More

    ಫಿವರ್ ಕ್ಲಿನಿಕ್ ಬಸ್ ರೆಡಿ, ಜನರ ಬಳಿಗೆ ವೈದ್ಯಕೀಯ ವ್ಯವಸ್ಥೆ

    ಮಂಗಳೂರು: ಕರೊನಾ ಸೋಂಕಿತರನ್ನು ಗುರುತಿಸಲು ಮತ್ತು ಅಗತ್ಯ ಚಿಕಿತ್ಸೆಗೆ ನೆರವಾಗಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಫಿವರ್ ಕ್ಲಿನಿಕ್ ಬಸ್ ಹಾಗೂ ಶಂಕಿತರ ಗಂಟಲ ದ್ರವ ತೆಗೆಯಲು ಇನ್ನೊಂದು ಮಿನಿ ಬಸ್ ಸಿದ್ಧವಾಗಿದೆ.

    ಜಿಲ್ಲಾಡಳಿತ ನಿರ್ದೇಶನದಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ಮಾರ್ಗದರ್ಶನದಲ್ಲಿ ನಿಗಮದ ಮಂಗಳೂರು ವರ್ಕ್‌ಶಾಪ್ ಪರಿಣಿತರು ಒಂದು ಬಸ್ಸನ್ನು ಫಿವರ್ ಕ್ಲಿನಿಕ್ ಆಗಿ ಪರಿವರ್ತಿಸಿದ್ದಾರೆ.

    ವೈದ್ಯಕೀಯ ತಪಾಸಣೆ, ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಬಸ್‌ನಲ್ಲಿ ವೈದ್ಯರು, ಸಾರ್ವಜನಿಕರು ಮತ್ತು ಚಾಲಕರಿಗೆ ಪ್ರತ್ಯೇಕ ಕ್ಯಾಬಿನ್‌ಗಳಿರುತ್ತವೆ. ಪ್ರತ್ಯೇಕ ಸ್ಯಾನಿಟೈಸರ್, ವಾಷ್‌ಬೇಸಿನ್ ಸೌಕರ್ಯವಿದೆ.

    ಬಸ್‌ನಲ್ಲಿರುವ ವಿಶೇಷತೆಗಳೇನು?: ಸಾರ್ವಜನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸ್ಪೀಕರ್ ಮತ್ತು ಮೈಕ್ರೋಫೋನ್, ವೈದ್ಯಕೀಯ ಪರೀಕ್ಷೆ ವ್ಯವಸ್ಥೆ ಇರುತ್ತದೆ. ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವ ರೀತಿ ಆಸನ ವ್ಯವಸ್ಥೆ, ಕರೊನಾ ಮಾಹಿತಿ ಒದಗಿಸಲು ಟಿವಿ, ನಿರುಪಯುಕ್ತ ನೀರು ಸಂಗ್ರಹಿಸಲು ಟ್ಯಾಂಕ್, ದಾದಿಯರಿಗೆ ಪ್ರತ್ಯೇಕ ಆಸನ, ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ವಿಶ್ರಾಂತಿ ಸ್ಥಳ, ಐದು ಫ್ಯಾನ್ ಮತ್ತು ಐದು ಎಲ್ಇಡಿ ಲೈಟ್, ಐದು ಮೊಬೈಲ್ ಚಾರ್ಜರ್ ಯುನಿಟ್, ಲ್ಯಾಪ್‌ಟಾಪ್ ಚಾರ್ಜರ್ ವ್ಯವಸ್ಥೆಗಳನ್ನು ಈ ಬಸ್ ಒಳಗೊಂಡಿದೆ.

    ಅವಶ್ಯ ಪ್ರದೇಶದಲ್ಲಿ ಸಂಚಾರ: ಕರೊನಾ ಸೋಂಕಿತರ ಗಂಟಲಿನ ದ್ರವ ತೆಗೆಯಲು ಮಾರುತಿ ಒಮ್ನಿ ಮಾದರಿಯ ಪ್ರತ್ಯೇಕ ಸಣ್ಣ ವಾಹನವೂ ಸಿದ್ಧವಾಗಿದೆ. ಕೋವಿಡ್ ಪಾಸಿಟಿವ್ ಕಂಡುಬಂದ ಹಾಗೂ ಇತರ ಅವಶ್ಯ ಪ್ರದೇಶಗಳಲ್ಲಿ ಫಿವರ್ ಕ್ಲಿನಿಕ್ ಬಸ್ ಸಂಚರಿಸಲಿದೆ. ಕ್ಲಿನಿಕ್‌ನಲ್ಲಿ ಓರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಇರಲಿದ್ದಾರೆ. ಇಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಪರೀಕ್ಷೆ ನಡೆಸುವ ವ್ಯವಸ್ಥೆ ಇದೆ. ಥರ್ಮಲ್ ಸ್ಕಾೃನರ್, ರಕ್ತ ಒತ್ತಡ ಮಾಪನ ಯಂತ್ರ ಅಳವಡಿಸಲಾಗಿದೆ. ಔಷಧೋಪಚಾರ ಸೌಲಭ್ಯ ಹೊಂದಿರುವ ಸಂಚಾರಿ ಫಿವರ್ ಕ್ಲಿನಿಕ್ ಇದಾಗಿದ್ದು, ಬಡಾವಣೆಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಯಲಿದೆ. ರೈಲುಗಳನ್ನು ಐಸೋಲೇಷನ್ ವಾರ್ಡ್‌ಗಳನ್ನಾಗಿ ಮಾರ್ಪಡಿಸಿದ ರೈಲ್ವೆ ಮಾದರಿಯಲ್ಲಿ ಸಂಚಾರಿ ಫೀವರ್ ಕ್ಲಿನಿಕ್ ಕಲ್ಪನೆಯನ್ನು ಕೆಎಸ್ಸಾರ್ಟಿಸಿ ಸಾಕಾರಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts