More

    ಪ್ಲಾಸ್ಟಿಕ್ ಬಳಕೆ ತಗ್ಗಿಸಿ ಜೀವರಾಶಿ ಉಳಿಸಿ- ಡಾ.ಬಿ.ಎಸ್.ಪ್ರಸಾದ್

    ದಾವಣಗೆರೆ: ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಎಂಬುದು ಈ ವರ್ಷದ ಪರಿಸರ ದಿನಾಚರಣೆಯ ಘೋಷವಾಕ್ಯವಾಗಿದೆ. ಹೀಗಾಗಿ ನಾವಿಂದು ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸಿ ಜೀವರಾಶಿಯನ್ನು ಉಳಿಸಬೇಕಿದೆ ಎಂದು ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್ ಹೇಳಿದರು.

    ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಮನೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಪಾಲನೆ ಮಾಡಬೇಕು. ಪರಿಸರ ಉಳಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
    ಪ್ಲಾಸ್ಟಿಕ್ ಅಳಿಸಿ ಪರಿಸರ ಉಳಿಸಿ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ರಚಿಸಿದ ವರ್ಣ ಚಿತ್ರಗಳನ್ನು ಪರಿಸರದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರದರ್ಶನಕ್ಕೆ ಏರ್ಪಡಿಸಲಾಗಿತ್ತು. ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
    ಸಮನ್ವಯ 2023- ಕಾಲೇಜಿನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವೈದ್ಯಕೀಯ ಸಿಬ್ಬಂದಿಗೆ ಸಸಿಗಳನ್ನು ಬಹುಮಾನವಾಗಿ ನೀಡಿದ್ದು ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಉಪ ಪ್ರಾಚಾರ್ಯ ಡಾ.ಶಶಿಕಲಾ ಪಿ ಕೃಷ್ಣ್ಣಮೂರ್ತಿ, ವಿದ್ಯಾರ್ಥಿ ಸಂಘದ ಚೇರ‌್ಮನ್ ಡಾ.ವಿ.ಎಸ್. ಹರೀಶ್ ಕುಮಾರ್ ಹಾಗೂ ವಿವಿಧ ಸಮಿತಿಗಳ ಚೇರ‌್ಮನ್, ಸಹ ಚೇರ‌್ಮನ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವೈದ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
    ಕೀರ್ತನಾ ಮತ್ತು ಋತು ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಮಿತಿ ಅಧ್ಯಕ್ಷ ಡಾ.ಯೋಗೇಶ್‌ಬಾಬು ಸ್ವಾಗತಿಸಿದರು. ಭಾವನಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts