More

    ಪ್ರೀತಂ ಗೌಡ ಆಪ್ತರ ಮನೆ ಮೇಲೆ ಎಸ್‌ಐಟಿ ದಾಳಿ

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಮಂಗಳವಾರ ಸಂಜೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಮೂವರು ಆಪ್ತರು ಹಾಗೂ ವಕೀಲ ದೇವರಾಜೇಗೌಡ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
    ಪ್ರತ್ಯೇಕ ತಂಡಗಳಲ್ಲಿ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಬಂದ ಎಸ್‌ಐಟಿ ಅಧಿಕಾರಿಗಳು ನಗರದ ಬಿಎಂ ರಸ್ತೆಯಲ್ಲಿರುವ ಶರತ್ ಒಡೆತನದ ಕ್ವಾಲಿಟಿ ಬಾರ್, ಮನೆ ಹಾಗೂ ಕಿರಣ್ ಒಡೆತನದ ಕೃಷ್ಣ ಹೋಟೆಲ್, ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಅದಾದ ಬಳಿಕ ವಿವೇಕ ನಗರದಲ್ಲಿರುವ ಪುನೀತ್ ನಿವಾಸ ಮತ್ತು ರವೀಂದ್ರನಗರದಲ್ಲಿರುವ ವಕೀಲ ದೇವರಾಜೇಗೌಡ ಮನೆ ಹಾಗೂ ಹೊಳೆನರಸೀಪುರ ಪಟ್ಟಣದ ಕಾರಂಜಿ ಕಟ್ಟೆಯಲ್ಲಿರುವ ಕಚೇರಿ ಸೇರಿ ಒಟ್ಟು ಏಳು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
    ಅಶ್ಲೀಲ ವಿಡಿಯೋ ಹಂಚಿಕೆ ಸಂಬಂಧ ಮೇ 11ರಂದು ಪ್ರೀತಂ ಗೌಡ ಅವರ ಕಚೇರಿಯಲ್ಲಿ ಕೆಲಸ ಮಾಡುವ ಚೇತನ್ ಹಾಗೂ ಲಿಖಿತ್ ಗೌಡ ಅವರನ್ನು ಎಸ್‌ಐಟಿ ಬಂಧಿಸಿತು. ಅದಾದ ಬಳಿಕ ಇವರಿಬ್ಬರನ್ನು ನ್ಯಾಯಾಲಯ ಮೇ 24ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ವಿಷಯವಾಗಿ ಸೋಮವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರೀತಂ ಗೌಡ ಅವರು, ಇಂದು ಹಾಸನದಲ್ಲಿ 15 ವರ್ಷದ ಹುಡುಗನಿಂದ ಹಿಡಿದು 80 ವರ್ಷದ ವೃದ್ಧರವರೆಗೂ ಎಲ್ಲರ ಮೊಬೈಲ್‌ನಲ್ಲೂ ಈ ವಿಡಿಯೋ ಇದೆ. ಹಾಗೆಂದ ಮಾತ್ರಕ್ಕೆ ಎಲ್ಲರನ್ನೂ ಬಂಧಿಸಲು ಸಾಧ್ಯವೇ? ನಾನು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿಯೇ ನಮ್ಮ ಕಾರ್ಯಕರ್ತರಿಗೆ ಒಂದು ವೇಳೆ ನಿಮ್ಮ ಬಳಿ ಅಂತಹ ವಿಡಿಯೋ ಏನಾದರೂ ಇದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ ಎಂದು ಹೇಳಿದ್ದಾಗಿ ಹೇಳಿಕೆ ನೀಡಿದ್ದರು.
    ಇದೀಗ ಪ್ರೀತಂ ಗೌಡ ಹೇಳಿಕೆ ನೀಡಿದ ಮರುದಿನವೇ ಮತ್ತೆ ಅವರ ಅತ್ಯಾಪ್ತರಾದ ಮೂವರು ಮೇಲೆ ಎಸ್‌ಐಟಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಇನ್ನು ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಕ್ವಾಲಿಟಿ ಬಾರ್ ಶರತ್ ಮೇಲೆ ಪ್ರಕರಣ ದಾಖಲಿದ್ದು, ಶರತ್ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಎಸ್‌ಐಟಿ ಬಲೆ ಬೀಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts