More

    ಪುಷ್ಪ ಕೃಷಿ… ದಂಪತಿಗೆ ಖುಷಿ…

    ಯಲ್ಲಾಪುರ: ಕೃಷಿ ಎಂದರೆ ಯುವಕರು ಮೂಗು ಮುರಿಯುವ ಈ ಕಾಲದಲ್ಲಿ, ಸಾವಯವ ಪದ್ಧತಿ ಮೂಲಕ ಪುಷ್ಪ ಕೃಷಿ ಮಾಡಿರುವ ತಾಲೂಕಿನ ಉಪಳೇಶ್ವರ ಸಮೀಪದ ಜಂಬೆಸಾಲಿನ ಯುವ ದಂಪತಿ ರಾಜೀವ ಹೆಗಡೆ ಹಾಗೂ ಶ್ರೀಲತಾ ಇತರರಿಗೆ ಮಾದರಿಯಾಗಿದ್ದಾರೆ.

    ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ರೈತರು ಜೀವನೋಪಾಯಕ್ಕಾಗಿ ಅಡಕೆ ಬೆಳೆ ನೆಚ್ಚಿಕೊಂಡಿದ್ದಾರೆ. ಅಡಕೆ ವರ್ಷಕ್ಕೆ ಒಂದೇ ಬಾರಿ ಇಳುವರಿ ನೀಡುತ್ತದೆ. ನಿತ್ಯ ಬೆಳೆ ಕೈಗೆ ಸಿಗುವಂತಹ ಕೃಷಿ ಮಾಡಬೇಕೆಂಬ ಉದ್ದೇಶದಿಂದ ರಾಜೀವ ಅವರು ಪುಷ್ಪ ಕೃಷಿಯತ್ತ ಮನಸ್ಸು ಮಾಡಿದರು. ಮೊದಲು ಸುಗಂಧರಾಜ ಹೂವಿನಿಂದ ಕೃಷಿ ಆರಂಭಿಸಿದರು. ಹೂವು ಕೊಯ್ದ ನಂತರ ಎರಡು ದಿನ ಮಾತ್ರ ಬಾಳಿಕೆ ಬರುವುದರಿಂದ, ಮಾರುಕಟ್ಟೆಗೆ ತಲುಪಿಸಿ ಮಾರಾಟ ಆಗುವವರೆಗೆ ಹೂವು ಹಾಳಾಗಿ ಹೋಗುವ ಆತಂಕದಿಂದ ಅದನ್ನು ಕೈಬಿಟ್ಟರು.

    ಕೊಯ್ಲು ಮಾಡಿದ ನಂತರ ಐದಾರು ದಿನಗಳವರೆಗೂ ಹಾಳಾಗದ ಮಾರಿಗೋಲ್ಡ್ ಸೇವಂತಿಗೆಯ ಕೃಷಿಯನ್ನು ಮನೆ ಎದುರಿನ ಐದು ಗುಂಟೆ ಜಾಗದಲ್ಲಿ ಆರಂಭಿಸಿದರು. ತಾವೇ ಪಾಲಿಹೌಸ್ ನಿರ್ವಿುಸಿ, ಬೆಳಗಾವಿಯಿಂದ ಗಿಡಗಳನ್ನು ತಂದು ನೆಟ್ಟರು. ಗಿಡ ನೆಟ್ಟು 4 ತಿಂಗಳಿಗೆ ಹೂವು ಬಿಡಲು ಆರಂಭವಾಗುತ್ತದೆ. ವರ್ಷಕ್ಕೆ 2-3 ಬಾರಿ ಬೆಳೆ ತೆಗೆಯಬಹುದು. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ, ಛಲ ಬಿಡದೆ ಮತ್ತೊಂದು ಪ್ರಯತ್ನದ ಫಲವಾಗಿ ಇದೀಗ ಮೂರು ದಿನಗಳಿಗೊಮ್ಮೆ 15- 20 ಕೆಜಿ ಹೂವು ಕೊಯ್ಲು ಮಾಡುವ ಮಟ್ಟಕ್ಕೆ ತಲುಪಿದ್ದಾರೆ.

    ಯಲ್ಲಾಪುರದ ಮಾರುಕಟ್ಟೆಯಲ್ಲೇ ಹೂವು ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಕಾರ್ಯಕ್ರಮ, ದೇವಸ್ಥಾನಗಳಿಗೂ ಪೂರೈಕೆ ಮಾಡುತ್ತಾರೆ. ಇವರು ಬೆಳೆಯುವ ಹೂಗಳಿಗೆ ಮಾತ್ರವಲ್ಲದೆ, ಗಿಡಗಳಿಗೂ ಉತ್ತಮ ಬೇಡಿಕೆಯಿದೆ. ಈ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಹೂ ಬೆಳೆಯಲು ಪಾಲಿ ಹೌಸ್ ಅವಶ್ಯಕವಾಗಿದೆ. ಒಮ್ಮೆ ಪಾಲಿ ಹೌಸ್ ನಿರ್ವಿುಸಿದರೆ 10 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಐದು ಗುಂಟೆ ಜಾಗದಲ್ಲಿ 350-400 ಗಿಡ ನೆಡಬಹುದು. ಪಾಲಿ ಹೌಸ್ ನಿರ್ವಿುಸಿ, ಗಿಡ ನೆಟ್ಟು, ಅವುಗಳ ಆರೈಕೆ ಮಾಡಿ, ಹೂ ಕೊಯ್ಲು ಮಾಡಿ ಮಾರುಕಟ್ಟೆಗೆ ಹೋಗುವವರೆಗೆ 2.5 ಲಕ್ಷ ರೂ. ಖರ್ಚು ಬರುತ್ತದೆ. ವರ್ಷದಲ್ಲಿ 7-8 ತಿಂಗಳು ಹೂ ಬಿಡುತ್ತದೆ. ಮೊದಲ ವರ್ಷ ಅಷ್ಟಾಗಿ ಲಾಭ ದೊರೆಯದಿದ್ದರೂ ಎರಡನೇ ವರ್ಷದಿಂದ ದುಪ್ಪಟ್ಟು ಲಾಭ ಪಡೆಯಬಹುದು. ಮಾರುಕಟ್ಟೆಯಲ್ಲಿ ಕೆಜಿಗೆ 150 ರಿಂದ 200 ರೂ.ಗಳವರೆಗೆ ಹೂ ಮಾರಾಟವಾದರೆ, ದೇವಸ್ಥಾನ, ಸಭೆ-ಸಮಾರಂಭ, ಮದುವೆ-ಮುಂಜಿಗಳಿಗೆ ನೀಡಿದಾಗ ಹೆಚ್ಚಿನ ಆದಾಯ ದೊರೆಯುತ್ತದೆ.

    ಆನ್​ಲೈನ್​ನಲ್ಲಿ ಆರ್ಡರ್ ಪಡೆದು, ಕೋರಿಯರ್ ಮೂಲಕ ದೂರದ ಊರುಗಳಿಗೂ ಹೂವು ಮತ್ತು ಗಿಡಗಳನ್ನು ಕಳುಹಿಸಲಾಗುತ್ತಿದೆ. ಸದ್ಯ ಹಳದಿ ಬಣ್ಣದ ಹೂವುಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಮುಂದೆ ಬೇರೆ ತಳಿ, ಬಣ್ಣಗಳ ಸೇವಂತಿಗೆ ಬೆಳೆಯುವ ಯೋಜನೆ ಹೊಂದಿದ್ದಾರೆ. ಐದು ಗುಂಟೆ ಜಾಗದಲ್ಲಿ ಮಾಡುತ್ತಿರುವ ಈ ಕೃಷಿಯನ್ನು ಎಕರೆಗಳಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು. ಪುಷ್ಪ ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂಬುದು ಈ ದಂಪತಿಯ ಆಶಯವಾಗಿದೆ.

    ಕೀಟಬಾಧೆಯದ್ದೇ ಸಮಸ್ಯೆ: ಮಾರಿಗೋಲ್ಡ್ ಸೇವಂತಿಗೆಗೆ ಕೀಟಬಾಧೆಯದ್ದೇ ದೊಡ್ಡ ಸಮಸ್ಯೆ. ಕೀಟಗಳು ಹೂವಿನೊಳಗೆ ಹೊಕ್ಕು ಹೂವನ್ನು ಹಾಳು ಮಾಡುತ್ತವೆ. ಇದೊಂದು ದೊಡ್ಡ ಸವಾಲಾಗಿದೆ. ಏನೇ ಆದರೂ ಸಾವಯವ ಔಷಧಗಳ ಮೂಲಕವೇ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತೇವೆ, ಹೊರತು ರಾಸಾಯನಿಕಗಳತ್ತ ಮುಖ ಮಾಡಿಲ್ಲ ಎನ್ನುತ್ತಾರೆ ರಾಜೀವ ಹೆಗಡೆ.

    ಪುಷ್ಪ ಕೃಷಿ ತೀರಾ ಕಷ್ಟದ ಕೆಲಸವಲ್ಲ. ಆದರೆ, ತುಂಬಾ ಸೂಕ್ಷ್ಮವಾಗಿ ಗಿಡ, ಹೂವುಗಳನ್ನು ಆರೈಕೆ ಮಾಡಬೇಕು. ವೈಫಲ್ಯದಿಂದ ಕಂಗೆಡದೇ ಮುನ್ನುಗ್ಗಿದರೆ ಯಶಸ್ಸು ನಮ್ಮದಾಗುತ್ತದೆ ಎಂಬ ಸತ್ಯವನ್ನು ಈ ಕೃಷಿಯಲ್ಲಿ ಕಂಡುಕೊಂಡಿದ್ದೇವೆ. ಜೀವನ ನಿರ್ವಹಣೆ, ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗದೇ ಕೃಷಿಯಲ್ಲಿ ಸಾಧಿಸಬೇಕೆಂಬ ನಮ್ಮ ಛಲ ಪುಷ್ಪ ಕೃಷಿಗೆ ಪ್ರೇರಣೆಯಾಗಿದೆ. ಇನ್ನೂ ಸಾಧಿಸಬೇಕಾದದ್ದು ಸಾಕಷ್ಟಿದೆ.

    | ಶ್ರೀಲತಾ ಹಾಗೂ ರಾಜೀವ ಹೆಗಡೆ ಪುಷ್ಪ ಕೃಷಿಕರು ಜಂಬೆಸಾಲ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts