More

    ಪೊಲೀಸ್ ಆಯುಕ್ತರಿಗೆ ಸಚಿವ ಬೊಮ್ಮಾಯಿ ಎಚ್ಚರಿಕೆ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಕಚೇರಿ ಬಿಟ್ಟು ಹೊರಬಂದು ನೋಡಿ, ಕಾನೂನು ಪಾಲನೆ ವ್ಯವಸ್ಥೆಯನ್ನು ಬಿಗಿ ಮಾಡಬೇಕು. ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧ ಹೆಚ್ಚಾದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಪೊಲೀಸ್ ಆಯುಕ್ತ ಆರ್. ದಿಲೀಪ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಪೊಲೀಸ್ ಆಯುಕ್ತರು ಹಾಗೂ ಕಾನೂನು ಸುವ್ಯವಸ್ಥೆ, ಅಪರಾಧ ವಿಭಾಗದ ಡಿಸಿಪಿ ಅವರನ್ನು ಗೃಹ ಸಚಿವ ಬೊಮ್ಮಾಯಿ ಭಾನುವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡು ರ್ಚಚಿಸಿದರು. ಅವಳಿ ನಗರದ ಅಪರಾಧ ಚಟುವಟಿಕೆ ಮತ್ತು ಕಾನೂನು ಸುವ್ಯವಸ್ಥೆ ಸೇರಿ ಸಮಗ್ರ ಚಟುವಟಿಕೆಗಳ ಮಾಹಿತಿ ತಿಳಿದುಕೊಂಡ ಅವರು, ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಯುಕ್ತರಿಗೆ ಭರ್ಜರಿ ಕ್ಲಾಸ್ ತೆಗೆದುಕೊಂಡರು ಎಂದು ತಿಳಿದುಬಂದಿದೆ.

    ಕ್ಷುಲ್ಲಕ ಕಾರಣಕ್ಕೆ ಚಾಕು, ಚೂರಿ, ಮಚ್ಚು, ಲಾಂಗು ಹಿಡಿದು ಅಬ್ಬರಿಸಿ ಭಯ ಹುಟ್ಟಿಸುವವರು, ಹಾಡಹಗಲೇ ಹತ್ಯೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕೆಡಿಸಿ ಪೊಲೀಸರಿಗೆ ಸವಾಲು ಹಾಕುವ ಮೂಲಕ ಕೆಲ ಯುವಕರು ಬಾಲ ಬಿಚ್ಚಿದ್ದಾರೆ. ಮೀಸೆ ಚಿಗುರದ ಯುವಕರು, ಪುಡಿ ರೌಡಿಗಳೂ ಗಲ್ಲಿ ಗಲ್ಲಿಗಳಲ್ಲಿ ಅಮಾಯಕರನ್ನು ಬೆದರಿಸುವುದು, ಕೊಲೆ, ಸುಲಿಗೆ ಮಾಡುವುದು ನಡೆದಿದೆ. ಕಾನೂನು, ಪೊಲೀಸರೆಂದರೆ ಭಯವೇ ಇಲ್ಲದಂತೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇನ್ನುಮುಂದೆ ಇಂತಹ ಚಟುವಟಿಕೆಗಳು ನಡೆಯದಂತೆ ಅಗತ್ಯ ಕ್ರಮ ಜರುಗಿಸಬೇಕು. ಗಸ್ತು ಹೆಚ್ಚಿಸಬೇಕು. ಅಪರಾಧಗಳ ಸಂಚು ನಡೆದಿರುವುದನ್ನು ತಿಳಿದುಕೊಂಡು, ಅಪರಾಧಿಕ ಮನೋವೃತ್ತಿಯವರನ್ನು ಹತ್ತಿಕ್ಕಬೇಕು ಎಂದು ಸಚಿವರು ಸೂಚಿಸಿರುವುದಾಗಿ ಗೊತ್ತಾಗಿದೆ.

    ನಿರ್ದಾಕ್ಷಿಣ್ಯ ಕ್ರಮ

    ಅಪರಾಧ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಬಿಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಹು-ಧಾ ನಗರದ ಕೆಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಬೆದರಿಕೆ, ಗಾಂಜಾ ಮಾರಾಟ ಹಾಗೂ ದೋ ನಂಬರ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಗತ್ಯವೆನಿಸಿದರೆ ನೀವೇ ಫೀಲ್ಡಿಗಿಳಿಯಿರಿ. ಠಾಣೆಗಳಿಗೆ ಭೇಟಿ ನೀಡಿ ಅಪರಾಧ ಚಟುವಟಿಕೆ ನಿಮೂಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧೀನ ಅಧಿಕಾರಿ-ಸಿಬ್ಬಂದಿಗೆ ಮಾರ್ಗದರ್ಶನ ನೀಡಿ ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.

    ನಿರಂತರ ನಿಗಾ ವಹಿಸುವೆ

    ಕೆಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ದಂಧೆ ನಡೆಯುತ್ತಿವೆ. ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್, ದೇಶಪಾಂಡೆ ನಗರದಲ್ಲಿ ನಡೆದ ಯುವಕನಿಗೆ ಚಾಕು ಇರಿದು ಹತ್ಯೆ, ಗೋಪನಕೊಪ್ಪದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಗಮನಕ್ಕೆ ಬಂದಿದೆ. ಸುಲಿಗೆ, ಕಳ್ಳತನ, ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಂತಹ ಎಲ್ಲ ಚಟುವಟಿಕೆಗಳನ್ನು ತಡೆಗಟ್ಟಬೇಕು. ಈ ಕುರಿತು ನಾನು ನಿರಂತರವಾಗಿ ಮೇಲುಸ್ತುವಾರಿ ವಹಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts