More

    ಫುಟ್​ಬಾಲ್​ನಂತಾಗಿದ್ದಾರೆ ರೈತರು!

    ಜಿ.ಟಿ. ಹೆಗಡೆ ಹುಬ್ಬಳ್ಳಿ
    ಕೃಷಿ ಸಾಲಗಳಿಗೆ ಸಂಬಂಧಿಸಿದ ದಸ್ತಾವೇಜುಗಳ ವಿಷಯದಲ್ಲಿ ನೋಂದಣಿ ಕಚೇರಿಯಲ್ಲಿ ಆಗಬೇಕಾದ ಕೆಲಸಗಳನ್ನು ಬ್ಯಾಂಕ್​ಗಳಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ಸೂಚಿಸಿದ್ದರಿಂದಾಗಿ ಹುಬ್ಬಳ್ಳಿ ಉತ್ತರ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ರೈತರು ಸಾಲಕ್ಕೆ ಸಂಬಂಧಿಸಿದ ದಾಖಲೆ ಮಾಡಿಸಲಾಗದೇ ಹೈರಾಣಾಗಿರುವುದು ಬೆಳಕಿಗೆ ಬಂದಿದೆ.
    ದಸ್ತಾವೇಜುಗಳನ್ನು ಕಾವೇರಿ ತಂತ್ರಾಂಶ ಬಳಸಿ ಅಪ್​ಲೋಡ್ ಮಾಡುವ ಕ್ರಮ ಚಾಲ್ತಿಯಲ್ಲಿದೆ. ಸಾಲಕ್ಕೆ ಸಂಬಂಧಿಸಿದ ಮಾರ್ಟ್​ಗೇಜ್ ಮತ್ತಿತರ ದಸ್ತಾವೇಜುಗಳನ್ನು ರೈತರು ಖುದ್ದಾಗಿ ಉಪನೋಂದಣಾಧಿಕಾರಿ ಕಚೇರಿಗೆ ಹೋಗಿ ನಿಗದಿತ ಶುಲ್ಕ ಪಾವತಿಸಿ ಮಾಡಿಸಿಕೊಂಡು ಬ್ಯಾಂಕ್​ಗಳಿಗೆ ಸಲ್ಲಿಸುತ್ತಾರೆ. ಆದರೆ, ವಿದ್ಯಾನಗರದಲ್ಲಿರುವ ಹುಬ್ಬಳ್ಳಿ ಉತ್ತರ ಉಪನೋಂದಣಾಧಿಕಾರಿ ಕಚೇರಿಯನ್ನು ರಾಜ್ಯ ಸರ್ಕಾರ ಪೈಲಟ್ ಪ್ರಾಜೆಕ್ಟ್​ಗೆ ಸೇರಿಸಿರುವುದು ಸಮಸ್ಯೆಗೆ ಕಾರಣವಾಗಿದೆ.
    ಕಾವೇರಿ ತಂತ್ರಾಂಶವನ್ನು ಫ್ರುಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆಂಡ್ ಯುನಿಫೈಡ್ ಬೆನೆಫೀಶಿಯರಿ ಇನ್​ಫಾಮೇಷನ್ ಸಿಸ್ಟಮ್ ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ಸಂಯೋಜಿಸಲಾಗಿದೆ. ಇದನ್ನು ಹುಬ್ಬಳ್ಳಿ ಉತ್ತರ ಸೇರಿದಂತೆ ಆಯ್ದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಯೋಗಾರ್ಥ ಬಳಕೆ ಮಾಡುವಂತೆ ಕಳೆದ ಆಗಸ್ಟ್ 30ರಂದು ಆದೇಶಿಸಲಾಗಿದೆ.
    ‘ಕೃಷಿ ಸಾಲಗಳಿಗೆ ಸಂಬಂಧಿಸಿದ ದಸ್ತಾವೇಜುಗಳಾದ ಫಾಮ್ರ್-3, ಡಿಸ್​ಚಾರ್ಜ್, ರಿಕನ್ವೇಯನ್ಸ್ ಇವನ್ನೆಲ್ಲ ಕಡ್ಡಾಯವಾಗಿ ಆನ್​ಲೈನ್ ಮುಖಾಂತರ ಫೈಲ್ ಮಾಡಿಕೊಳ್ಳಬೇಕು. ಕೃಷಿ ಸಾಲದ ಅಡಮಾನ ಪತ್ರಗಳಿಗೆ ಡೇಟಾವನ್ನು ಫ್ರುಟ್ಸ್ ತಂತ್ರಾಂಶದ ಮೂಲಕ ಕಾವೇರಿ ತಂತ್ರಾಂಶಕ್ಕೆ ಇಂಪೋರ್ಟ್ ಮಾಡಿಕೊಂಡು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ. ಅಂದರೆ, ಫ್ರುಟ್ಸ್ ತಂತ್ರಾಂಶವನ್ನು ಬ್ಯಾಂಕ್​ಗಳು ಅನುಷ್ಠಾನಗೊಳಿಸಿಕೊಂಡು, ಅಲ್ಲಿಯೇ ವಿವರ ದಾಖಲಿಸಿಕೊಂಡು ನೋಂದಣಾಧಿಕಾರಿ ಕಚೇರಿಗೆ ಆನ್​ಲೈನ್​ನಲ್ಲಿ ಕಳುಹಿಸಬೇಕು.
    ಬ್ಯಾಂಕ್​ಗಳಲ್ಲೇ ಕೆಲಸ ಆಗುವುದರಿಂದ ಕೃಷಿ ಸಾಲಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಫೈಲ್ ಮಾಡಲು ರೈತರು ಉಪನೋಂದಣಿ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಎನ್ನುವುದು ಸರ್ಕಾರದ ಆಶಯವಾಗಿದೆ. ನೋಂದಣಿ ಮಹಾಪರಿವೀಕ್ಷಕರಿಂದ ಆದೇಶ ಬಂದ ನಂತರ ಹುಬ್ಬಳ್ಳಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ಬಂದ ರೈತರಿಗೆ ಅಧಿಕಾರಿಗಳು ಬ್ಯಾಂಕಿನ ದಾರಿ ತೋರಿಸಿದ್ದಾರೆ. ಬ್ಯಾಂಕಿಗೆ ಹೋದ ರೈತರಿಗೆ ನಿರಾಸೆಯಾಗಿದೆ. ಏಕೆಂದರೆ, ತಮ್ಮ ಬಳಿ ಪಾಸ್​ವರ್ಡ್ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿ, ಪುನಃ ಉಪನೋಂದಣಾಧಿಕಾರಿಗಳನ್ನು ಸಂರ್ಪಸಿ ಎಂದು ತಿಳಿಸಿದ್ದಾರೆ. ಈ ಮಧ್ಯೆ ಕೆಲವು ಬ್ಯಾಂಕ್​ಗಳು ಫ್ರುಟ್ಸ್ ತಂತ್ರಜ್ಞಾನ ಉಪಯೋಗಿಸಲು ಮುಂದಾದಾಗ ತಾಂತ್ರಿಕ ಸಮಸ್ಯೆಗಳು ಉಂಟಾಗಿದ್ದರಿಂದ ಉದ್ದೇಶ ಈಡೇರಲಿಲ್ಲ. ಮತ್ತೆ ಉಪನೋಂದಣಿ ಕಚೇರಿಗೆ ಹೋದ ರೈತರಿಗೆ ಅಧಿಕಾರಿಗಳು ಹಿಂದಿನ ಉತ್ತರವನ್ನೇ ಹೇಳಿ ಕಳುಹಿಸತೊಡಗಿದ್ದು, ರೈತರು ತಮ್ಮ ಪರಿಸ್ಥಿತಿ ಫುಟ್​ಬಾಲ್​ನಂತೆ ಆಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
    ಆಫ್​ಲೈನ್ ಮೂಲಕ ನೋಂದಣಿ
    ಫ್ರುಟ್ಸ್ ತಂತ್ರಾಂಶ ಸಂಯೋಜನೆಯ ಪ್ರಯೋಗಾರ್ಥ ಬಳಕೆಗೆ ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಉತ್ತರ ಕಚೇರಿ ಮಾತ್ರ ಆಯ್ದುಕೊಂಡಿದ್ದರೆ, ರಾಯಚೂರು ಜಿಲ್ಲೆಯ ಎಲ್ಲ ಉಪನೋಂದಣಾಧಿಕಾರಿ ಕಚೇರಿಯನ್ನು ಸೇರಿಸಿಕೊಳ್ಳಲಾಗಿದೆ. ಹೀಗಾಗಿ, ಅಲ್ಲಿ ತೀವ್ರತರ ತೊಂದರೆಯಾಗಿತ್ತು. ಇದನ್ನು ಮನಗಂಡ ಅಲ್ಲಿಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೆ. 8ರಂದು ಸಭೆ ನಡೆದು, ಫ್ರುಟ್ಸ್ ತಂತ್ರಾಂಶ ಸಂಯೋಜನೆಯಲ್ಲಿ ತಾಂತ್ರಿಕ ತೊಂದರೆಗಳ ಬಗ್ಗೆ ಚರ್ಚೆಯಾಯಿತು. ತಕ್ಷಣ ಅದನ್ನು ನೋಂದಣಿ ಮಹಾಪರಿವೀಕ್ಷಕರ ಗಮನಕ್ಕೆ ತರಲಾಗಿತ್ತು. ಅವರು ಸೆ. 13ರಂದು ಹೊರಡಿಸಿರುವ ಜ್ಞಾಪನ ಪತ್ರದಲ್ಲಿ ರಾಯಚೂರು ಜಿಲ್ಲಾಧಿಕಾರಿ ಸಭೆ ವಿಷಯ ಪ್ರಸ್ತಾಪಿಸಿ, ತಾತ್ಕಾಲಿಕ ಪರಿಹಾರ ಸೂಚಿಸಿದ್ದಾರೆ. ಅಂದರೆ, ‘ಸಂಬಂಧಿಸಿದ ಉಪನೋಂದಣಿ ಕಚೇರಿಗಳಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಆನ್​ಲೈನ್ (ಫ್ರುಟ್ಸ್) ಹಾಗೂ ಈ ಹಿಂದೆ ಇದ್ದ ಪದ್ಧತಿಯಂತೆ ಆಫ್​ಲೈನ್ ಮುಖಾಂತರ ಪಡೆದು ನೋಂದಾಯಿಸಬೇಕು’ ಎಂದು ತಿಳಿಸಿದ್ದಾರೆ. ಹೊಸ ಆದೇಶ ಹೊರಡಿಸಿ ಅಂದಾಜು 15 ದಿನದ ನಂತರ ಸರ್ಕಾರ ಹೀಗೊಂದು ತಾತ್ಕಾಲಿಕ ಪರಿಹಾರ ನೀಡಿದೆ. ಆದರೆ, ಸಾಕಷ್ಟು ಸಿದ್ಧತೆ ಮಾಡಿಕೊಳ್ಳದೆ ಮತ್ತು ಬ್ಯಾಂಕಿನವರೊಂದಿಗೆ ಸಮನ್ವಯ ಮಾಡಿಕೊಳ್ಳದೇ ಆದೇಶ ಹೊರಡಿಸಿದ್ದರಿಂದ ನೂರಾರು ರೈತರು ತೊಂದರೆ ಅನುಭವಿಸಿದ್ದಂತೂ ಸತ್ಯ. ಅಲ್ಲದೆ, ಈಗ ಒಂದೇ ಸಲ ನೋಂದಣಿ ಕಚೇರಿಗಳಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಕರೊನಾ ನಿಯಮಗಳ ಪಾಲನೆಯೂ ಆಗಬೇಕಿದ್ದು, ನೋಂದಣಿ ಕಚೇರಿ ಅಧಿಕಾರಿಗಳ ಮೇಲಿನ ಒತ್ತಡವೂ ಜಾಸ್ತಿಯಾಗಲಿದೆ. ಇಷ್ಟಕ್ಕೂ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ ಸಿಕ್ಕಿಲ್ಲ.

    ತುರ್ತಾಗಿ ಒಂದು ಋಣಮುಕ್ತ ಪತ್ರ ಬೇಕಿದೆ. ಸಾಕಷ್ಟು ಅಲೆದಾಡಿದರೂ ಕೆಲಸ ಆಗಿಲ್ಲ. ನೋಂದಣಿ ಮಹಾಪರಿವೀಕ್ಷಕರ ಸುತ್ತೋಲೆ ಬಂದಿರುವುದರಿಂದ ಈಗ ಕೆಲಸವಾಗುವ ವಿಶ್ವಾಸ ಬಂದಿದೆ.
    | ಉಮೇಶಗೌಡ ಪಾಟೀಲ ಹಳ್ಯಾಳ ಗ್ರಾಮದ ರೈತ

    ಮಹಾಪರಿವೀಕ್ಷಕರಿಂದ ಜ್ಞಾಪನ ಪತ್ರ ಬಂದಿದೆ. ಅದರಂತೆ ರೈತರಿಗೆ ಅಗತ್ಯ ದಸ್ತಾವೇಜು ಮಾಡಿಕೊಡುವುದಾಗಿ ಕಚೇರಿಗೆ ಬಂದ ರೈತರಿಗೆ ತಿಳಿಸಿದ್ದು, ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
    | ನಾಗರಾಜ
    ಉಪನೋಂದಣಾಧಿಕಾರಿ, ಹುಬ್ಬಳ್ಳಿ ಉತ್ತರ ಕಚೇರಿ<

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts