More

    ಪ್ರತಿ ಮನೆಗೂ ಸಂವಿಧಾನ ತಲುಪಲಿ- ಸಂವಿಧಾನ ಜಾಗೃತಿ ಕಾರ್ಯಕ್ರಮ

    ದಾವಣಗೆರೆ: ದೇಶದ ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಜತೆಗೆ ಮನೆಮನೆಗೆ ತಲುಪಿಸುವ ಕೆಲಸ ಆಗಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಹೇಳಿದರು.
    ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಹಾಗೂ ಜೋಗೇಂದ್ರನಾಥ್ ಮಂಡಲ್ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಮ್ಮ ರಾಷ್ಟ್ರದ ಸಂವಿಧಾನವನ್ನು ಜಗತ್ತಿನಲ್ಲೇ ಬಹಳ ಅತ್ಯುತ್ತಮ ಎಂದು ಬೇರೆ ದೇಶಗಳ ಸಂವಿಧಾನ ತಜ್ಞರು ಹೇಳುತ್ತಾರೆ. ದೇಶದಲ್ಲಿ ಮಾತ್ರ ಸಂವಿಧಾನದಿಂದ ಏನೂ ಸಾಧ್ಯತೆ ಇಲ್ಲ ಎಂಬ ಹಗುರ ಮಾತುಗಳು ಕೇಳಿ ಬರುತ್ತಿವೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.
    ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಹೋಗಿದ್ದರೆ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಮನೆಗೆ ಸಂವಿಧಾನ ತಲುಪಿಸುವುದರಿಂದ ಮುಂದೊಂದು ದಿನ ಹಳ್ಳಿಗಳ ಸಾಮಾನ್ಯ ಜನರು ಸಂವಿಧಾನದಿಂದ ಆಗಿರುವ ಬೆಳವಣಿಗೆ ಕುರಿತು ಮಾತನಾಡುವಂತಾಗಬೇಕು ಎಂದು ತಿಳಿಸಿದರು.
    ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ್ದ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಬಹಳ ಒತ್ತು ನೀಡಿದ್ದರು. ಅವರ ಅನುಯಾಯಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಮೂಢನಂಬಿಕೆ ಹಾಗೂ ಕಂದಾಚಾರದಲ್ಲಿ ಮುಳುಗಿದ ಜನರನ್ನು ಆಚೆ ತರುವ ಕೆಲಸವನ್ನು ವೇದಿಕೆ ಮಾಡಬೇಕು ಎಂದರು.
    ವೇದಿಕೆ ರಾಜ್ಯ ಉಪಾಧ್ಯಕ್ಷೆ ಎನ್.ಕಾಂಚನಾ ಸಂವಿಧಾನ ಪೀಠಿಕೆ ಅನಾವರಣಗೊಳಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರೃ ಹಾಗೂ ಭ್ರಾತೃತ್ವ ಆಧಾರದ ಮೇಲೆ ದೇಶವನ್ನು ಕಟ್ಟುವ ಮಹಾಕನಸಿನೊಂದಿಗೆ ಸಂವಿಧಾನ ರಚಿಸಿದರು. ದೇಶದ ಜನತೆ ಸುಖ, ಶಾಂತಿ ಹಾಗೂ ನೆಮ್ಮದಿಯ ಬದುಕು ನಡೆಸಲು ಇದು ಕಾರಣವಾಗಿದೆ ಎಂದು ಹೇಳಿದರು.
    ಪ್ರಸ್ತುತ ದೇಶದಲ್ಲಿ ಸಂವಿಧಾನದ ವಿರುದ್ಧ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಯಾರೂ ಸಹ ಧ್ವನಿ ಎತ್ತುತ್ತಿಲ್ಲ. ಸಂವಿಧಾನದ ಸಂಕಲ್ಪದ ಕಡೆಗೆ ಸಾಗುತ್ತಿದ್ದೇವೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
    ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ಪ್ರಾಸ್ತಾವಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದು, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.
    ವೇದಿಕೆ ರಾಜ್ಯ ಉಪಾಧ್ಯಕ್ಷ ಡಾ.ಸೈಯದ್ ರೋಷನ್ ಮುಲ್ಲಾ ಮಾತನಾಡಿದರು. ಜಿಲ್ಲಾಧ್ಯಕ್ಷ ಎಚ್.ಕೆ.ಕೃಷ್ಣ ಅರಕೆರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಎನ್.ರುದ್ರಮುನಿ, ಮಲೇಬೆನ್ನೂರು ಕೆಪಿಟಿಸಿಎಲ್ ಕಿರಿಯ ಇಂಜಿನಿಯರ್ ಕೆ.ಒ.ಮಂಜಪ್ಪ, ಬಾಬಾ ಸಾಹೇಬ್ ಅಂಬೇಡ್ಕರ್ ಎಸ್‌ಸಿ, ಎಸ್‌ಟಿ ಜನಸೇವಾ ಸಮಿತಿ ಉಪಾಧ್ಯಕ್ಷ ಪಿ.ಭೀಮಪ್ಪ ಇತರರು ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts