More

    ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಉತ್ತಮರನ್ನು ಆಯ್ಕೆ ಮಾಡಿ

    ತಿ.ನರಸೀಪುರ: ರಾಜೀನಾಮೆಯಿಂದ ತೆರವಾಗಿರುವ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಡಿ.26ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸದಸ್ಯರ ನಿಯೋಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಸಲ್ಲಿಸಿತು.


    ಅಧ್ಯಕ್ಷರಾಗಿ ಒಂದು ವರ್ಷಗಳ ಕಾಲ ಅಧಿಕಾರ ನಡೆಸಿದ ನಿಕಟಪೂರ್ವ ಅಧ್ಯಕ್ಷ ಎಸ್.ಮದನ್ ರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ಡಿ.26 ರಂದು ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಬಾದಾಮಿ ಮಂಜು ಹಾಗೂ ಟಿ.ಎಂ.ನಂಜುಂಡಸ್ವಾಮಿ ನಡುವೆ ಸ್ಪರ್ಧೆಯಿದ್ದು, ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.


    ಈ ಹಿನ್ನೆಲೆಯಲ್ಲಿ ಬಾದಾಮಿ ಮಂಜು ಹಾಗೂ ಟಿ.ಎಂ.ನಂಜುಂಡಸ್ವಾಮಿ ಪರ ಬ್ಯಾಟಿಂಗ್ ಮಾಡಲು ಎರಡು ಪ್ರತ್ಯೇಕ ತಂಡಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಒಂದು ತಂಡದ ನಿಯೋಗ ಕಳೆದ ಎರಡು ಅವಧಿಯ ಅಧ್ಯಕ್ಷ ಚುನಾವಣೆಯಲ್ಲಿ ವರುಣ ಕ್ಷೇತ್ರಕ್ಕೆ ಆದ್ಯತೆ ನೀಡಿ ಕ್ರಮವಾಗಿ ಎನ್.ಸೋಮು ಹಾಗು ಮದನ್‌ರಾಜ್ ಅವರಿಗೆ ಅವಕಾಶ ಕಲ್ಪಿಸಿದ್ದೀರಿ. ಈ ಬಾರಿ ತಿ.ನರಸೀಪುರ ಪಟ್ಟಣ ವ್ಯಾಪ್ತಿಯ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿತು.


    ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಹಾಗೂ ಸದಸ್ಯ ಪ್ರಕಾಶ್ ಅವರು ಟಿ.ಎಂ.ನಂಜುಂಡಸ್ವಾಮಿ ಬೆಂಬಲಿಸಿದರೆ, ಉಳಿದ ಸದಸ್ಯರಾದ ಕರಿಯಪ್ಪ, ಮದನ್ ರಾಜ್, ಮೆಡಿಕಲ್ ನಾಗರಾಜು, ಮಂಜುನಾಥ್, ಮುಖಂಡ ಸಂತೃಪ್ತಿ ಕುಮಾರ್, ಫೈನಾನ್ಸ್ ರಾಜು, ತಾ.ಪಂ.ಮಾಜಿ ಅಧ್ಯಕ್ಷ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ, ಪ.ಪಂ.ಮಾಜಿ ಅಧ್ಯಕ್ಷ ಬಸವಣ್ಣ ಸೇರಿದಂತೆ ಇತರರು ಬಾದಾಮಿ ಮಂಜುಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಪ್ರಾಮಾಣಿಕರು ಹಾಗೂ ನಿಷ್ಠಾವಂತರಿಗೆ ಸ್ಥಾನ ನೀಡಬೇಕೆನ್ನುವ ಒತ್ತಾಯ ಮಾಡಿದರು ಎನ್ನಲಾಗಿದೆ.


    ಪುರಸಭೆಯಲ್ಲಿ ಭ್ರಷ್ಟರನ್ನು ಹೊರತು ಪಡಿಸಿ ಪ್ರಾಮಾಣಿಕರು, ನಿಷ್ಠಾವಂತರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡುವಂತೆ ನಿಯೋಗದೊಂದಿಗೆ ತೆರಳಿದ್ದ ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಮಣಿಕಂಠ ರಾಜ್‌ಗೌಡ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಮನ್ನಣೆ ನೀಡಿದರು ಎನ್ನಲಾಗಿದೆ.


    ಎರಡೂ ತಂಡದ ಸದಸ್ಯರ ಮನವಿ ಆಲಿಸಿದ ಸಿದ್ದರಾಮಯ್ಯ, ಈಗ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ. 26ರಂದು ಚುನಾವಣೆ ಇದ್ದು, 25ಕ್ಕೆ ಎಲ್ಲ ಸದಸ್ಯರು ಸಭೆ ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ತಿಳಿಸಿದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts