More

    ಪೌರತ್ವ ಕಾಯ್ದೆಯಿಂದ ತೊಂದರೆ ಇಲ್ಲ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

    ಚಿಕ್ಕಬಳ್ಳಾಪುರ : ಭಾರತದಲ್ಲಿ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶನ ಮತ್ತು ಪಾಕಿಸ್ತಾನದ ಪರ ಘೋಷಣೆ ಕೂಗುವಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಮುಲಾಜಿಲ್ಲದೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.

    ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಬಿಜೆಪಿ ಶುಕ್ರವಾರ ಕೈಗೊಂಡಿದ್ದ ಪೌರತ್ವ ತಿದ್ದುಪಡಿ ವಿಧೇಯಕ ಜಾರಿ ಪರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತದಲ್ಲಿ ಮೊದಲಿನಿಂದಲೂ ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬರುತ್ತಿದ್ದು ಅಲ್ಪಸಂಖ್ಯಾತರನ್ನು ಸಹೋದರರಂತೆ ಕಾಣಲಾಗುತ್ತಿದೆ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಹಿಂದುಗಳ ಮತಾಂತರ, ಆಲಯಗಳ ನಾಶ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹಕ್ಕುಗಳ ದಮನ, ದೌರ್ಜನ್ಯ, ಕೊಲೆ ಪ್ರಕರಣಗಳಿಗೆ ಲೆಕ್ಕವಿಲ್ಲ. ಅಲ್ಲಿನ ಕ್ರೈಸ್ತರು, ಸಿಖ್, ಬೌದ್ಧ, ಜೈನರ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಲೂ ಭಯವಾಗುತ್ತದೆ ಎಂದರು.ವಿಧೇಯಕ ಜಾರಿಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇಲ್ಲಿ ಹುಟ್ಟಿನಿಂದಲೇ ಎಲ್ಲರಿಗೂ ಪೌರತ್ವ ಲಭಿಸುತ್ತದೆ. ನೆರೆ ರಾಷ್ಟ್ರದವರು ನಿಯಮಾನುಸಾರ ಭಾರತದ ಪೌರತ್ವ ಪಡೆಯಬಹುದಾಗಿದೆ. ಆದರೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ವಿಷ ಬೀಜ ಬಿತ್ತುತ್ತಿದೆ. ಅಲ್ಪಸಂಖ್ಯಾತರೆಲ್ಲರನ್ನೂ ದೇಶದಿಂದ ಓಡಿಸುವ ಇಲ್ಲವೇ ದಾಖಲೆಗಳನ್ನು ಕಿತ್ತುಕೊಂಡು ಜೈಲಿನಲ್ಲಿಡಲಾಗುತ್ತದೆ ಎಂಬ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ಕೇಂದ್ರ ಸರ್ಕಾರವು ಕಾಯ್ದೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ ಗೊಂದಲ ಬಗೆಹರಿಸಿದೆ. ಇದರ ನಡುವೆ ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ ನಾಶಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.
    ಶಾಸಕ ಡಾ ಕೆ.ಸುಧಾಕರ್ ಮಾತನಾಡಿ, ಕಾಯ್ದೆ ಬಗೆಗಿನ ಆತಂಕ ಮತ್ತು ಅನುಮಾನಗಳನ್ನು ಬಗೆಹರಿಸುವ ಬದಲು ವಿಪಕ್ಷಗಳು ಜನರನ್ನು ಪ್ರಚೋದಿಸಿ, ದಿಕ್ಕು ತಪ್ಪಿಸುತ್ತಿವೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಸಾಧಕ ಅಂಶಗಳನ್ನು ತಿಳಿಸಿ, ಜನರಲ್ಲಿ ಅರಿವು ಮೂಡಿಸಬೇಕು ಎಂದರು.
    ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿರುವ ಕಾಯ್ದೆಯು ಭಾರತೀಯರಿಗೆ ಅನ್ವಯವಾಗುವುದಿಲ್ಲ. ಇದು ವಿದೇಶಿ ಸಂತ್ರಸ್ತರಿಗೆ ಭಾರತದ ಪೌರತ್ವ ಕೊಡುವುದಕ್ಕೆ ಸೀಮಿತವಾಗಿದೆ. ಹೀಗಿರುವಾಗ ಇಲ್ಲಿನ ಅಲ್ಪಸಂಖ್ಯಾತರಿಗೆ ಹೇಗೆ ಅನ್ಯಾಯವಾಗುತ್ತದೆ? ಎಂದು ಪ್ರಶ್ನಿಸಿದರು.
    ನಗರ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮೀಣ ಭಾಗದ ಅಧ್ಯಕ್ಷ ಕೆ.ಎಸ್.ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.
    ಮನೆ ಮನೆಗೂ ಸಂಸದರ ಭೇಟಿ : ನಗರದ ದೊಡ್ಡಭಜನೆ ರಸ್ತೆ, ಕಾರ್ಖಾನೆ ಪೇಟೆ, ಒಂಎಂಬಿ ರಸ್ತೆ ಸೇರಿ ವಿವಿಧೆಡೆ ಮನೆ ಮನೆಗೂ ಸಂಸದೆ ಶೋಭಾ ಕರಂದ್ಲಾಜೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆ ಕರಪತ್ರ ಹಂಚಿದರು. ಇದೇ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ಅನುಮಾನಗಳನ್ನು ವ್ಯಕ್ತಪಡಿಸಿದರು. ಆಧಾರ್‌ನಲ್ಲಿ ಹೆಸರು ತಪ್ಪಾಗಿ ಮುದ್ರಿಸಲಾಗಿದೆ. ಇದರಿಂದ ಕಾಯ್ದೆ ಜಾರಿಯಿಂದ ನನಗೆ ತೊಂದರೆಯಾಗುವ ಆತಂಕ ಕಾಡುತ್ತಿದೆ ಎಂದು ಸೈಯದ್ ಖಾನ್ ತಿಳಿಸಿದಾಗ, ಇದು ದೊಡ್ಡ ಸಮಸ್ಯೆಯಲ್ಲ. ಲೋಪಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಸಮಾಧಾನಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts