More

    ಪ್ರತಿ ಜಿಲ್ಲೆಗೊಂದು ಗೋಶಾಲೆ, ಶಿಡ್ಲಘಟ್ಟದಲ್ಲಿ ಮೊದಲ ನಿರ್ಮಾಣ, ಸಚಿವ ಡಾ.ಕೆ.ಸುಧಾಕರ್ ಮಾಹಿತಿ

    ಶಿಡ್ಲಘಟ್ಟ: ಗೋ ಸಂರಕ್ಷಣೆಗೆ ಆದ್ಯತೆ ನೀಡಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನು ಜಾರಿ ಮಾಡಿರುವ ರಾಜ್ಯ ಸರ್ಕಾರ, ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು 50 ಲಕ್ಷ ರೂಪಾಯಿ ನಿಗದಿಪಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಾಗರೆಡ್ಡಿಹಳ್ಳಿ ಬಳಿ ನಿರ್ಮಾಣವಾಗಲಿರುವ ಗೋಶಾಲೆ ರಾಜ್ಯದಲ್ಲಿಯೇ ಪ್ರಪ್ರಥಮ ಗೋಶಾಲೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ಪಶುಸಂಗೋಪನಾ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋಶಾಲೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ, 10 ಎಕರೆ ಪ್ರದೇಶದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ವಯಸ್ಸಾದ, ರೋಗಗ್ರಸ್ತ, ಅಂಗವಿಕಲ ಜಾನುವಾರುಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು.

    ಗೋಶಾಲೆಯ ಉಪ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳಿಗೆ ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಮೂಲಕ ಮಾರುಕಟ್ಟೆ ಕಲ್ಪಿಸಿ, ಸುಸ್ಥಿರ ಸಂಪನ್ಮೂಲದ ವ್ಯವಸ್ಥೆ ಮಾಡಲಾಗುವುದು, ಸುಸ್ಥಿರತೆ, ನಿರ್ವಹಣೆಗೆ ಮೇವು ಬೆಳೆಯುವುದು, ಉತ್ಪನ್ನ ಮಾರಾಟ ಮಾಡಲು ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಅವಕಾಶ ನೀಡಲಾಗಿದ್ದು, ಒಂದೊಮ್ಮೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ, ಅದಕ್ಕೂ ಅವಕಾಶವಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

    ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಮೊದಲ ಹಾಗೂ ಎರಡನೇ ಕಂತು ಸೇರಿ 24 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಅಥವಾ ಸಂಸ್ಥೆಗಳಿಂದ ನಡೆಸುವ ಗೋಶಾಲೆಯಲ್ಲಿ ಪ್ರತಿ ಜಾನುವಾರು ವೆಚ್ಚ ದಿನಕ್ಕೆ 17.30 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಒಟ್ಟು ಜಾನುವಾರು ಪೈಕಿ ಶೇ 0.75 ಜಾನುವಾರುಗಳಿಗೆ ಸ್ಥಳಾವಕಾಶ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

    ರಾಜ್ಯದಲ್ಲೇ ಮೊದಲ ಬಾರಿಗೆ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ದೊರೆತಿದೆ. ಸರ್ಕಾರ ಗೋ ಸಂರಕ್ಷಣೆಗೆ ಆದ್ಯತೆ ನೀಡಿ ಕಠಿಣ ಕಾನೂನು ಜಾರಿ ಮಾಡಿದ್ದು, ಪೂರಕವಾಗಿ ಗೋ ಸಂರಕ್ಷಣೆಗೆ ಕ್ರಮ ಕೈಗೊಳ್ಳುವ ಮೂಲಕ ಭಾರತೀಯ ಪರಂಪರೆ, ಸಾಂಪ್ರದಾಯಿಕ ಕೃಷಿ ಕಾಪಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಚಿವರು ಹೇಳಿದರು. ಬಿಜೆಪಿ ತಾಲೂಕು ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಇದ್ದರು.

    ತಿಂಗಳೊಳಗೆ ಕೋಚಿಮುಲ್ ಪ್ರತ್ಯೇಕ: ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು, ಅದರಂತೆ ತಿಂಗಳೊಳಗೆ ಅನುಮತಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು. ಶಿಡ್ಲಘಟ್ಟದಲ್ಲಿ 9-10 ಕೆರೆಗಳಿಗೆ ಎಚ್.ಎನ್. ವ್ಯಾಲಿಯಿಂದ ನೀರು ತುಂಬಿಸುವ ಯೋಜನೆ ಬಂದಿದೆ. ಈಗಾಗಲೇ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಅವುಗಳಿಗೆಲ್ಲ ಕೆರೆಯಲ್ಲಿ ನೀರು ತುಂಬಿರುವುದು ಉತ್ತರ ನೀಡಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು. ಶಿಡ್ಲಘಟ್ಟದಲ್ಲಿ ಕೈಗಾರಿಕಾ ವಲಯಗಳನ್ನು ನಿರ್ಮಿಸಲಾಗುವುದು ಎಂಬ ಭರವಸೆಯಿತ್ತರು.

    ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ಪಶು ಸಂಗೋಪನಾ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋಶಾಲೆ ಕಾಮಗಾರಿಗೆ ಸಚಿವ ಡಾ.ಕೆ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts