More

    ಪ್ರೊ.ಬಿ.ಕೃಷ್ಣಪ್ಪ ತತ್ವಾದರ್ಶ ಪಾಲಿಸಿ

    ಚಿತ್ರದುರ್ಗ: ದಲಿತ, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರ ಪರ ಜೀವಿತಾವಧಿಯಲ್ಲಿ ಗಟ್ಟಿಯಾಗಿ ಹೋರಾಡಿದ ಪ್ರೊ.ಬಿ.ಕೃಷ್ಣಪ್ಪ ಪರಿಶುದ್ಧ ನಾಯಕ. ಅವರ ಆಚಾರ-ವಿಚಾರ, ತತ್ವಾದರ್ಶ ಅಳವಡಿಸಿಕೊಂಡು ಡಿಎಸ್‌ಎಸ್ ಕಾರ್ಯಕರ್ತರು ಮುನ್ನಡೆದಾಗ ನೊಂದವರಿಗೆ ನ್ಯಾಯ ಕೊಡಿಸಲು ಸಾಧ್ಯ ಎಂದು ಸಮಿತಿಯ ರಾಜ್ಯ ಸಂಚಾಲಕ ಶಿವಮೊಗ್ಗದ ಎಂ.ಗುರುಮೂರ್ತಿ ಸಲಹೆ ನೀಡಿದರು.

    ತರಾಸು ರಂಗಮಂದಿರದಲ್ಲಿ ಡಿಎಸ್‌ಎಸ್‌ನಿಂದ ಶನಿವಾರ ನಡೆದ ದಲಿತ ಚಳವಳಿಗೆ 50 ವರ್ಷಗಳ ಸುವರ್ಣ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

    ಬಂಡವಾಳಶಾಹಿ, ಭೂ ಮಾಲೀಕರಲ್ಲಿ ಕೃಷ್ಣಪ್ಪ ನಡುಕ ಹುಟ್ಟಿಸಿದರು. ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಿದರು. ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಸ್ತ್ರೀಯರ ಬೆತ್ತಲೆ ಸೇವೆ ತಡೆದರು. ಪಿಟಿಸಿಎಲ್ ಕಾಯ್ದೆ ಜಾರಿಗೆ ಕಾರಣರಾದರು. ಇಂತಹ ನಾಯಕನ ಹೆಜ್ಜೆ ಗುರುತಿನಲ್ಲಿ ದಲಿತರು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

    ಬಗರ್‌ಹುಕುಂ ಪದ ಪರಿಚಯಿಸಿದ್ದೆ ಕೃಷ್ಣಪ್ಪ ಎಂಬುದನ್ನು ದಲಿತರು ಮರೆಯಬಾರದು. ದಲಿತ ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯ ಸ್ಥಾಪಿಸುವಂತೆ ಸರ್ಕಾರದ ಗಮನ ಸೆಳೆದರು. ಅಧಿಕಾರದ ಆಸೆಗೆ ಎಂದಿಗೂ ಚಳವಳಿ ಬಲಿಕೊಡಲಿಲ್ಲ. ಆದರೆ, ಪ್ರಗತಿಪರ, ಬುದ್ದಿ ಜೀವಿಗಳು ಎನಿಸಿಕೊಂಡ ಕೆಲ ರಾಜಕಾರಣಿಗಳೆ ಶಿಸ್ತುಬದ್ದ ಸಂಘಟನಾತ್ಮಕ ಹೋರಾಟದಲ್ಲಿ ಒಡಕು ಉಂಟು ಮಾಡಿದರು. ಇಂತಹ ಕೆಲಸ ಯಾರೂ ಮಾಡಬೇಡಿ ಎಂದರು.

    ಸಂವಿಧಾನ ಬದಲಿಸುವ ಮಾತುಗಳು ಕೆಲವರಿಂದ ಕೇಳಿಬರುತ್ತಿದ್ದು, ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬಾರದು. ದೇಶದ ಪ್ರತಿಯೊಬ್ಬರ ರಕ್ಷಣೆಗಾಗಿ ಇರುವಂತದ್ದನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

    ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಮಾತನಾಡಿ, ಜೂ. 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕೃಷ್ಣಪ್ಪ ಅವರ ಜನ್ಮದಿನದಂದು ಅನೇಕ ಹಕ್ಕೊತ್ತಾಯ ಸರ್ಕಾರಕ್ಕೆ ಮಂಡಿಸಲಿದ್ದೇವೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ದಲಿತ ಹೋರಾಟಗಾರರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಆಲಿ, ನಿವೃತ್ತ ಪ್ರಾಚಾರ್ಯ ಭದ್ರಾವತಿಯ ಶಿವಬಸಪ್ಪ, ಸಮಿತಿ ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಖಂಡರಾದ ವೈ.ರಾಜಣ್ಣ, ಕೆ.ಮಲ್ಲೇಶ್, ಹುಲ್ಲೂರು ಕುಮಾರ್, ಶ್ರೀನಿವಾಸ್‌ಮೂರ್ತಿ, ವಿಜಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts