಕಾರ್ಯಪ್ಪ ತಲ 1, ಸೋಮೆಯಂಡ ಅಪ್ಪಚ್ಚು 3, ಅಪ್ಪಯ್ಯ 1 ಗೋಲು ಹೊಡೆದು ಹೋರಾಟ ನಡೆಸಿದರು.


    ನೆಲ್ಲಮಕ್ಕಡವು ಕಡೇಮಡವನ್ನು 6-1 ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ಸಚಿನ್, ಸೋಮಯ್ಯ ತಲಾ 2, ಪೂವಣ್ಣ, ಅಪ್ಪಣ್ಣ, ಕಡೇಮಡ ಚರ್ಮಣ ಒಂದೊಂದು ಗೋಲುಗಳಿಂದ ನೆರವಾದರು.


    ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೆಮ್ಮಂಡ ಆಟಗಾರರು ಚೇಂದಂಡ ವಿರುದ್ಧದ ಪಂದ್ಯದಲ್ಲಿ 3 ನಿಮಿಷ ಮುಂಚೆ ಮೈದಾನದಿಂದ ಹೊರ ನಡೆಯಿತು. ಪಂದ್ಯದ ಉತ್ತರಾರ್ಧದಲ್ಲಿ ಅಂಪೈರ್ ಪೆಮ್ಮಂಡ ವಿರುದ್ಧ ಪೆನಾಲ್ಸಿ ಚಾಲೆಂಜಿಂಗ್ ತೀರ್ಪು ನೀಡಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಟಗಾರರು, ಚೇಂದಂಡ ತಂಡ ಕೂಡ ಅದೇ ರೀತಿಯ ತಪ್ಪೆಸಗಿದ್ದರೂ ನಮಗೆ ಮಾತ್ರ ಚಾಲೆಂಜಿಂಗ್ ತೀರ್ಪು ನೀಡಿದೆ. ಇದರಿಂದ ಆಟವಾಡುವುದಿಲ್ಲ ಎಂದು ಸುಮಾರು 15 ನಿಮಿಷಗಳ ಕಾಲ ಮೈದಾನದಿಂದ ಹೊರ ಬಂದು ಆಕ್ರೋಶ ವ್ಯಕ್ತಪಡಿಸಿತು. ನಂತರ ಚಾಲೆಂಜಿಂಗ್ ತೀರ್ಪಿಗೆ ಮನ್ನಣೆ ನೀಡಿ, ಆಟಕ್ಕೆ ಅವಕಾಶ ಮಾಡಿಕೊಟ್ಟಿತು. ನಂತರ ಪೆಮ್ಮಡ ತಂಡದ ಗೋಲು ಚಾಲೆಂಜಿಂಗ್ ಸಮಯದಲ್ಲಿ ಪ್ರತಿಸ್ಪರ್ಧೆ ಮಾಡದೆ ಗೋಲು ಪೆಟ್ಟಿಗೆಯಿಂದ ಹೊರ ಬಂದು ಸುಲಭ ಗೋಲು ದಾಖಲೆಗೆ ಅವಕಾಶ ಮಾಡಿಕೊಟ್ಟರು. ನಂತರ ನಿಗದಿತ ಸಮಯಕ್ಕೂ ಮುಂಚೆ ಆಟ ಕೈಬಿಟ್ಟರು. ಇದು ಕ್ರೀಡಾಪ್ರಿಯರಿಗೆ ಬೇಸರ ತಂದಿತು.


    ಕಾಕತಾಳೀಯ ಎಂಬಂತೆ ಟೈಸ್‌ನಲ್ಲಿರುವ 2 ಪೂಲ್‌ಗಳ ಪ್ರಥಮ ಮತ್ತು ಅಂತ್ಯದಲ್ಲಿರುವ ತಂಡಗಳು ಸೆಮಿ ಫೈನಲ್‌ಗೇರಿವೆ. ಪೂಲ್ ಎ ಮತ್ತು ಬಿ ಯಲ್ಲಿ ಕ್ರಮವಾಗಿ ಮೇಲೆ ಮತ್ತು ಕೆಳಭಾಗದಲ್ಲಿರುವ ಪರದಂಡ, ಚೇಂದಂಡ, ಪೂಲ್ ಸಿ. ಮತ್ತು ಡಿ. ಯಲ್ಲಿರುವ ಕುಪ್ಪಂಡ (ಕೈಕೇರಿ) ಮತ್ತು ಕೆಳಭಾಗದಲ್ಲಿರುವ ನೆಲ್ಲಮಕ್ಕಡ ಸೆಮಿಗೆ ಲಗ್ಗೆ ಇಟ್ಟಿದ್ದು, ಕಾಕತಾಳೀಯವಾದರೂ ಕುತೂಹಲಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts