More

    ಪ್ರಾಣವಾಯು ಕೊರತೆ ನೀಗಿಸಿದ ಪದ್ಮಾವತಿ!

    ಗೋಕರ್ಣ: ಯಾವುದೇ ಉದ್ಯಮ ಅದು ಎಷ್ಟು ವಿಸ್ತಾರದಲ್ಲಿದೆ, ಎಷ್ಟು ವಿಶಾಲವಾಗಿದೆ ಎನ್ನುವುದಕ್ಕಿಂತ ಅದು ಎಷ್ಟು ಜನೋಪಯೋಗಿ ಎನ್ನುವುದರ ಮೇಲೆ ಅದರ ಸಾರ್ವಜನಿಕ ಮಹತ್ವ ನಿರ್ಧರಿತವಾಗುತ್ತದೆ.
    ಇದಕ್ಕೆ ವರ್ತಮಾನದ ಜನಜನಿತ ಸಾಕ್ಷಿ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಬೆಟ್ಕುಳಿಯಲ್ಲಿರುವ ಆಮ್ಲಜನಕ ಮರುಪೂರಣ ಘಟಕ ಪದ್ಮಾವತಿ ಇಂಡಸ್ಟ್ರಿಯಲ್ ಗ್ಯಾಸಸ್ ಎಂಬ ಪುಟ್ಟ ಉದ್ಯಮ.
    ಕರೊನಾ ಮಹಾಮಾರಿಯನ್ನು ಮಣಿಸುವಲ್ಲಿ ಇಂದು ಆಮ್ಲಜನಕ ಅಗ್ರ ಸೇನಾನಿಯಂತೆ ಹೋರಾಡುತ್ತಿದೆ. ಅಗತ್ಯ ವೇಳೆಯಲ್ಲಿ ಪ್ರಾಣವಾಯು ಸಿಗದೆ ನೂರಾರು ಕೋವಿಡ್ ಪೀಡಿತರು ಅಸುನೀಗುತ್ತಿರುವ ಪರಿಸ್ಥಿತಿ ನಾಡಿನಲ್ಲಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅಂದಾಜು 4 ಸಾವಿರ ಚ.ಅ. ವಿಸ್ತೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಟ್ಕುಳಿಯ ಈ ಇಂಡಸ್ಟ್ರೀಸ್ ಕರೊನಾ ಹೋರಾಟದಲ್ಲಿರುವ ಉತ್ತರ ಕನ್ನಡದ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆ ಮೂಲಕ ಜೀವದಾಯಿನಿಯಾಗಿ ದಾಖಲಾಗಿದೆ.
    ಮೂರು ಪಟ್ಟು ಏರಿಕೆ: ಒಬ್ಬ ವ್ಯಕ್ತಿಗೆ 24 ಗಂಟೆಗೆ 7 ಕ್ಯುಬಿಕ್ ಮೀಟರ್ ಸಾಮರ್ಥ್ಯದ ಒಂದು ಸಿಲಿಂಡರ್ ಬೇಕಾಗುತ್ತದೆ. ಕರೊನಾ ಪೀಡಿತರಿಗೆ ಆಕ್ಸಿಜನ್ ಅಗತ್ಯ ಏರಿಕೆಯಾಗುತ್ತಿದ್ದಂತೆ ಇಲ್ಲಿನ ಆಕ್ಸಿಜನ್ ಮರುಪೂರಣ ಮೂರು ಪಟ್ಟು ಏರಿದೆ. ಮೂರು ವರ್ಷ ಹಿಂದೆ ಈ ಸಂಸ್ಥೆ ಪ್ರಾರಂಭವಾದಾಗಿನಿಂದ ಇತ್ತೀಚಿನ ವರೆಗೂ ಇಲ್ಲಿ ನಿತ್ಯ 7 ಕ್ಯುಬಿಕ್ ಮೀಟರ್ ಸಾಮರ್ಥ್ಯದ 150ರಿಂದ 200 ಸಿಲಿಂಡರ್ ಸಿದ್ಧ ಪಡಿಸಲಾಗುತ್ತಿತ್ತು.
    ಈಗ ಇದರ ಬೇಡಿಕೆ ವೃದ್ಧಿಸಿ ನಿತ್ಯ 500ರಿಂದ 600 ಸಿಲಿಂಡರ್​ಗೆ ಮುಟ್ಟಿದೆ. ಜಿಲ್ಲೆಯ 23ರಿಂದ 30 ಆಸ್ಪತ್ರೆಗಳಿಗೆ 400ರಿಂದ 450 ಸಿಲಿಂಡರ್ ನಿತ್ಯ ಸರಬರಾಜಾಗುತ್ತಿದೆ. ಈ ಪೈಕಿ ಕಾರವಾರ ನಗರವೊಂದಕ್ಕೆ 350 ಸಿಲಿಂಡರ್ ರವಾನೆಯಾಗುತ್ತಿದೆ.
    ಸಮಯ ಮತ್ತು ಸಿಬ್ಬಂದಿ: ಈಗ ದಿನದ ಕೆಲಸದ ಸಮಯವನ್ನೂ ಹೆಚ್ಚಿಸಲಾಗಿದೆ. ಈ ತನಕ 5 ಕಾರ್ವಿುಕರು ಕೆಲಸ ನಿರ್ವಹಿಸುತ್ತಿದ್ದರು. ಈಗ 8 ಜನ ಹೆಚ್ಚುವರಿ ಕಾರ್ವಿುಕರು ಸೇರಿ 13 ಕಾರ್ವಿುಕರಿದ್ದಾರೆ. ಇದರ ಜತೆಗೆ ಮೂವರು ಮರುಪೂರಣಗಾರರು, ಐವರು ಚಾಲಕರು ಮತ್ತು ಐವರು ಕಚೇರಿ ನಿರ್ವಾಹಕರು ಇಲ್ಲಿ ಕೆಲಸ ನಿರ್ವಹಿಸುತ್ತಿರುವರು.
    ಕಡಿಮೆಯಾಯ್ತು ಬೆಲೆ: 2018ರಲ್ಲಿ ಜಿಲ್ಲೆಯ ಮೊದಲ ಆಕ್ಸಿಜನ್ ಘಟಕ ಪ್ರಾರಂಭವಾಗುವ ಮೊದಲು ಜಿಲ್ಲೆಯ ಆಸ್ಪತ್ರೆಗಳಿಗೆ ಹುಬ್ಬಳ್ಳಿ, ಮಂಗಳೂರು ಮತ್ತು ಗೋವಾಗಳಿಂದ ಇದು ಪೂರೈಸಲ್ಪಡುತ್ತಿತ್ತು. ಹೆಚ್ಚು ಕಡಿಮೆ ಈಗ ಇಲ್ಲಿ ಲಭ್ಯವಿರುವ ಬೆಲೆಯ ಎರಡು ಪಟ್ಟು ಹೆಚ್ಚು ಬೆಲೆ ತೆರಬೇಕಾಗಿತ್ತು. ಆದಾಗ್ಯೂ ಪೂರೈಕೆ ಸರಿಯಾಗಿರಲಿಲ್ಲ. ಬೆಟ್ಕುಳಿಯಲ್ಲಿ ಪ್ರಾರಂಭವಾದ ನಂತರ ಈ ತೊಂದರೆಗಳು ನೀಗಿ ಇವುಗಳ ಲಾಭ ಜಿಲ್ಲೆಯ ಆಸ್ಪತ್ರೆಗಳಿಗೆ ಸಿಕ್ಕಿದೆ.
    ಹುಬ್ಬಳ್ಳಿ ಮೂಲ: 60 ವರ್ಷದಿಂದ ಈ ಉದ್ಯಮ ಕಟ್ಟಿ ಬೆಳೆಸಿದ್ದ ತಮ್ಮ ತಂದೆಯವರ ಆಸೆ ಪೂರ್ತಿಗಾಗಿ ಹುಬ್ಬಳ್ಳಿಯ ಉದ್ಯಮಿ ಅನಿಶ್ ವಾಲ್ಜಿ ಬೆಟ್ಕುಳಿಯಲ್ಲಿ 2018ರಲ್ಲಿ ಇದನ್ನು ಸ್ಥಾಪಿಸಿ ಆಸ್ಪತ್ರೆಗಳಿಗೆ ನೇರವಾಗಿ ಹಲವರಿಗೆ ಉದ್ಯೋಗ ಕೊಟ್ಟರು. ಉತ್ತರ ಕನ್ನಡದಲ್ಲಿ ಗರಿಷ್ಠ ಗ್ರಾಹಕರನ್ನು ಪಡೆದಿದ್ದ ಅವರು ಜಿಲ್ಲೆಯಲ್ಲಿ ಇದನ್ನು ಪ್ರಾರಂಭಿಸಿ ಆಸ್ಪತೆಗಳಿಗೆ ಈ ಹಿಂದೆ ತಗಲುತ್ತಿದ್ದ ಸಾಗಾಟ ವೆಚ್ಚವನ್ನು ಕಡಿಮೆ ಮಾಡಿದರು. ಜತೆಗೆ ಸಮಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ತಕ್ಷಣ ಆಮ್ಲಜನಕ ಕೈಗೆಟಕುವಂತಾಯ್ತು. ಈಗ ಇವರ ಜತೆಗೆ ಇವರ ಮಗ ಯಶ್ ವಾಲ್ಜಿ ಈ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.


    ಅನ್ಯ ಜಿಲ್ಲೆಯವನಾದ ನನಗೆ ಬೆಟ್ಕುಳಿ ಗ್ರಾಮಸ್ಥರಿಂದ ಮತ್ತು ಜಿಲ್ಲೆಯ ಆಸ್ಪತ್ರೆ ಮತ್ತು ವಾಣಿಜ್ಯ ಗ್ರಾಹಕರಿಂದ ಉತ್ತಮ ಸಹಕಾರ ದೊರೆತಿರುವುದರಿಂದಲೇ ನನ್ನ ಉದ್ಯಮ ಯಶಸ್ವಿಯಾಗಲು ಕಾರಣವಾಗಿದೆ. ಇದರ ಜತೆಗೆ ದೇಶ ಎದುರಿಸುತ್ತಿರುವ ಈ ಕರೊನಾ ಕಂಟಕದ ವೇಳೆ ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲ ಅಧಿಕಾರಿಗಳಿಂದ ಮತ್ತು ಜನಪ್ರತಿನಿಧಿಗಳಿಂದ ಉದ್ಯಮಕ್ಕೆ ಉತ್ತೇಜನ ದೊರೆಯುತ್ತಿರುವುದು ಸಂತಸದ ವಿಷಯವಾಗಿದೆ.
    | ಅನಿಶ್ ವಾಲ್ಜಿ ಹುಬ್ಬಳ್ಳಿ
    ಸಂಸ್ಥಾಪಕರು ಪದ್ಮಾವತಿ ಇಂಡಸ್ಟ್ರಿಯಲ್ ಗ್ಯಾಸಸ್.

    ಬೆಟ್ಕುಳಿಯಲ್ಲಿ ಆಮ್ಲಜನಕ ಉದ್ಯಮ ಸ್ಥಾಪನೆಯಿಂದ ಕರೊನಾ ಸಂದಿಗ್ಧದ ಈ ದಿನಗಳಲ್ಲಿ ಜಿಲ್ಲೆಗೆ ದೊಡ್ಡ ಉಪಕಾರವಾಗಿದೆ. ಕೆಲವು ಜಿಲ್ಲೆಗಳಲ್ಲಿ ಪ್ರಾಣವಾಯು ಯುಕ್ತ ಸಮಯಕ್ಕೆ ದೊರೆಯದೇ ಜನ ಮೃತಪಟ್ಟಿದ್ದಾರೆ. ಅಂತಹ ಕಷ್ಟವನ್ನು ಉತ್ತರ ಕನ್ನಡ ಎದುರಿಸದಂತೆ ಮಾಡುವಲ್ಲಿ ಬೆಟ್ಕುಳಿಯ ಈ ಪುಟ್ಟ ಘಟಕ ಬಹು ಯಶಸ್ವಿಯಾಗಿದೆ.
    | ದಿನಕರ ಶೆಟ್ಟಿ
    ಶಾಸಕ ಕುಮಟಾ-ಹೊನ್ನಾವರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts