More

    ಪ್ರತಿಭಟನೆಗೆ ಸೀಮಿತವಾದ ಬಂದ್

    ಹಾವೇರಿ: ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಬಂದ್​ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಮಸೂದೆ ವಿರೋಧಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.

    ಬಂದ್ ಹಿನ್ನೆಲೆಯಲ್ಲಿ ಕೆಲವು ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರೆ, ಬಹುತೇಕ ಹೋಟೆಲ್, ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಾರಿಗೆ ಸಂಸ್ಥೆ ಬಸ್, ಆಟೋ ಸಂಚಾರ ಎಂದಿನಂತಿತ್ತು. ಕೆಲವು ತಾಲೂಕುಗಳಲ್ಲಿ ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.

    ರೈತರ ಹೋರಾಟಕ್ಕೆ ಕರವೇ, ಜಯ ಕರ್ನಾಟಕ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿಮೂಲನಾ ಸಂಘ, ಎಸ್​ಎಫ್​ಐ, ಕಾರ್ವಿುಕ ಸಂಘಟನೆಗಳು ಸಾಥ್ ನೀಡಿದ್ದವು. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ರೈತ ಸಂಘ ಮತ್ತು ಹಸಿರುಸೇನೆಯ ಕೆಲ ಕಾರ್ಯಕರ್ತರು ಬೆಳಗ್ಗೆ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಕೊರಳಿಗೆ ಹಗ್ಗದ ಕುಣಿಕೆ ಹಾಕಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಹುಕ್ಕೇರಿಮಠದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ಸರ್ಕಾರ ತಿದ್ದುಪಡಿ ಮಾಡಿರುವ ನೂತನ ಕಾಯ್ದೆಗಳಿಂದ ರೈತನ ಬದುಕು ಬೀದಿಗೆ ಬರಲಿದೆ. ಈಗಾಗಲೇ ಯಾವುದೇ ಬೆಳೆ ಬೆಳೆದರೂ ರೈತರಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದು, ಕುಟುಂಬ ನಿರ್ವಹಣೆ ಮಾಡಲಾಗದೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಪ್ರಗತಿಪರ ಚಿಂತಕರು, ಸಾಹಿತಿಗಳು, ರೈತ ಮುಖಂಡರು ಹಾಗೂ ವಿಪಕ್ಷದ ಜೊತೆ ರ್ಚಚಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತರ ಪಾಲಿನ ಮರಣ ಶಾಸನ: ದೇಶದ ರೈತರಿಗೆ ಮಾರಕವಾಗಿರುವ ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಭೂ ಸುಧಾರಣಾ ಕಾಯ್ದೆ ರೈತರಿಗೆ ಮಾರಕವಾಗಿದ್ದು ಬಡ ರೈತರು ಭೂಮಿ ಕಳೆದುಕೊಳ್ಳುವ ಆತಂಕವಿದೆ. ಇದು ಕಾಪೋರೇಟ್ ಕಂಪನಿಗಳಿಗೆ ವರವಾಗಿದೆ. ಈ ಕಾಯ್ದೆಗಳು ರೈತರ ಪಾಲಿನ ಮರಣ ಶಾಸನಗಳಾಗಿದ್ದು, ಸರ್ಕಾರ ಕಾಯ್ದೆಗಳ ಮೂಲಕ ಪರೋಕ್ಷವಾಗಿ ರೈತರಿಗೆ ವಿಷ ನೀಡುತ್ತಿದೆ. ಸರ್ಕಾರದ ಈ ಹುನ್ನಾರ ಈಡೇರಲು ಎಂದಿಗೂ ಬಿಡುವುದಿಲ್ಲ ಎಂದು ರೈತ ಮುಖಂಡರು ದೂರಿದರು.

    ಜನಜೀವನ ಎಂದಿನಂತೆ: ಹಾವೇರಿ ನಗರದಲ್ಲಿ ಹೊಸಮನಿ ಸಿದ್ದಪ್ಪ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಕೆಲ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿದ್ದರು. ಇನ್ನುಳಿದ ಕಡೆ ಎಂದಿನಂತೆ ವ್ಯಾಪಾರ ವಹಿವಾಟು ನಡೆದವು. ಸಾರಿಗೆ ಸಂಸ್ಥೆ ಬಸ್​ಗಳು ಪ್ರತಿಭಟನೆಯ ಸಮಯದಲ್ಲಿ ಬಂದ್ ಆಗಿ ನಂತರ ಎಂದಿನಂತೆ ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆಟೋ ಸಂಚಾರವೂ ಎಂದಿನಂತಿತ್ತು. ಬೇಕರಿ, ಹಾಲು, ಔಷಧ, ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇದರಿಂದಾಗಿ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಲಿಲ್ಲ.

    ರೈತ ಮುಖಂಡರಾದ ಮಾಲತೇಶ ಪೂಜಾರ, ಎಂ.ಎನ್. ನಾಯಕ, ಹನುಮಂತಪ್ಪ ಹುಚ್ಚಣ್ಣವರ, ಮಹೇಶ ಕೊಟ್ಟೂರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಬಸವರಾಜ ಟೀಕಿಹಳ್ಳಿ, ಕೆ. ಅಕ್ಷತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts