More

    ಪ್ರವಾಹಕ್ಕೆ ನಲುಗಿದ ಸಿದ್ದಿ ಕುಟುಂಬ

    ಕಾರವಾರ: ಅವರು ಕಾಡಿನಲ್ಲೇ ಹುಟ್ಟಿ ಬೆಳೆದವರು. ನದಿ, ಬೆಟ್ಟವನ್ನು ಹತ್ತಿರದಿಂದ ಬಲ್ಲವರು. ಆದರೆ, ಕಳೆದ ವಾರ ಸಂಭವಿಸಿದ ಪ್ರವಾಹಕ್ಕೆ ಅಕ್ಷರಶಃ ನಲುಗಿದ್ದಾರೆ. ಓಡಿ ಬಂದು ಪರಿಚಯದವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಕೆಳಾಸೆ- ಗೌಳಿಪಾಲ ಗ್ರಾಮದ ಸಿದ್ದಿ ಸಮುದಾಯದ ಪರಿಸ್ಥಿತಿ ಇದು.

    ಈ ಭಾಗದಲ್ಲಿ 40 ಮನೆಗಳಿವೆ. ಇತ್ತೀಚೆಗೆ ಮಹಾ ಮಳೆಗೆ ಕೆಳಾಸೆ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಜು. 23 ರಂದು ಭಾರಿ ಸದ್ದಿನೊಂದಿಗೆ ಕಾಡಿನ ನಡುವೆ ಸುಮಾರು ಅರ್ಧ ಕಿಮೀ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಪಕ್ಕದಲ್ಲೇ ಹರಿದ ಬೇಡ್ತಿ ನದಿಯಿಂದ ಗೌಳಿಪಾಲ ಎಂಬ ಗ್ರಾಮದ ಮೂರು ಸಿದ್ದಿಗಳ ಮನೆಗೆ ನೀರು ನುಗ್ಗಿತ್ತು. ಹಗ್ಗ ಹಿಡಿದು ಜನ ಹೇಗೋ ಸುರಕ್ಷಿತ ಪ್ರದೇಶಕ್ಕೆ ಬಂದು ರಕ್ಷಣೆ ಪಡೆದಿದ್ದಾರೆ. ಇನ್ನಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿಯುವ ಆತಂಕದಲ್ಲಿ ಮೂರು ಮನೆಗಳ 20 ರಷ್ಟು ಜನ ಪಕ್ಕದ ಖಾಸಗಿ ವ್ಯಕ್ತಿಗಳ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಗುಡ್ಡ ಕುಸಿತವಾದ ಪ್ರದೇಶದಲ್ಲೇ ಇನ್ನೂ 4 ಮನೆಗಳಿದ್ದು, ಅವರು ಜೀವ ಕೈಯ್ಯಲ್ಲಿ ಹಿಡಿದು ದಿನ ದೂಡುತ್ತಿದ್ದಾರೆ. ಮೂರು ಸಿದ್ದಿ ಕುಟುಂಬಗಳ ಗುಡಿಸಲಿನಂಥ ಮನೆಗಳು ಶಿಥಿಲವಾಗಿವೆ. ಉಡಲು ಬಟ್ಟೆ ಇಲ್ಲ. ಊಟಕ್ಕೆ ಅನ್ನವಿಲ್ಲ. ಸಮೀಪದಲ್ಲಿ ಪರಿಹಾರ ಕೇಂದ್ರವನ್ನೂ ತೆರೆದಿಲ್ಲ. ಇದರಿಂದ ತಮಗೆ ನೆರವು ನೀಡಬೇಕು ಎಂಬುದು ಗೌಳಿಪಾಲ ಗ್ರಾಮಸ್ಥರ ಮನವಿ.

    ಗರ್ಭಿಣಿಯ ಸಂಕಟ: ‘ಮದುವೆಯಾಗಿ 15 ವರ್ಷದ ನಂತರ ಗರ್ಭಿಣಿಯಾಗಿದ್ದೆ. ವೈದ್ಯರು ಹೆಚ್ಚಿನ ಕಾಳಜಿ ತೆಗೆದುಕೊಳ್ಳಲು ಹೇಳಿದ್ದರು. ನೋಡಿದರೆ ಮನೆಗೆ ನೀರು ನುಗ್ಗಿತು. ಹಗ್ಗ ಹಿಡಿದು ಕುತ್ತಿಗೆವರೆಗಿನ ನೀರಿನಲ್ಲಿ ಹೇಗೋ ಜೀವ ಉಳಿಸಿಕೊಂಡೆವು. ಈಗ ಮನೆಯ ಮಾಲೀಕರು ಯಾವಾಗ ಹೊರ ಹಾಕುತ್ತಾರೋ ಗೊತ್ತಿಲ್ಲ ಎಲ್ಲಿ ಹೋಗಬೇಕು ಎಂದು ತಿಳಿಯುತ್ತಿಲ್ಲ ’ ಎಂದು ಸಂತ್ರಸ್ತೆ ವಿಜಯಾ ಸಿದ್ದಿ ಕಣ್ಣೀರು ಹಾಕುತ್ತಾರೆ.

    ಅಂದು ಮಧ್ಯಾಹ್ನ. 4.30 ಕ್ಕೆ ಭಾರಿ ಸದ್ದಾಯಿತು. ನೋಡಿದರೆ ಹಿಂದಿನ ಗುಡ್ಡ ಕುಸಿದಿತ್ತು. 6 ಗಂಟೆಯ ಹೊತ್ತಿಗೆ ಮನೆಗೆ ನೀರು ನುಗ್ಗಿತು. ಇನ್ನು ಅಲ್ಲಿರಲು ಭಯವಾಗುತ್ತದೆ. ನಮಗೆ ದಯಮಾಡಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕು.

    |ಗೋಪಾಲ ಸಿದ್ದಿ ಗೌಳಿಪಾಲ ಗ್ರಾಮದ ಸಂತ್ರಸ್ತ

    ಗೌಳಿಪಾಲ ಗ್ರಾಮದಲ್ಲಿ ಸಿದ್ದಿ ಕುಟುಂಬ ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಬಂದಿತ್ತು. ನಮ್ಮ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಅವರನ್ನು ಕಳಿಸಿ ಪರಿಶೀಲಿಸಲಾಗಿದೆ. ಅವರ ಮನೆಗಳಿಗೆ ನೀರು ನುಗ್ಗಿದೆ. ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಮ್ಮೆ ಪರಿಶೀಲಿಸಿ ಅವರಿಗೆ ನೆರವು ನೀಡಲು ಕ್ರಮ ವಹಿಸಲಾಗುವುದು.

    | ಶ್ರೀ ಕೃಷ್ಣ ಕಾಮಕರ್ ಯಲ್ಲಾಪುರ ತಹಸೀಲ್ದಾರ್

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts