More

    ಪ್ರಾಣಿ ಬಲಿ ತಡೆಯದಿದ್ದರೆ ನ್ಯಾಯಾಂಗ ನಿಂದನೆಯ ಎಚ್ಚರಿಕೆ

    ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಶ್ರೀ ಹೊಳೆಯಮ್ಮ ದೇವಿ ಜಾತ್ರೆಯ ನಿಮಿತ್ತ ಅ. 27 ಮತ್ತು 28ರಂದು ದೊಡ್ಡ ಪ್ರಮಾಣದಲ್ಲಿ ಪ್ರಾಣಿ ಬಲಿ ನಡೆಯುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ವಿಶ್ವಿ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದಾರು ವರ್ಷಗಳ ಪ್ರಯತ್ನದಿಂದ ದೇವಸ್ಥಾನದ ಮುಂಭಾಗದಲ್ಲಿ ಪ್ರಾಣಿ ಬಲಿ ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ದೇವಸ್ಥಾನ ಹಿಂಭಾಗ, ಸುತ್ತಮುತ್ತ ಹಾಗೂ ಅಕ್ಕ ಪಕ್ಕದ ಹೊಲಗಳಲ್ಲಿ ಪ್ರಾಣಿ ಬಲಿ ನಿರಾತಂಕವಾಗಿ ನಡೆದಿದೆ. ಈ ಬಾರಿಯೂ ನಡೆಯಲಿದೆ ಎಂಬ ಮಾಹಿತಿ ಇದೆ ಎಂದರು.

    ಇಲ್ಲಿಯ ಜಾತ್ರೆಗೆ ಕರ್ನಾಟಕ ಮತ್ತು ಹೊರ ರಾಜ್ಯಗಳ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸಿಕೊಳ್ಳಲು ಪ್ರಾಣಿ ಬಲಿ ಕೊಡುತ್ತಾರೆ. ಪ್ರಾಣಿಗಳನ್ನು ಹಿಡಿದುಕೊಂಡು ಬರುವ ಭಕ್ತರನ್ನು ತಡೆಯಲು ಗ್ರಾಮದಲ್ಲಿ ವಿವಿಧೆಡೆ ಚೆಕ್ ಪೋಸ್ಟ್​ಗಳನ್ನು ನಿರ್ವಿುಸಬೇಕು. ಈ ಕುರಿತು ಐಜಿಪಿ ಹಾಗೂ ಧಾರವಾಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

    ಹರಕೆ ರೂಪದಲ್ಲಿ ಕುರಿ, ಕೋಳಿ, ಆಡು, ಕೋಣ, ಮುಂತಾದ ಪ್ರಾಣಿ ಬಲಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ನಿಷೇಧಿಸಿದೆ. ಆದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಂದು ವೇಳೆ ಶ್ರೀ ಹೊಳೆಯಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.

    ಸಾಕಷ್ಟು ಪ್ರಮಾಣದಲ್ಲಿ ಹಿಂದು ದೇವಾಲಯಗಳಲ್ಲಿ ಪ್ರಾಣಿ ಬಲಿ ನಡೆಯುತ್ತಿರುವುದು ದುರಂತ. ಇದನ್ನು ತಡೆಗಟ್ಟಲು ಆರ್​ಎಸ್​ಎಸ್ ಹಾಗೂ ವಿಎಚ್​ಪಿ ಸಂಘಟನೆಗಳು ಗಮನ ಹರಿಸಬೇಕು. ದೇವಾಲಯಗಳು ದಿವ್ಯಾಲಯ ಹಾಗೂ ಜ್ಞಾನಾಲಯಗಳಾಗಬೇಕು. ವಧಾಲಯಗಳು ಆಗಬಾರದು ಎಂದರು.

    ಸುದ್ದಿಗೋಷ್ಠಿಯಲ್ಲಿ ಭರತ ಭಂಡಾರಿ, ಭರತ ಸಂಘಿ. ಅಶೋಕಕುಮಾರ ಷಾಹ, ಸುನಂದಾ ದೇವಿ. ಪ್ರವೀಣಕುಮಾರ ದೇವಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts