More

    ಪೇದೆಗೆ ಎಸಿಪಿ ಕಪಾಳ ಮೋಕ್ಷ!

    ಹುಬ್ಬಳ್ಳಿ: ಯಾವುದೋ ವಿಚಾರಕ್ಕೆ ಆಕ್ರೋಶಗೊಂಡು ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೇಬಲ್ ಒಬ್ಬರಿಗೆ ಸಂಚಾರ ವಿಭಾಗದ ಎಸಿಪಿ ಎಂ.ಎಸ್. ಹೊಸಮನಿ ಕಪಾಳ ಮೋಕ್ಷ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯ ಸಿಸಿಟಿವಿ ಕ್ಯಾಮರಾ ದೃಶ್ಯ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.

    ಶುಕ್ರವಾರ ರಾತ್ರಿ 1.30ರ ಸುಮಾರು ದಕ್ಷಿಣ ಸಂಚಾರ ಠಾಣೆಗೆ ಎಸಿಪಿ ಹೊಸಮನಿ ತೆರಳಿದ್ದರು. ಯಾವುದೋ ವಿಚಾರವಾಗಿ ಅಲ್ಲಿದ್ದ ಇನ್ಸ್​ಪೆಕ್ಟರ್ ಹಾಗೂ ಓರ್ವ ಕಾನ್​ಸ್ಟೇಬಲ್​ಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದರು. ನಂತರ ಠಾಣೆ ಹೊರಗೆ ನಿಂತಿದ್ದ ಸೆಂಟ್ರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಎಸಿಪಿ ಮಧ್ಯರಾತ್ರಿ ಠಾಣೆಗೆ ತೆರಳಿ ಅಲ್ಲಿದ್ದ ಸಿಬ್ಬಂದಿಗೆ ನಿಂದಿಸಿ, ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಕುರಿತು ತನಿಖೆ ನಡೆಸುತ್ತಿರುವ ಡಿಸಿಪಿ ಆರ್.ಬಿ. ಬಸರಗಿ ಶನಿವಾರ ಅಂದಾಜು 5 ತಾಸು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.

    ರಾತ್ರಿ ಪಾಳಿ ಕೆಲಸದ ಹಿನ್ನೆಲೆಯಲ್ಲಿ ದಕ್ಷಿಣ ಸಂಚಾರ ಠಾಣೆಗೆ ಪರಿಶೀಲನೆಗೆ ತೆರಳಿದ್ದೆ. ಆಗ ಸಿಬ್ಬಂದಿ ಮಲಗಿಕೊಂಡಿದ್ದರು. ಕರ್ತವ್ಯ ಮರೆತು ಮಲಗಿದ್ದ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದೆ. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. | ಎಂ.ಎಸ್. ಹೊಸಮನಿ ಎಸಿಪಿ, ಸಂಚಾರ ವಿಭಾಗ

    ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಅವರಿಗೆ ಸೂಚಿಸಿದ್ದೇನೆ. ಎಲ್ಲ ವಿಚಾರ ತಿಳಿದುಕೊಂಡು ಅವರು ವರದಿ ಸಲ್ಲಿಸಲಿದ್ದಾರೆ. | ಲಾಬುರಾಮ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts