More

    ಪ್ರಗತಿ ಕಾಣದ ಅನ್ನಪೂರ್ಣೇಶ್ವರಿ ನಗರ, ಪಂಚಾಯಿತಿಯಿಂದ ನಗರಸಭೆಗೇರಿದರೂ ದೊರಕದ ಕಾಯಕಲ್ಪ

    ಮಂಜುನಾಥ ಎಸ್.ಸಿ. ಹೊಸಕೋಟೆ
    ಮೂರು ವರ್ಷದ ಹಿಂದೆಯೇ ನಗರಸಭೆ ವಾರ್ಡ್ 31ಕ್ಕೆ ಸೇರ್ಪಡೆಯಾದ ಅನ್ನಪೂರ್ಣೇಶ್ವರಿ ನಗರದ ಬೆಂಗಳೂರು ಲೇಔಟ್, ನಿಸರ್ಗ ಬಡಾವಣೆ, ಕುಟ್ಟಿ ಬಡಾವಣೆಗಳಲ್ಲಿ ಮೂಲಸೌಕರ್ಯ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ಭಾಗದಲ್ಲಿ ನೀರಿನ ಸೌಲಭ್ಯ ಬಿಟ್ಟರೆ, ರಸ್ತೆ, ಚರಂಡಿ, ಮೋರಿ ಹಾಗೂ ಒಳಚರಂಡಿ ಸಮಸ್ಯೆ ತಾಂಡವವಾಡುತ್ತಿದೆ.
    ಈ ಮೊದಲು ತಾಲೂಕಿನ ಕಸಬಾ ಹೋಬಳಿಯ ದೊಡ್ಡಗಟ್ಟಿಗನಬ್ಬೆ ಗ್ರಾಪಂ ವ್ಯಾಪ್ತಿಯಲ್ಲಿದ್ದವು. ಸ್ಥಳೀಯರು ನಗರ ವ್ಯಾಪ್ತಿಗೆ ಸೇರಿರುವುದರಿಂದ ಬಡಾವಣೆಗಳಲ್ಲಿ ಅಭಿವೃದ್ಧಿ ಪರ್ವವೇ ಆರಂಭವಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ  ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಸಮಸ್ಯೆಗಳೇ ಮುಂದುವರಿದಿವೆ ಎಂಬುದು ಬೇಸರಕ್ಕೆ ಕಾರಣವಾಗಿದೆೆ.
    ಅಭಿವೃದ್ಧಿಗೆ ನೀಲಿನಕ್ಷೆ: ಸದ್ಯ ನಗರೋತ್ಥಾನ ಯೋಜನೆಯಡಿ 2.5 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಿದ್ದು, ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ ಎಂದು ವಾರ್ಡ್ ಸದಸ್ಯೆ ಶೋಭಾ ಜುಂಜಪ್ಪ ಹೇಳಿದ್ದಾರೆ.
    ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು, ರಸ್ತೆ, ಮೋರಿ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಮೂರೂವರೆ ವರ್ಷ ಆಡಳಿತಾವಧಿ ಇದ್ದು, ಈ ಅವಧಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
    ಸದ್ಯ ಅನ್ನಪೂರ್ಣೇಶ್ವರಿ ನಗರದ 11ನೇ ಅಡ್ಡ ರಸ್ತೆಯವರೆಗೆ ರಸ್ತೆ, ಮೋರಿ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಅನುಮೋದನೆ ಪಡೆದ ಕೂಡಲೆ ಕಾಮಗಾರಿ ಆರಂಭಿಸಲಾಗುವುದು.
    ಸಂಜಯ್ ಕುಲಕರ್ಣಿ, ಎಇಇ, ಹೊಸಕೋಟೆ
    ಅನ್ನಪೂರ್ಣೇಶ್ವರಿ ನಗರ ಮುಖ್ಯರಸ್ತೆ ಓಡಾಟಕ್ಕೆ ತೊಡಕಾಗಿದೆ. ಖಾಸಗಿ ಅವರು ನಮಗೆ ಸೇರಿದ್ದು ಎಂದು ತಕರಾರು ಮಾಡಿದ್ದಾರೆ, ಈ ಬಗ್ಗೆ ತಹಸೀಲ್ದಾರ್ ಹಾಗೂ ನಗರಸಭೆ ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಸರ್ವೇ ಮಾಡಿಸಿ ಸರ್ಕಾರಿ ಜಾಗ ಗುರುತಿಸಿದರೂ ಈವರೆಗೆ ರಸ್ತೆ ಮಾಡಲು ಅಧಿಕಾರಿಗಳು ಮುಂದಾಗಿಲ್ಲ, ರಸ್ತೆ ಮೋರಿ ಇಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ.
     ಚಂದ್ರು, ವಾರ್ಡ್ ನಿವಾಸಿ
    ನಿಸರ್ಗಾ ಬಡಾವಣೆಯಲ್ಲಿ ಸೂಕ್ತ ರಸ್ತೆ ಇಲ್ಲ. ಮೋರಿ ಸ್ವಚ್ಛಗೊಳಿಸಿ ಹಲವು ತಿಂಗಳೇ ಕಳೆದಿದ್ದು, ಗಬ್ಬು ನಾರುತ್ತಿದೆ. ಹಾಗೆಯೇ ಈ ಭಾಗದ ರಸ್ತೆಗಳಲ್ಲಿ ವಾಮಾಚಾರ ಪ್ರಕರಣ ಹೆಚ್ಚಾಗುತ್ತಿದೆ. ಅಮಾವಾಸ್ಯೆ ಹಾಗೂ ಪೌರ್ಣಮಿ ಸಂದರ್ಭದಲ್ಲಿ ರಸ್ತೆಗಳಲ್ಲಿ ಮೊಟ್ಟೆ, ನಿಂಬೆ ಹಣ್ಣು ಇಟ್ಟು ಪೂಜೆ ಮಾಡುವುದು ಹೆಚ್ಚಾಗಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
     ದಯಾನಂದ್, ನಿಸರ್ಗಾ ಬಡಾವಣೆ ನಿವಾಸಿ
    ಕುಟ್ಟಿ ಬಡಾವಣೆಯಲ್ಲಿ ನೀರಿನ ಸೌಲಭ್ಯ ಇಲ್ಲ. ಬಡಾವಣೆ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಮುಖ್ಯ ರಸ್ತೆಯಿಂದ ಅಡ್ಡ ರಸ್ತೆಗಳು ನಿರ್ಮಾಣವಾಗದೆ ಮಣ್ಣು ರಸ್ತೆಗಳಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಮಳೆ ಬಂದರಂತೂ ಮನೆಗಳಿಂದ ಹೊರಬರಲಾಗದ ಸ್ಥಿತಿ ಇದೆ. 
     ನವೀನ್ ಕುಮಾರ್, ಕುಟ್ಟಿ ಬಡಾವಣೆ ನಿವಾಸಿ 
    ರಸ್ತೆಗಳ ಅಂಚಿನಲ್ಲಿ ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿದ್ದು, ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರ ಜತೆಗೆ ಮೋರಿಗಳಲ್ಲಿ ನೀರು ತುಂಬಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ದೂರು ನೀಡಿದರಷ್ಟೆ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಮೋರಿ ಸ್ವಚ್ಛತೆಗೆ ಕ್ರಮ ವಹಿಸುತ್ತಾರೆ.
     ಜಗದೀಶ್, ಶಿಕ್ಷಕರ ಬಡಾವಣೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts