More

    ಪ್ರವಾಸಿ ತಾಣವಾಗಿ ಯರಗೋಳ್ ಅಭಿವೃದ್ಧಿ

    ಕೋಲಾರ/ಬೂದಿಕೋಟೆ: ಬಂಗಾರಪೇಟೆಯ ಯರಗೋಳ್‌ನಲ್ಲಿ ನಿರ್ಮಿಸುತ್ತಿರುವ ಡ್ಯಾಂ ಕಾಮಗಾರಿಯನ್ನು ಜನವರಿ-2021ರೊಳಗೆ ಪೂರ್ಣಗೊಳಿಸಿದ ನಂತರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.

    ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂಗೆ ಬುಧವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಕಷ್ಟು ಪ್ರಮಾಣದಲ್ಲಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದನ್ನು ಇಂಜಿನಿಯರ್ ಪಾಪೇಗೌಡ ಮತ್ತು ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ನನ್ನ ಗಮನಕ್ಕೆ ತಂದಿದ್ದರು. ನಾನು ಮಂತ್ರಿಯಾಗಿದ್ದಾಗ ಶುರುಮಾಡಿದ ಕಾಮಗಾರಿ ನನ್ನ ಅವಧಿಯಲ್ಲೇ ಪೂರ್ಣಗೊಳ್ಳುತ್ತಿದೆ. ಕನ್ನಂಬಾಡಿ ಕಟ್ಟೆಯ ರೀತಿ ಡ್ಯಾಂ ನಿರ್ಮಾಣವಾಗಿರುವುದು ಸಂತಸ ತಂದಿದೆ. ಮುಂದೆ ತಾಣವನ್ನಾಗಿಸಲು ಚಿಂತನೆ ಮಾಡಲಾಗಿದೆ ಎಂದರು.

    79 ಕೋಟಿ ರೂ. ವೆಚ್ಚದ ಯೋಜನೆ ಕಾಮಗಾರಿ ಪರಿಷ್ಕೃತಗೊಂಡು 128 ಕೋಟಿ ರೂಗಳಾಗಿತ್ತು. ಕೋಲಾರ ನಗರಕ್ಕೆ 30.42 ಎಂಎಲ್‌ಡಿ ಜಲಶುದ್ಧೀಕರಣ ಘಟಕ ಕಾಮಗಾರಿ ಶೇ.85 ಪೂರ್ಣಗೊಂಡು ಉಳಿಕೆ ಪ್ರಗತಿಯಲ್ಲಿವೆ. ಕೋಲಾರ ನಗರದಲ್ಲಿ ಹೆಚ್ಚುವರಿ ಜಾಗ ದೊರೆಯಲು ತಡವಾಗಿರುವ ಕಾರಣ ಕಾಮಗಾರಿ ತಡವಾಗಿದೆ. ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಲ್ಲಿ 13 ಎಂಎಲ್‌ಡಿ ಸಾಮರ್ಥ್ಯದ ಜಲಸಂಗ್ರಹ ಶುದ್ಧೀಕರಣ ಘಟಕಗಳ ಕಾಮಗಾರಿ ಶೇ.40 ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಯರಗೋಳ್ ಯೋಜನೆಯ ಒಟ್ಟಾರೆ ಕಾಮಗಾರಿಗಳಲ್ಲಿ ಶೇ.85 ಪೂರ್ಣಗೊಂಡಿದ್ದು, ಈಗಾಗಲೆ ಯೋಜನೆಯ ಕಾಮಗಾರಿ ವಿಳಂಬವಾಗಿರುವುದರಿಂದ ಒಂದು ಬಾರಿ 1.53 ಕೋಟಿ ರೂ. ಹಾಗೂ ಎರಡನೇ ಬಾರಿ 2.15 ಕೋಟಿ ರೂ. ದಂಡವನ್ನು ಗುತ್ತಿಗೆದಾರನಿಗೆ ವಿಧಿಸಲಾಗಿದೆ ಎಂದು ವಿವರಿಸಿದರು.

    375 ಎಕರೆ ನೀರು ಮುಳುಗಡೆಯಾಗಲಿದ್ದು, ಡ್ಯಾಂ ಹಿಂಭಾಗ 5 ಕಿಮೀ ನೀರು ನಿಲ್ಲುತ್ತದೆ. ಅರ್ಥ ಟಿಎಂಸಿ ಸಾಮರ್ಥ್ಯವನ್ನು ಡ್ಯಾಂ ಹೊಂದಿದೆ. ಡ್ಯಾಂ ನಿರ್ಮಾಣ ಕಾಮಗಾರಿ ಶೇ.95 ಪೂರ್ಣಗೊಂಡಿದೆ. 3.5 ಕಿಮೀ ಉದ್ದದ ಸಂಪರ್ಕ ರಸ್ತೆ ಶೇ.85 ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ. 811 ಎಂಎಂ ವ್ಯಾಸದ ಏರು ಕೊಳವೆ ಮಾರ್ಗ 9.15 ಕಿಮೀ ನಿರ್ಮಾಣ ಕಾಮಗಾರಿ ಶೇ.95 ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಜಾಕ್‌ವೆಲ್ ನಿರ್ಮಾಣ ಕಾಮಗಾರಿಯೂ ಶೇ.85 ಪೂರ್ಣಗೊಂಡಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಅತಿಥಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಯೋಜನೆಯ ಕಾಮಗಾರಿ ಪರಿಷ್ಕೃತ ಅಂದಾಜು ಮೊತ್ತ 160 ಕೋಟಿ ರೂ. ಆಗಿದ್ದು, ಇದೀಗ 145.15 ಕೋಟಿ ರೂ. ವೆಚ್ಚವಾಗಿದೆ. ಈಗಾಗಲೆ 2021ರ ಜ. 27ಕ್ಕೆ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಿದೆ. ಕಾಮಗಾರಿ ಮುಗಿಯುವಾಗ ಹೆಚ್ಚು ಕಡಿಮೆಯಾದರೆ ಸೂಕ್ತ ದಿನ ನಿಗದಿಪಡಿಸಲಾಗುವುದು ಎಂದು ಶಾಸಕ ಶ್ರೀನಿವಾಸಗೌಡ ಹೇಳಿದರು.

    ನಗರಸಭೆ ಸದಸ್ಯರಾದ ರಾಕೇಶ್, ಸುರೇಶ್‌ಬಾಬು, ಗುಣಶೇಖರನ್, ಇನಾಯತ್, ಆಯುಕ್ತ ಶ್ರೀಕಾಂತ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇ ಶ್ರೀನಿವಾಸರೆಡ್ಡಿ, ಎಇಇ ಶಿವರಾಮನಾಯಕ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts